ಬೆಂಗಳೂರು: ನಗರದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಉಚಿತ ಶ್ವಾನ ದತ್ತು ಸ್ವೀಕಾರ ಹಾಗೂ ಲಸಿಕಾ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Jayanagar Canine Squad ಮತ್ತು Shivashakti Abhivrudhi Trust ಸಹಯೋಗದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಭಾನುವಾರ ಈ ಶಿಬಿರವನ್ನು ಆಯೋಜಿಸಿತ್ತು.
ಆಶ್ರಯ ರಹಿತ ಪ್ರಾಣಿಗಳಿಗೆ ಹೊಸ ಬದುಕು
ಶಿಬಿರದಲ್ಲಿ ಆಶ್ರಯವಿಲ್ಲದೆ ಇದ್ದ ಒಟ್ಟು 10 ನಾಯಿಮರಿ ಹಾಗೂ ಒಂದು ಬೆಕ್ಕಿನ ಮರಿಗೆ ಪ್ರಾಣಿ ಪ್ರೇಮಿಗಳು ದತ್ತು ಪಡೆದು ಹೊಸ ಮನೆ ನೀಡಿದರು. ಈ ಮೂಲಕ ಹಲವು ನಿರಾಶ್ರಿತ ಪ್ರಾಣಿಗಳಿಗೆ ಸುರಕ್ಷಿತ ಬದುಕಿನ ಅವಕಾಶ ದೊರೆಯಿತು.
ಉಚಿತ ಲಸಿಕಾ ಕಾರ್ಯಕ್ರಮಕ್ಕೂ ಮೆಚ್ಚುಗೆ
ಶ್ವಾನಗಳ ಆರೋಗ್ಯ ರಕ್ಷಣೆಯ ಉದ್ದೇಶದಿಂದ ನಡೆದ ಉಚಿತ ಲಸಿಕಾ ಕಾರ್ಯಕ್ರಮಕ್ಕೂ ಭರ್ಜರಿ ಸ್ಪಂದನೆ ಸಿಕ್ಕಿತು.
ಶಿಬಿರದಲ್ಲಿ:
- 20 ಶ್ವಾನಗಳಿಗೆ ಕಂಬೈನ್ಡ್ ವ್ಯಾಕ್ಸಿನ್
- 30 ಶ್ವಾನಗಳಿಗೆ ಆಂಟಿ-ರೇಬೀಸ್ ಲಸಿಕೆ
ನೀಡಲಾಯಿತು.
“ಪ್ರಾಣಿಗಳ ರಕ್ಷಣೆ ಮುಖ್ಯ ಉದ್ದೇಶ”
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಶ್ರೀನಾಥ್ ಮಾತನಾಡಿ, “ಬೀದಿ ಬದಿಯ ಮತ್ತು ಆಶ್ರಯ ರಹಿತ ಪ್ರಾಣಿಗಳಿಗೆ ಸುರಕ್ಷಿತ ಆಸರೆ ಕಲ್ಪಿಸುವುದು ಹಾಗೂ ಶ್ವಾನಗಳ ಆರೋಗ್ಯ ಕಾಪಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ” ಎಂದು ಹೇಳಿದರು.
ಮುಂದಿನ ದಿನಗಳಲ್ಲೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.
ಮಳೆಗಾಲಕ್ಕೆ ನಗರ ಪಾಲಿಕೆ ಸಜ್ಜು
ಇದೇ ವೇಳೆ ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡಿದ ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್, ಪ್ರವಾಹ, ಚರಂಡಿ ಬ್ಲಾಕ್, ನಿಂತ ನೀರು ತೆರವು ಹಾಗೂ ಬಿದ್ದ ಮರಗಳ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲು ವಿವಿಧ ವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಅಗತ್ಯ ಸಿಬ್ಬಂದಿ, ವಾಹನ ಮತ್ತು ಉಪಕರಣಗಳೊಂದಿಗೆ ತಂಡಗಳು ಸಜ್ಜಾಗಿವೆ ಎಂದು ಅವರು ಮಾಹಿತಿ ನೀಡಿದರು.
