ತುಮಕೂರು: ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದು ಮತ್ತು ಅವರಿಗೆ ಅಗತ್ಯವಿರುವ ಆಧುನಿಕ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಸಂಸ್ಥೆಯ ಮೊದಲ ಆದ್ಯತೆಯಾಗಿದೆ. ವೈಸಿರಿ ಕಾಲೇಜಿನ ವಿದ್ಯಾರ್ಥಿಗಳು ಕೇವಲ ಪದವೀಧರರಾಗದೆ, ಉದ್ಯಮಕ್ಕೆ ಪೂರಕವಾದ ನೈಪುಣ್ಯ ಹೊಂದಿದ ವೃತ್ತಿಪರರಾಗಿ ಹೊರಹೊಮ್ಮುತ್ತಿರುವುದು ಸಂತಸ ತಂದಿದೆ ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಎನ್. ಬಿ. ಪ್ರದೀಪ್ ಕುಮಾರ್ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ‘ಎಎಂಡಿ ಸ್ಲಿಂಗ್ಶಾಟ್ ಐಡಿಯಾಥಾನ್ – ಕ್ಯಾಂಪಸ್ ಡೇಸ್’ ಸ್ಪರ್ಧೆಯಲ್ಲಿ ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯ ಪ್ರಥಮ ವರ್ಷದ ಬಿಸಿಎ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.
ನಮ್ಮ ಸಂಸ್ಥೆಯ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಲಲಿತ್ ಡಿ. ಮತ್ತು ಮೋಹಿತ್ ಜೆ. ಗುಜ್ಜರ್ ಅವರು ಕೇವಲ ಶೈಕ್ಷಣಿಕ ಜ್ಞಾನಕ್ಕೆ ಸೀಮಿತವಾಗದೆ, ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ತಮ್ಮ ತಾಂತ್ರಿಕ ಕೌಶಲವನ್ನು ಸಾಬೀತುಪಡಿಸಿರುವುದು ಹೆಮ್ಮೆಯ ವಿಷಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ತಂತ್ರಜ್ಞಾನದಂತಹ ಸುಧಾರಿತ ವಿಷಯಗಳಲ್ಲಿ ಇವರು ತೋರಿರುವ ಪರಿಣತಿ ಅಭಿನಂದನೀಯ ಎಂದು ತಿಳಿಸಿದರು.
ಪೀಕ್ಫ್ಯುಯೆಲ್ ಎಐ ಯೋಜನೆಯನ್ನು ಅತ್ಯಂತ ಕಡಿಮೆ ಗಾತ್ರದ ರೆಪೊಸಿಟರಿಯಲ್ಲಿ (1 ಎಂಬಿಗಿಂತ ಕಡಿಮೆ) ನಿರ್ಮಿಸಿರುವುದು ಇವರ ದಕ್ಷತೆ ಮತ್ತು ನವೀನ ಆಲೋಚನೆಗೆ ಸಾಕ್ಷಿಯಾಗಿದೆ. ಇಂತಹ ಸಂಶೋಧನಾತ್ಮಕ ಮನೋಭಾವವು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಯೋಜನೆಯ ವಿಶೇಷತೆ: `ಪೀಕ್ಫ್ಯುಯೆಲ್ ಎಐ’
ಈ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಯೋಜನೆಯು ವ್ಯಕ್ತಿಯ ದೇಹದ ಗುಣಲಕ್ಷಣಗಳಿಗೆ ಅನುಗುಣವಾಗಿ ವೈಯಕ್ತಿಕ ಆರೋಗ್ಯ ಮತ್ತು ಪೌಷ್ಟಿಕಾಂಶದ ಆಹಾರವನ್ನು ಶಿಫಾರಸು ಮಾಡುವ ಕೃತಕ ಬುದ್ಧಿಮತ್ತೆ ಆಧಾರಿತ ವೇದಿಕೆಯಾಗಿದೆ. ಇದನ್ನು ಗಿಟ್ಹಬ್ ಮತ್ತು ಗೂಗಲ್ ಕ್ಲೌಡ್ ಪ್ಲಾಟ್ಫಾರ್ಮ್ ಮೂಲಕ ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಹುಮೇರಾ ಪರ್ವೀನ್, ಬಿಸಿಎ ವಿಭಾಗದ ಸಂಯೋಜಕರಾದ ಚೈತ್ರ ಎಸ್ ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
– ಕೆ.ಬಿ. ಚಂದ್ರಚುಡ
