ಕರ್ತವ್ಯಕ್ಕೆ ನಿಯೋಜಿಸುವ ಪೊಲೀಸ್ ಸಿಬ್ಬಂದಿಗೆ ಮೂಲಸೌಕರ್ಯ, ಆಹಾರ, ವಸತಿ ಹಾಗೂ ಸುರಕ್ಷತೆ ಒದಗಿಸುವ ಹೊಣೆ ಸರ್ಕಾರ ಮತ್ತು ಇಲಾಖೆಯದ್ದಲ್ಲವೇ?
ಗಲಾಟೆ, ಗಲಭೆ, ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಸಮಾಜದ ಪ್ರತಿಯೊಂದು ತುರ್ತು ಪರಿಸ್ಥಿತಿಯಲ್ಲೂ ಪೊಲೀಸರ ಅಗತ್ಯವಿದೆ. ಆದರೆ ಸಮಾಜದ ಭದ್ರತೆಗಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಪೊಲೀಸರ ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯವಾಗುತ್ತಿದೆ ಎಂಬ ಅಸಮಾಧಾನಗಳು ಕೇಳಿಬರುತ್ತಿರುವುದು ಕಳವಳಕಾರಿ.
ಇತ್ತೀಚೆಗೆ ಸಕಲೇಶಪುರದಲ್ಲಿ ನಡೆದ ಮುಖ್ಯಮಂತ್ರಿ ಕಾರ್ಯಕ್ರಮದ ಭದ್ರತೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೂರದ ಜಿಲ್ಲೆಗಳಿಂದ ಕರ್ತವ್ಯಕ್ಕೆ ಬಂದ ಸಿಬ್ಬಂದಿಗೆ ವಸತಿ, ಊಟ ಮತ್ತು ವಿಶ್ರಾಂತಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿತ್ತೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಕೆಲ ಸಂದರ್ಭಗಳಲ್ಲಿ ಪೊಲೀಸ್ ಸಿಬ್ಬಂದಿ ಚೌಟ್ರಿ, ಶಾಲೆ, ಸಮುದಾಯ ಭವನ ಸೇರಿದಂತೆ ಲಭ್ಯವಿರುವ ಸ್ಥಳಗಳಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬ ಆರೋಪಗಳಿವೆ.
ಕರ್ತವ್ಯ ಮುಗಿಸಿ ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳವಿಲ್ಲದೆ ನೆಲದಲ್ಲೇ ಮಲಗುವುದು, ಆಹಾರದಲ್ಲಿ ಗುಣಮಟ್ಟದ ಕೊರತೆ ಎದುರಾಗುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಸಿಬ್ಬಂದಿ ಎದುರಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇಂತಹ ಘಟನೆಗಳು ಒಂದೆರಡು ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ರಾಜ್ಯದ ವಿವಿಧೆಡೆ ನಡೆಯುವ ದೊಡ್ಡ ಕಾರ್ಯಕ್ರಮಗಳು, ರಾಜಕೀಯ ಸಮಾವೇಶಗಳು, ಹಬ್ಬ-ಜಾತ್ರೆಗಳು ಹಾಗೂ ಗಣ್ಯರ ಭೇಟಿಯ ಸಂದರ್ಭದಲ್ಲಿ ದೂರದ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿ ಬಂದೋಬಸ್ತ್ಗೆ ನಿಯೋಜಿಸುವುದು ಸಾಮಾನ್ಯ. ಆದರೆ ಕರ್ತವ್ಯಕ್ಕೆ ಬಂದ ಸಿಬ್ಬಂದಿಯ ವಸತಿ, ಆಹಾರ, ಶೌಚಾಲಯ, ಕುಡಿಯುವ ನೀರು ಹಾಗೂ ವಿಶ್ರಾಂತಿಗೆ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಲಾಗುತ್ತಿದೆಯೇ ಎಂಬುದನ್ನು ಇಲಾಖೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಪ್ರಶ್ನಿಸಿದರೆ ಕ್ರಮದ ಭಯ?
