ಬೆಂಗಳೂರು: ಜಪ ಎಂದರೆ ಕೇವಲ ಮಂತ್ರ ಪಠಣವಲ್ಲ, ಅದು ಭಗವಂತನೊಂದಿಗೆ ಭಾವನಾತ್ಮಕವಾಗಿ ಸಂಪರ್ಕ ಸಾಧಿಸುವ ಪವಿತ್ರ ಪ್ರಕ್ರಿಯೆ. ಪ್ರಾಚೀನ ಕೃತ, ತ್ರೇತಾ, ದ್ವಾಪರ ಯುಗಗಳಲ್ಲಿ ಭಗವಂತನನ್ನು ಒಲಿಸಿಕೊಳ್ಳಲು ಅಖಂಡ ಭಜನೆ, ತಪಸ್ಸು, ದೀರ್ಘಕಾಲದ ಯಜ್ಞ-ಯಾಗಾದಿಗಳು ಬೇಕಾಗಿದ್ದವು. ಆದರೆ ಕಲಿಯುಗದಲ್ಲಿ ಜಪಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿದೆ. ಕೇವಲ ಒಂದು ಗಂಟೆಯ ಜಪದಿಂದಲೂ ದೈವಿಕ ಅನುಭೂತಿ ಪಡೆಯಲು ಸಾಧ್ಯ ಎಂದು ಶಾಸ್ತ್ರಗಳು ಹೇಳುತ್ತವೆ.
ಜಪ ಮಾಡುವಾಗ ಮಾಲೆಗಳನ್ನು ಬಳಸುವುದು ಏಕಾಗ್ರತೆ ಮತ್ತು ನಂಬಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಲಿಯುಗದಲ್ಲಿ ಜಪಕ್ಕೆ ಪ್ರಾಶಸ್ತ್ಯವಿರುವ ನಾಲ್ಕು ಪ್ರಮುಖ ಮಾಲೆಗಳು ಮತ್ತು ಅವುಗಳ ಮಹತ್ವ ಹೀಗಿದೆ:
1. ರುದ್ರಾಕ್ಷಿ ಮಾಲೆ
ಇದು ಸಾಕ್ಷಾತ್ ಶಿವನ ನೇರ ಅನುಗ್ರಹವನ್ನು ನೀಡುತ್ತದೆ. ರುದ್ರಾಕ್ಷಿ ಮಾಲೆಯನ್ನು ಧರಿಸಿ ಜಪ ಮಾಡುವುದರಿಂದ ಅಕಾಲ ಮೃತ್ಯು ಭೀತಿ ದೂರವಾಗುತ್ತದೆ. ಸಕಲ ಇಷ್ಟಾರ್ಥಗಳನ್ನು ಪೂರೈಸುವ ಶಿವನ ಕೃಪೆಗೆ ಪಾತ್ರರಾಗಲು ಇದು ಉತ್ತಮ. ಆದರೆ ಮಾಲೆ ಧರಿಸುವುದರ ಜೊತೆಗೆ ನಮ್ಮ ಕರ್ಮವೂ ಶುದ್ಧವಾಗಿರಬೇಕು.
2. ಸ್ಪಟಿಕ ಮಾಲೆ
ಸ್ಪಟಿಕ ಮಾಲೆಯು ಸಾಧಕನಿಗೆ ವಿಶೇಷ ಶಕ್ತಿಗಳನ್ನು ನೀಡುತ್ತದೆ. ಇದನ್ನು ಧರಿಸುವುದರಿಂದ ಎದುರಿನ ವ್ಯಕ್ತಿಯ ಮನಸ್ಸನ್ನು ಅರಿಯುವ ಶಕ್ತಿ ಬರುತ್ತದೆ ಮತ್ತು ತಾಂತ್ರಿಕವಾಗಿ ಒಬ್ಬ ವ್ಯಕ್ತಿಯಲ್ಲಿ ಅತಿ ವಿಶೇಷವಾದ ದೈವಿಕ ಶಕ್ತಿಗಳು ಪ್ರಕಟಗೊಳ್ಳುತ್ತವೆ.
3. ತುಳಸಿ ಮಾಲೆ
ವಿಷ್ಣುವಿಗೆ ಅತ್ಯಂತ ಪ್ರಿಯವಾದ ಈ ಮಾಲೆಯನ್ನು ವಯಸ್ಸಿನ ಭೇದವಿಲ್ಲದೆ ಎಲ್ಲಾ ವರ್ಗದವರೂ ಧರಿಸಬಹುದು. ತುಳಸಿ ಮಾಲೆಯು ವಿಷ್ಣುವಿನ ಕೃಪೆಯನ್ನು ತಂದುಕೊಟ್ಟು, ಜೀವನ ನಿರ್ವಹಣೆಗೆ ಬೇಕಾದ ಸನ್ಮಾರ್ಗದ ಶಕ್ತಿಯನ್ನು ನೀಡುತ್ತದೆ. ಪದ್ಮಪುರಾಣದ ಪ್ರಕಾರ, ತುಳಸಿ ಮಾಲೆಯನ್ನು ಕನಿಷ್ಠ 108 ದಿನಗಳ ಕಾಲ ಕುತ್ತಿಗೆಯಲ್ಲಿ ಧರಿಸುವುದರಿಂದ ಅಶ್ವಮೇಧ ಯಜ್ಞ ಮಾಡಿದ ಪುಣ್ಯ ಫಲ ಲಭಿಸುತ್ತದೆ.
4. ಕಮಲಮಣಿ ಮಾಲೆ (ಕಮಲ ಬೀಜದ ಮಾಲೆ)
ಇದು ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ಮಾಲೆಯಾಗಿದೆ. ಈ ಮಾಲೆಯಿಂದ ಜಪ ಮಾಡುವುದರಿಂದ ಶತ್ರುಗಳು ನಾಶವಾಗುತ್ತಾರೆ, ದೃಷ್ಟಿ ದೋಷ ಹಾಗೂ ಮಾಟ-ಮಂತ್ರದಂತಹ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದರೊಂದಿಗೆ ಮಹಾಲಕ್ಷ್ಮಿಯ ಸಂಪೂರ್ಣ ಕೃಪೆ ಲಭಿಸಿ, ದಾರಿದ್ರ್ಯ ನಾಶವಾಗಿ, ಸಾಲದ ಬಾಧೆಯಿಂದ ಮುಕ್ತಿ ಸಿಗುತ್ತದೆ.
ಗಮನಿಸಿ: ಯಾವುದೇ ಮಾಲೆಯನ್ನು ಕೇವಲ ಶೋಕಿಗಾಗಿ ಅಥವಾ ಪ್ರದರ್ಶನಕ್ಕಾಗಿ ಧರಿಸಬಾರದು. ಮಾಲೆ ಧರಿಸಿದಾಗ ಮನಸ್ಸು ಭಗವಂತನ ಕಡೆಗೆ ತಿರುಗಬೇಕು. ಬ್ರಾಹ್ಮಿ ಮುಹೂರ್ತ, ಅಭಿಜಿನ್ ಮುಹೂರ್ತ, ಗೋಧೂಳಿ ಮುಹೂರ್ತದಂತಹ ಶುಭ ಸಮಯಗಳಲ್ಲಿ ಪ್ರತಿದಿನ ಕನಿಷ್ಠ ಐದು ನಿಮಿಷಗಳ ಕಾಲ ಜಪ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪಗಳು ನಾಶವಾಗುತ್ತವೆ.
