ತುಮಕೂರು:ನಮ್ಮ ದೇಶದಲ್ಲಿ ಬೇರೆಲ್ಲಾ ಕಾನೂನುಗಳಿಗಿಂತಲೂ ಮಾದಕವಸ್ತುಗಳ ಮೇಲಿನ ಕಾನೂನು ಬಲಿಷ್ಠವಾಗಿದೆ.ಅದನ್ನು ಸೂಕ್ತವಾಗಿ ಪಾಲಿಸುವ ಮೂಲಕ ಮಾದಕ ವಸ್ತುಗಳ ವ್ಯಸನ ಯುವಜನಾಂಗವನ್ನು ಕಾಡದಂತೆ ಎಚ್ಚರವಹಿಸಬಹುದು ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಹೇಳಿದರು.
ಅವರು ವಿದ್ಯಾನಿಧಿ ಕಾಲೇಜಿನಲ್ಲಿ ತುಮಕೂರು ಜಿಲ್ಲಾಡಳಿತ, ಪೋಲೀಸ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಾದಕವಸ್ತುಗಳ ವ್ಯಸನ ಮತ್ತು ಕಳ್ಳಸಾಗಣೆ ವಿರೋಧಿ ದಿನ- 2026ರನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಸಂಸ್ಥೆಯಲ್ಲಿ ಮಾದಕವಸ್ತುಗಳ ವಿರುದ್ಧ ಜಾಗೃತಿಯನ್ನು ನೀಡುತ್ತೇವೆ. ಯಾವುದೋ ಆಮಿಷಕ್ಕೆ ಒಳಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳದಂತೆ ಎಚ್ಚರವಹಿಸುತ್ತೇವೆ. ಈ ನಿಟ್ಟಿನಲ್ಲಿ ಸರ್ಕಾರವು ಬೃಹತ್ ಆಂದೋಲನವನ್ನು ಕೈಗೊಂಡಿರುವುದು ಸ್ವಾಗತಾರ್ಹ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಪುರುಷೋತ್ತಮ್ ಮಾದಕವಸ್ತುಗಳನ್ನು ಬೇಡ ಎನ್ನುವ ಧೈರ್ಯ ವಿದ್ಯಾರ್ಥಿಗಳಲ್ಲಿ ಇರಬೇಕು. ಸ್ನೇಹಿತರನ್ನೋ ಮತ್ತಾರನ್ನೋ ನೋಡಿ ತಾವೂ ಅದರ ಅಮಲಿಗೆ ಬಿದ್ದರೆ ಬದುಕು ಸರ್ವನಾಶವಾಗುತ್ತದೆ.
ಡ್ರಗ್ ಜಾಲವನ್ನು ತಡೆಯಲು ಸರಕಾರ, ಪೋಲೀಸ್ ಇಲಾಖೆ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಇಂತಹ ಜಾಲಗಳ ಬಗ್ಗೆ ಯಾರಾದರೂ ಮಾತನಾಡುವುದು ತಿಳಿದರೆ ಕ್ಯೂಆರ್ ಕೋಡ್ ಮೂಲಕ ಇಲಾಖೆಗೆ ತಿಳಿಸಬೇಕು. ಮಾಹಿತಿ ಕೊಟ್ಟವರ ಹೆಸರು, ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದರು.
ತುಮಕೂರು ಜಿಲ್ಲಾ ಪೋಲೀಶ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ವಿದ್ಯಾನಿಧಿ ಪ್ರಾಂಶುಪಾಲ ಸಿದ್ಧೇಶ್ವರಸ್ವಾಮಿ.ಎಸ್.ಆರ್, ಸುಬ್ರಹ್ಮಣ್ಯ.ಡಿ.ಕೆ. ಮತ್ತಿತರು ಉಪಸ್ಥಿತರಿದ್ದರು.
ಉಪನ್ಯಾಸಕಿ ಶ್ರೀಗೌರಿ ಪ್ರಾರ್ಥಿಸಿದರು. ಸುನಿಲ್ ಸ್ವಾಗತಿಸಿದರು. ಡಾ.ಆರತಿಪಟ್ರಮೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
-ಚಂದ್ರಚೂಡ ಕೆ.ಬಿ.