ಕರ್ತವ್ಯದ ಪರಿಸ್ಥಿತಿಗಳ ಬಗ್ಗೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದಾಗ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಯುತ್ತದೆ ಎಂಬ ಭಯವೂ ಇದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಪೊಲೀಸ್ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಉದ್ಯೋಗದ ಪರಿಸ್ಥಿತಿಯನ್ನು ವ್ಯಂಗ್ಯವಾಗಿ ಉಲ್ಲೇಖಿಸಿದ ಘಟನೆ ಚರ್ಚೆಗೆ ಗ್ರಾಸವಾಗಿತ್ತು. ನಂತರ ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆದಿರುವುದು ಪೊಲೀಸ್ ಸಿಬ್ಬಂದಿಯ ಅಭಿವ್ಯಕ್ತಿ ಹಾಗೂ ಕುಂದುಕೊರತೆಗಳ ವಿಚಾರದಲ್ಲಿ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಶಿಸ್ತುಬದ್ಧ ಇಲಾಖೆಯಲ್ಲಿ ನಿಯಮ, ಶಿಸ್ತು ಮತ್ತು ಆದೇಶ ಪಾಲನೆ ಅತ್ಯಗತ್ಯ. ಆದರೆ ಅದೇ ಸಮಯದಲ್ಲಿ ಕೆಳಹಂತದ ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆಯೂ ಅಷ್ಟೇ ಮುಖ್ಯ. ಸಮಸ್ಯೆ ಹೇಳಿಕೊಂಡರೆ ಶಿಕ್ಷೆ ಎದುರಾಗುತ್ತದೆ ಎಂಬ ಭಾವನೆ ಮೂಡಿದರೆ, ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು?
ಗಣೇಶೋತ್ಸವ ಬಂದೋಬಸ್ತ್ಗೂ ಇದೇ ಪ್ರಶ್ನೆ
ಶಿವಮೊಗ್ಗದಲ್ಲಿ ನಡೆಯಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ 1,653 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಗಣೇಶೋತ್ಸವದ ಸಂದರ್ಭದಲ್ಲಿ ಮೆರವಣಿಗೆ, ವಿಸರ್ಜನೆ ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಪ್ರಮುಖ ಹೊಣೆ.
ಆದರೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಈ ಸಿಬ್ಬಂದಿಗೆ ಎಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ? ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಹೇಗಿದೆ? ವಿಶ್ರಾಂತಿಗೆ ಸೂಕ್ತ ಸ್ಥಳವಿದೆಯೇ? ತುರ್ತು ಸಂದರ್ಭದಲ್ಲಿ ಗಾಯಗೊಂಡರೆ ಅಥವಾ ಹಲ್ಲೆಗೊಳಗಾದರೆ ತಕ್ಷಣದ ವೈದ್ಯಕೀಯ ನೆರವು ಹೇಗೆ ದೊರೆಯಲಿದೆ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಇರಬೇಕಾಗಿದೆ.
ಕರ್ತವ್ಯ ನಿರ್ವಹಿಸುವಾಗ ಪೊಲೀಸ್ ಸಿಬ್ಬಂದಿಯ ಜೀವಕ್ಕೆ ಅಪಾಯ ಎದುರಾದರೆ, ಆತ್ಮರಕ್ಷಣೆಗಾಗಿ ಕಾನೂನುಬದ್ಧವಾಗಿ ಕೈಗೊಳ್ಳುವ ಕ್ರಮಗಳ ಕುರಿತು ಸಿಬ್ಬಂದಿಗೆ ಸ್ಪಷ್ಟ ಮಾರ್ಗಸೂಚಿ ಮತ್ತು ಇಲಾಖೆಯ ಬೆಂಬಲವೂ ಅಗತ್ಯ.

ಪೊಲೀಸರೂ ಮನುಷ್ಯರೇ
ಪೊಲೀಸ್ ಇಲಾಖೆಗೆ ಸೇರುವಾಗ ಪ್ರತಿಯೊಬ್ಬ ಯುವಕ-ಯುವತಿಯೂ ಸಮಾಜ ಸೇವೆ, ಗೌರವಯುತ ಉದ್ಯೋಗ ಮತ್ತು ಕುಟುಂಬದ ಭವಿಷ್ಯದ ಕನಸು ಹೊತ್ತು ಬರುತ್ತಾರೆ. ತರಬೇತಿಯ ವೇಳೆ ಯಾವುದೇ ಪರಿಸ್ಥಿತಿಯನ್ನು ಎದುರಿಸುವಂತೆ ಅವರನ್ನು ಸಿದ್ಧಗೊಳಿಸಲಾಗುತ್ತದೆ. ಆದರೆ ‘ಯಾವುದೇ ಪರಿಸ್ಥಿತಿ’ ಎಂದರೆ ಮೂಲಭೂತ ಮಾನವೀಯ ಸೌಲಭ್ಯಗಳಿಲ್ಲದೆ ಇರಬೇಕು ಎಂಬ ಅರ್ಥವಲ್ಲ.
