ತುಮಕೂರು: ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನರಸಿಂಹರಾಜು ಅವರು ಮಾಜಿ ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಕ್ಷ ಸೇರ್ಪಡೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನರಸಿಂಹರಾಜು, ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು, ನಾಯಕ ಡಿ.ಸಿ. ಗೌರಿಶಂಕರ್ ಅವರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೇಮಠ್ ಅವರ ಪರವಾಗಿ ಪದವೀಧರರಲ್ಲಿ ಮತಯಾಚಿಸಿ, ಅವರನ್ನು ಗೆಲ್ಲಿಸಲು ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.
ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬೆಳಗುಂಬ ಕ್ಷೇತ್ರದಿಂದ ಸ್ಪರ್ಧಿಸಿ ಜನಸೇವೆ ಮಾಡುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹಾಗೂ ಸಾರ್ವಜನಿಕರು ಮತ್ತು ನೌಕರರೊಂದಿಗೆ ಹೊಂದಿರುವ ಉತ್ತಮ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ನಾಯಕರು ಅವಕಾಶ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ಬೆಳಗುಂಬ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಹೆಚ್ಚಿನ ಒಕ್ಕಲಿಗ ಮತದಾರರಿದ್ದು, ವಿವಿಧ ಸಮಾಜಗಳ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ತಿಳಿಸಿದ ಅವರು, ಪಕ್ಷದ ಸಂಘಟನೆಯನ್ನು ಬಲಪಡಿಸಲು ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ನಗರ ಶಾಸಕ ಡಾ. ಎಸ್. ರಫೀಕ್ ಅಹಮದ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್, ಹಿರಿಯ ವಕೀಲ ಅನಂತಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರಗೌಡ, ಶಶಿ ಹುಲಿಕುಂಟೇಮಠ್ ಸೇರಿದಂತೆ ಗ್ರಾಮಾಂತರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ನರಸಿಂಹರಾಜು ಅವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.
– ಚಂದ್ರಚೂಡ ಕೆ.ಬಿ.
