ತುಮಕೂರು: ನಮ್ಮ ಜಿಲ್ಲೆಗೆ ಹಂಚಿಕೆಆಗಿರುವ ಹೇಮಾವತಿ ನೀರನ್ನು ಉಳಿಸಿಕೊಳ್ಳಲು, ಜಿಲ್ಲೆಯ ಜನರ ಪಾಲಿಕೆ ಮಾರಕವಾಗುವ ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ಯೋಜನೆ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು. ಕೆಲವು ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಜಿಲ್ಲೆಯ ನೀರಾವರಿ ಯೋಜನೆಗಳನ್ನು ವಿರೂಪಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸ್ಪ್ರೆಸ್ ಕೆನಾಲ್ ಯೋಜನೆ ಸಾಕಾರಗೊಳ್ಳಲು ಅವಕಾಶ ಮಾಡಿಕೊಟ್ಟರೆ ಮುಂದೆ ನಮ್ಮ ಪಾಲಿನ ನೀರನ್ನು ಕಳೆದುಕೊಂಡು ಹಾಹಾಕಾರ ಪರಿಸ್ಥಿತಿ ಎದುರಿಸಬೇಕಾಗುತ್ತದೆ.ಈಗಿನಿಂದಲೇ ಎಚ್ಚೆತ್ತುಕೊಂಡು ಹೋರಾಟದ ಮೂಲಕ ನೀರು ಉಳಿಸಿಕೊಳ್ಳಬೇಕು ಎಂದರು.
ನೀರಾವರಿ ತಜ್ಞ ಸಂಪಿಗೆ ಜಗದೀಶ್ ಮಾತನಾಡಿ, ತುಮಕೂರು ಜಿಲ್ಲೆಯ ಜನರಿಗೆ ಹೇಮಾವತಿ ನೀರು ಜೀವನಾಡಿ, ನಮಗೆ ಹಂಚಿಕೆಯಾಗಿರುವ ನೀರನ್ನು ಉಳಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಲು ಹೋರಾಟವೇ ಮುಂದಿನ ದಾರಿ.ಇದಕ್ಕಾಗಿಎಲ್ಲರೂ ಪಕ್ಷ ಬೇಧಮರೆತು ಹೋರಾಟ ನಡೆಸಬೇಕು.ನಮ್ಮ ನೀರು, ನಮ್ಮ ಹಕ್ಕು ಪ್ರತಿಪಾದಿಸಬೇಕು ಎಂದು ಮನವಿ ಮಾಡಿದರು.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ಕೆನಾಲ್ ಯೋಜನೆ ಸಾಕಾರಗೊಂಡರೆ ಅದು ತುಮಕೂರು ಜಿಲ್ಲೆಯ ಜನರ ಪಾಲಿಗೆ ಮರಣಶಾಸನವಾಗಲಿದೆ. ಜಿಲ್ಲೆಯಲ್ಲಿ ಕಾಲುವೆಗಳು ಆಗುತ್ತಿದ್ದವೇ ಹೊರತು ಇದೂವರೆಗೆ ಅಚ್ಚುಕಟ್ಟು ಘೋಷಣೆ ಮಾಡಿಲ್ಲ. ಹೀಗಾಗಿ ಜಿಲ್ಲೆಯ ನೀರಿನ ಪ್ರಮಾಣ ಕಳೆದುಕೊಳ್ಳಬೇಕಾಯಿತು.ಈಗ ಉಳಿದಿರುವುದು ಒಂದೇ ಮಾರ್ಗ: ಅದು ಜಿಲ್ಲೆಗೆ ಹಂಚಿಕೆ ಆಗಿರುವ ನೀರನ್ನು ಉಳಿಸಿಕೊಳ್ಳುವುದು. ಅದಕ್ಕಾಗಿ ಹೋರಾಟವೇ ಉಳಿದಿರುವ ಏಕೈಕ ಮಾರ್ಗ ಎಂದು ಸಂಪಿಗೆ ಜಗದೀಶ್ ಹೇಳಿದರು.
ಪಂಚಾಕ್ಷರಯ್ಯ, ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಧನಿಯಾಕುಮಾರ್, ಹೆಚ್.ಡಿ.ರಾಮಲಿಂಗಯ್ಯ, ಡಾ.ಆರ್.ಮಂಜುನಾಥ್, ಗೋವಿಂದರಾಜು, ಎ.ಆರ್.ಶ್ರೀಕಾಂತ್, ತರಕಾರಿಮಹೇಶ್, ಆಟೋನವೀನ್, ಕೆ.ಹರೀಶ್, ಎನ್.ಗಣೇಶ್, ಮದನ್ಸಿಂಗ್, ವಿನಯ್ಅದೈತ್ ಮೊದಲಾದವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