ಪೊಲೀಸ್ ಸಿಬ್ಬಂದಿಯೂ ಕುಟುಂಬ ಹೊಂದಿರುವ ಮನುಷ್ಯರು. ಅವರಿಗೂ ಉತ್ತಮ ಆಹಾರ, ಸುರಕ್ಷಿತ ವಸತಿ, ವಿಶ್ರಾಂತಿ ಮತ್ತು ಗೌರವಯುತ ಕೆಲಸದ ವಾತಾವರಣ ಬೇಕು.
ಸಮಾಜದ ಭದ್ರತೆಯ ಜವಾಬ್ದಾರಿ ಹೊತ್ತಿರುವ ಸಿಬ್ಬಂದಿಯೇ ಅಸುರಕ್ಷಿತ ಹಾಗೂ ನಿರ್ಲಕ್ಷಿತ ಸ್ಥಿತಿಯಲ್ಲಿ ಕೆಲಸ ಮಾಡಬೇಕಾದರೆ ಅದು ವ್ಯವಸ್ಥೆಯ ವೈಫಲ್ಯವಾಗುತ್ತದೆ.
ಸರ್ಕಾರದ ಗಮನ ಅಗತ್ಯ
ಪ್ರಮುಖ ಕಾರ್ಯಕ್ರಮಗಳಿಗೆ ಹೊರ ಜಿಲ್ಲೆಗಳಿಂದ ಪೊಲೀಸರನ್ನು ನಿಯೋಜಿಸುವಾಗ ವಸತಿ, ಆಹಾರ, ಶೌಚಾಲಯ, ಕುಡಿಯುವ ನೀರು, ವಿಶ್ರಾಂತಿ, ವೈದ್ಯಕೀಯ ನೆರವು ಹಾಗೂ ತುರ್ತು ಪರಿಸ್ಥಿತಿಯ ಸುರಕ್ಷತಾ ವ್ಯವಸ್ಥೆಗಳನ್ನು ಒಳಗೊಂಡ ಪ್ರಮಾಣಿತ ವ್ಯವಸ್ಥೆ ರೂಪಿಸುವ ಅಗತ್ಯವಿದೆ.
ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯ ಸಮಸ್ಯೆಗಳನ್ನು ಗೌಪ್ಯವಾಗಿ ಹಾಗೂ ನಿಷ್ಪಕ್ಷಪಾತವಾಗಿ ದಾಖಲಿಸಿ ಪರಿಹರಿಸುವ ವ್ಯವಸ್ಥೆಯೂ ಇರಬೇಕು. ಶಿಸ್ತು ಕಾಪಾಡುವುದರ ಜೊತೆಗೆ ಸಿಬ್ಬಂದಿಯ ಹಕ್ಕುಗಳು ಮತ್ತು ಮಾನವೀಯ ಅಗತ್ಯಗಳನ್ನೂ ಗೌರವಿಸುವುದು ಮುಖ್ಯ.
ಸಮಾಜದ ಭದ್ರತೆಗಾಗಿ ನಿಂತಿರುವ ಪೊಲೀಸರ ಭದ್ರತೆಯನ್ನೂ ಸರ್ಕಾರ ಖಚಿತಪಡಿಸಬೇಕು. ಪೊಲೀಸ್ ಸಿಬ್ಬಂದಿಯನ್ನು ಗೌರವಯುತವಾಗಿ ನಡೆಸಿಕೊಂಡಾಗಲೇ ಅವರು ಇನ್ನಷ್ಟು ಆತ್ಮವಿಶ್ವಾಸದಿಂದ ಸಮಾಜದ ಭದ್ರತೆಗೆ ಸೇವೆ ಸಲ್ಲಿಸಲು ಸಾಧ್ಯ.
– ಮಾಲಾ ಹಾಸನ್
