ತುಮಕೂರು: ನಗರದ ಪ್ರೆಸ್ ಕ್ಲಬ್ ಆವರಣದ ಆಲದಮರದ ಪಾರ್ಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾಪಿಸಿರುವ ದತ್ತಿ ನಿಧಿಯಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೈತರ ಮಕ್ಕಳಾದ ತಿಪಟೂರಿನ ಹರ್ಷಿಕ ಮತ್ತು ಮಧುಗಿರಿಯ ಪಲ್ಲವಿ ಇವರಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ,ರೈತರು ಹಾಗೂ ರೈತರ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಕಸಾಪದಲ್ಲಿ ಒಂದು ದತ್ತಿ ನಿಧಿ ಸ್ಥಾಪಿಸಿದ್ದೇವೆ.ಅಲ್ಲದೆ ಇಂದಿನ ಪ್ರತಿಭಾ ಪುರಸ್ಕಾರದ ಜೊತೆಗೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಪಶುಸಂಗೋಪನೆ, ಹೈನುಗಾರಿಕೆ, ಸಹಕಾರ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಮೂಲಕ ರೈತರು ಮತ್ತು ರೈತರ ಮಕ್ಕಳಿಗೆ ಇರುವ ಸರಕಾರದ ಸವಲತ್ತುಗಳು ಹಾಗೂ ಅವುಗಳನ್ನು ಪಡೆಯುವ ವಿಧಾನಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹಿರಿಯ ಅಧಿಕಾರಿಗಳ ಮೂಲಕ ಸಮಗ್ರ ಮಾಹಿತಿ ದೊರಕಿಸುವ ಕೆಲಸವನ್ನು ಹಮ್ಮಿಕೊಳ್ಳಲಾಗಿದೆ.ನಮ್ಮ ಮಕ್ಕಳು ಸಹ ಹೆಮ್ಮೆಯಿಂದ ನಾವು ರೈತರ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ಕಾಲ ಬರಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ಕೃಷಿ ಇಂದು ಲಾಭದಾಯಕ ಕೆಲಸವಾಗಿ ಉಳಿದಿಲ್ಲ.ಹಾಗಿದ್ದೂ ನಾವು ಅನುಭವಿಸಿದ ನೋವು ಸಂಕಟಗಳನ್ನು ನಮ್ಮ ಮಕ್ಕಳು ಅನುಭವಿಸುವುದು ಬೇಡ ಎಂದು ನಿಮ್ಮನ್ನು ಒಳ್ಳೆಯ ಶಾಲೆ, ಕಾಲೇಜುಗಳಿಗೆ ಸೇರಿಸುತ್ತಾರೆ.ಹಾಗಾಗಿ ಮೊದಲು ರೈತರ ಮಕ್ಕಳಿಗೆ ತಮ್ಮ ಪೋಷಕರು ತಮಗಾಗಿ ಎಷ್ಟು ಕಷ್ಟ ಪಡುತ್ತಾರೆ ಎಂಬ ಅರಿವು ಬರಬೇಕು. ಜೊತೆಗೆ ಇತರೆ ಮಕ್ಕಳಿಗೂ, ರೈತರ ಮಕ್ಕಳಿಗೂ ಇರುವ ವ್ಯತ್ಯಾಸಗಳೇನು? ರೈತರು ಮಕ್ಕಳು ಪ್ರತಿದಿನ ದೈನಂದಿನ ಕೆಲಸದ ಜೊತೆಗೆ, ತಂದೆ ತಾಯಿಯರಿಗೆ ಸಹಾಯ ಮಾಡಿ,ಬಸ್ ಹಿಡಿದು ಶಾಲೆ, ಕಾಲೇಜಿಗೆ ಹೋಗಿ ಇತರೆ ಮಕ್ಕಳಂತೆ ಕಲಿಯಬೇಕಾಗುತ್ತದೆ. ಈ ಎಲ್ಲಾ ಅಂಶಗಳನ್ನು ಜನತೆ ತಿಳಿಸುವುದೇ ಇದರ ಹಿಂದಿನ ಉದ್ದೇಶವಾಗಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.

