ತುಮಕೂರು: ದೇಶದ ಜನರಿಗೆ ಅನ್ನ ಹಾಕುವ ರೈತರು,ಹಗಲು ರಾತ್ರಿ ದೇಶದ ಗಡಿ ಕಾದು ನಮ್ಮನ್ನು ಸದಾ ಶತೃಗಳಿಂದ ಕಾಪಾಡುತ್ತಿರುವ ವೀರ ಸೈನಿಕರು ಪ್ರಾತಃಸ್ಮರಣೀಯರು,ರೈತರು,ಸೈನಿಕರ ಬಗ್ಗೆ ಎಲ್ಲರೂ ಅಭಿಮಾನ ಮತ್ತು ಗೌರವ ಸಲ್ಲಿಸಬೇಕು ಅಂತಹ ಸಂಸ್ಕಾರ ನಮಗೆ ಮತ್ತು ಇಂದಿನ ಮಕ್ಕಳಿಗೆ ಬರಬೇಕು,ಸ್ವಾತಂತ್ರö್ಯಕ್ಕಾಗಿ ಹೋರಾಟ ಮಾಡಿ ಲಕ್ಷಾಂತರ ಜನ ವೀರಮರಣವನ್ನು ಹೊಂದಿದ್ದಾರೆ,ಗಡಿ ಕಾಯುತ್ತಾ ಶತೃ ರಾಷ್ಟ್ರದ ಗುಂಡಿಗೆ ಬಲಿಯಾದ ವೀರ ಯೋಧರನ್ನು ನಾವು ಪ್ರತಿ ದಿನ ಸ್ಮರಿಸಬೇಕು ಎಂದು ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘ(ರಿ)ನ ಅಧ್ಯಕ್ಷರಾದ ಟಿ.ಎಸ್.ಮೋಹನ್ ಕುಮಾರ್ ರವರು ತಿಳಿಸಿದರು.
ಅವರು ಜಯನಗರದ ಬನಶಂಕರಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ 80ನೇ ಸ್ವಾಂತಂತ್ರ್ಯ ದಿನಾಚರಣೆ ಮತ್ತು ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೆ.ಜಿ.ರಂಗಸ್ವಾಮಿರವರು ನಮ್ಮ ದೇಶದ ಆಸ್ತಿ ರೈತ ಮತ್ತು ಸೈನಿಕ,ಸೈನಿಕರಿಗೆ ಸರ್ಕಾರ ವಿಶಾಲ ಹೃದಯದಿಂದ ಕೊಡುಗೆಗಳನ್ನು ನೀಡಬೇಕು,ಸದಾ ಕಾಲ ಶತೃಗಳಿಂದ ನಮ್ಮನ್ನು ಕಾಪಾಡುತ್ತಿರುವ ಸೈನಿಕರು ನಮ್ಮ ನಿಜವಾದ ಹೀರೋಗಳು ಎಂದು ತಿಳಿಸಿದರು.

ನಿರ್ಭಯ ಮಹಿಳಾ ಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಶ್ರೀಮತಿ ಸುನಂದಮ್ಮನವರು ಮಾತನಾಡುತ್ತಾ ಕೊರೆಯುವ ಚಳಿಯಲ್ಲಿ ದಿನದ 24 ಗಂಟೆಗಳ ಕಾಲ ಎಚ್ಚರವಿದ್ದು ದೇಶದ ಗಡಿ ಕಾಯುವ ಸೈನಿಕರು ನಮ್ಮ ಆಸ್ತಿ,ಅವರ ನಿಸ್ವಾರ್ಥಸೇವೆ,ಸೇವಾ ಮನೋಭಾವನೆ ನಮ್ಮ ಯುವಜನರಿಗೆ ಸ್ಫೂರ್ತಿ,ತಾಯಿಗೆ ಕೊಡುವ ಗೌರವವನ್ನು ನಮ್ಮ ಸೈನಿಕರಿಗೆ ಕೊಡಿ,ದೇಶದ ಯುವಕರು,ಯುವತಿಯರು ಸೈನ್ಯಕ್ಕೆ ಮತ್ತು ಪೋಲೀಸ್ ಇಲಾಖೆಗೆ ಹೆಚ್ಚಾಗಿ ಸೇರಿ ದೇಶ ಸೇವೆ ಮಾಡಿ ಎಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕರಾದ ಜಿ.ಆರ್.ಸಿದ್ಧಗಂಗಯ್ಯನವರು ರಾಜ್ಯದ ಯುವಕರು ಹೆಚ್ಚಾಗಿ ಸೈನ್ಯಕ್ಕೆ ಸೇರಬೇಕು,ತುಮಕೂರಿನಲ್ಲಿ ನಮ್ಮ ಮಾಜಿ ಸೈನಿಕರ ಸಂಘದಿಂದ 3 ತಿಂಗಳುಗಳ ಕಾಲ ಊಟ,ವಸತಿ ಸೇರಿದಂತೆ ತರಬೇತಿ ನೀಡುತ್ತಿದ್ದೇವೆ ಯುವಕರು,ಯುವತಿಯವರು ಇದನ್ನು ಸದುಪಯೋಗ ಪಡಿಸಿಕೊಂಡಿ ಸೈನ್ಯ ಮತ್ತು ಪೋಲೀಸ್ ಇಲಾಖೆಗೆ ಸೇರಿ ಎಂದು ಮನವಿ ಮಾಡಿದರು.

ಮಾಜಿ ಸೈನಿಕರಾದ ಅನಂತಪದ್ಮನಾಭರವರು ಮಾತನಾಡುತ್ತಾ ನಾನು ಏರ್ ವಿಂಗ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತನಾದ ನಂತರವೂ 7 ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇವೆ,ಸೈನ್ಯದಲ್ಲಿ ಉತ್ತಮ ಸಂಬಳ,ಪಿಂಚಣಿ ಎಲ್ಲವೂ ಇದೆ ಯುವಕರು ಭೂಸೇವೆ,ವಾಯುಸೇವೆ,ನೌಕಾಸೇನೆಗೆ ಸೇರಿ ದೇಶ ಸೇವೆ ಮಾಡಿ ಪೋಷಕರು ಮಕ್ಕಳನ್ನು ಸೈನ್ಯಕ್ಕೆ ಸೇರಿಸಿ ಎಂದು ಮನವಿ ಮಾಡಿದರು.
ಶ್ರೀಮತಿ ಗೀತಾನಾಗೇಶ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು,ಶ್ರೀಮತಿ ಜ್ಯೋತಿಆಚಾರ್ಯ ನಿರೂಪಿಸಿದರು,ಶ್ರೀಮತಿ ನಂದಿನಿ ಸ್ವಾಗತಿಸಿ,ಚೇತನ್ ರವರು ವಂದಿಸಿದರು. ಈ ಸಂದರ್ಭದಲ್ಲಿ ಶೈಲಜಾ,ಅಭಿಷೇಕ್,ಭಕ್ತವತ್ಸಲ,ಲತಾ,ಮಂಜುಳಾರಾವ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
