ನವದೆಹಲಿ: ದೇಶದಾದ್ಯಂತ ನಾಪತ್ತೆಯಾಗುವ ಮಕ್ಕಳು ಹಾಗೂ ವ್ಯಕ್ತಿಗಳ ಪ್ರಕರಣಗಳಲ್ಲಿ ಕಡ್ಡಾಯವಾಗಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ಆರ್. ಮಹಾದೇವನ್ ಅವರ ಪೀಠ ಮೇ 22, 2026ರಂದು ಈ ಆದೇಶ ನೀಡಿದ್ದು, ನಾಪತ್ತೆ ಮಕ್ಕಳು, ಅಪಹರಣ ಪ್ರಕರಣಗಳು, ಮಾನವ ಕಳ್ಳಸಾಗಣೆ ತಡೆ ಘಟಕಗಳು ಹಾಗೂ ರಾಷ್ಟ್ರೀಯ ಮಾಹಿತಿ ಜಾಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ದೇಶನಗಳನ್ನು ನೀಡಿದೆ.
ತಕ್ಷಣ ಎಫ್ಐಆರ್ ದಾಖಲೆಗೆ ಸೂಚನೆ
ಯಾವುದೇ ಮಗು ನಾಪತ್ತೆಯಾದ ದೂರು ಬಂದ ತಕ್ಷಣ ಪೂರ್ವ ತನಿಖೆ ನಡೆಸದೆ ನೇರವಾಗಿ ಎಫ್ಐಆರ್ ದಾಖಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಎಫ್ಐಆರ್ನಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ಅಪಹರಣ ಸಂಬಂಧಿತ ಕಲಂಗಳನ್ನು ಸೇರಿಸಬೇಕು ಎಂದು ಸೂಚಿಸಿದೆ.
ಮಕ್ಕಳ ನಾಪತ್ತೆಯನ್ನು ಅಪಹರಣವೆಂದು ಪರಿಗಣನೆ
ಮಗು ನಾಪತ್ತೆಯಾದರೆ ಆರಂಭದಲ್ಲೇ ಅದನ್ನು ಅಪಹರಣ ಅಥವಾ ಕಿಡ್ನಾಪ್ ಪ್ರಕರಣವೆಂದು ಪರಿಗಣಿಸಿ ತನಿಖೆ ಆರಂಭಿಸಬೇಕು ಎಂದು ಕೋರ್ಟ್ ತಿಳಿಸಿದೆ. ಪಾಲಕರು ಸ್ವತಂತ್ರವಾಗಿ ಹುಡುಕಾಟ ನಡೆಸುವವರೆಗೆ ಕಾಯಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ದೇಶದಲ್ಲಿ ಸುಮಾರು 47 ಸಾವಿರಕ್ಕೂ ಹೆಚ್ಚು ಮಕ್ಕಳು ಇನ್ನೂ ಪತ್ತೆಯಾಗದೆ ಇರುವ ಗಂಭೀರ ಸಮಸ್ಯೆಯನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಮಾನವ ಕಳ್ಳಸಾಗಣೆ ತಡೆ ಘಟಕಗಳಿಗೆ ಬಲ
ದೇಶದ ಎಲ್ಲಾ ಆಂಟಿ-ಹ್ಯೂಮನ್ ಟ್ರಾಫಿಕಿಂಗ್ ಯುನಿಟ್ಗಳು (ಎಎಚ್ಟಿಯು) ನಾಲ್ಕು ವಾರಗಳೊಳಗೆ ಸಂಪೂರ್ಣ ಕಾರ್ಯನಿರ್ವಹಣೆಗೆ ಬರಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಮಾನವ ಕಳ್ಳಸಾಗಣೆ, ನಾಪತ್ತೆ ಮಕ್ಕಳು ಹಾಗೂ ಮಹಿಳೆಯರ ಪ್ರಕರಣಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ದೇಶದ ಎಲ್ಲಾ ಪೊಲೀಸ್ ಠಾಣೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಡೇಟಾ ಗ್ರಿಡ್ ನಿರ್ಮಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಲಾಗಿದೆ.
ಏಕರೂಪ ಕಾರ್ಯವಿಧಾನ ರೂಪಿಸಲು ಸಮಿತಿ
ನಾಪತ್ತೆ ಮಕ್ಕಳ ಪ್ರಕರಣಗಳ ತನಿಖೆಗೆ ದೇಶವ್ಯಾಪಿ ಏಕರೂಪದ ಕಾರ್ಯವಿಧಾನ (ಎಸ್ಒಪಿ) ರೂಪಿಸಲು ನಿವೃತ್ತ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
ಪತ್ತೆಯಾದ ಮಕ್ಕಳ ಹಾಗೂ ವ್ಯಕ್ತಿಗಳ ಆಧಾರ್ ಪರಿಶೀಲನೆ ನಡೆಸುವುದು ಅಥವಾ ಅಗತ್ಯವಿದ್ದರೆ ಆಧಾರ್ ಕಾರ್ಡ್ ನೀಡುವಂತೆ ಸಹ ಕೋರ್ಟ್ ಸೂಚಿಸಿದೆ.