ರಾಜ್ಯದಲ್ಲಿ 70-80ರ ದಶಕದಲ್ಲಿ ರೈತ ಸಂಘ ಗಟ್ಟಿಯಾಗಿತ್ತು.ಪ್ರೊ.ನಂಜುಂಡ ಸಮಿ, ಎಂ.ಡಿ.ಸುಂದರೇಶನ್ ಅವರಂತಹ ನಾಯಕರು ಒಂದು ಕರೆ ಕೊಟ್ಟರೆ ಇಡೀ ರಾಜ್ಯದ ರೈತರು ಹಿಂದು,ಮುಂದು ನೋಡದೆ ಅವರ ಜೊತೆಗೆ ನಿಲ್ಲುತ್ತಿದ್ದರೂ, ಆದರೆ ಈಗ ರೈತ ಸಂಘ ತನ್ನ ಶಕ್ತಿ ಕಳೆದುಕೊಂಡಿದೆ.
ಮೊದಲಿನ ಆ ಗತ್ತು, ಗಮ್ಮತ್ತು ರೈತ ಸಂಘಕ್ಕೆ ಬರಬೇಕೆಂದರೆ,ರೈತ ಸಂಘದ ಪದಾಧಿಕಾರಿಗಳು ಯಾವುದೇ ಲಾಭಿಗೆ ಬಲಿಯಾಗದೆ ರೈತರ ಪರ ನಿಂತಾಗ ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೈತ ಸಂಘ ಮತ್ತಷ್ಟು ಬಲವಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿದರು,ಕೃಷಿ ಇಲಾಖೆಯ ಎಡಿಎ ದಿವಾಕರ್, ತೋಟಗಾರಿಕೆಯ ಎಡಿಎಚ್ ಸ್ವಾಮಿ, ಪಶುಸಂಗೋಪನಾ ಇಲಾಖೆಯ ಡಾ.ವಿಜಯಲಕ್ಷ್ಮಿ, ಕೆವಿಕೆ ಕೊನೆಹಳ್ಳಿಯ ಡಾ.ಶಂಕರ್, ಜಿಕೆವಿಕೆಯ ಹಿರೇಹಳ್ಳಿಯ ಡಾ.ಸೋಮಶೇಖರ್, ರೇಷ್ಮೆ ಇಲಾಖೆಯ ವಿಸ್ತರಣಾಧಿಕಾರಿ ಪೂಜಾ, ಸಾವಯುವ ಕೃಷಿ ಮತ್ತು ಸಿರಿಧಾನ್ಯದ ಕುರಿತು ನಾಗೇನಹಳ್ಳಿ ನಾಗಣ್ಣ ಇವರುಗಳು ತಮ್ಮ ಇಲಾಖೆಯ ಅಡಿಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದಲ್ಲದೆ, ರೈತರೊಂದಿಗೆ ಸಂವಾದ ನಡೆಸಿದರು.
ವೇದಿಕೆಯಲ್ಲಿ ಮಾಜಿ ಶಾಸಕರಾದ ಗಂಗಹನುಮಯ್ಯ, ಎಲ್.ಲಕ್ಕಪ್ಪ,ರೈತ ಸಂಘದ ಜಿ.ಎಸ್.ಶಂಕರಪ್ಪ, ಚಿಕ್ಕಬೋರೇಗೌಡ, ಲೋಕೇಶ್,ಜಿ.ಪಂ.ಸದಸ್ಯ ಕೆಂಚಮಾರಯ್ಯ, ಪ್ರೊ.ಕೆ.ಚಂದ್ರಣ್ಣ,ಡಿಸಿಸಿ ಮಹಿಳಾ ಘಟಕದ ಸುಮತಿ, ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಡಿ.ಎನ್.ಯೋಗೀಶ್ವರಪ್ಪ, ಡಾ.ಸಣ್ಣಹೊನ್ನಯ್ಯ ಕಂಟಲಗೆರೆ,ನಟರಾಜಶೆಟ್ಟಿ ಸೇರಿದಂತೆ ಹಲವು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
