ತುಮಕೂರು: ವಿಕಲಚೇತನರು ಸಮಾಜದಲ್ಲಿ ಎಲ್ಲರಂತೆ ಘನತೆಯಿಂದ, ನೆಮ್ಮದಿಯಿಂದ ಬದುಕಲು ಸಂವಿಧಾನ ಎಲ್ಲಾ ರೀತಿಯ ಹಕ್ಕು, ರಕ್ಷಣೆ ನೀಡಿದೆ. ಕುಟುಂಬದವರಿಂದಾಗಲಿ, ಇಲಾಖೆ, ಸಂಸ್ಥೆ, ಸಮಾಜ ಯಾರಿಂದಲಾದರೂ ವಿಕಲಚೇತನರ ಹಕ್ಕು ಉಲ್ಲಂಘನೆಯಾದರೆ ರಕ್ಷಣೆ ನೀಡಲು ವಿಕಲಚೇತನರ ಸಂರಕ್ಷಣಾ ಕಾಯಿದೆಯ ನೆರವು ಪಡೆಯಬಹುದು.
ಕಾನೂನು ರಕ್ಷಣೆ, ದೊರೆಯುವ ಅವಕಾಶಗಳನ್ನು ಬಳಸಿಕೊಂಡು ಸ್ವಾಭಿಮಾನದಿಂದ ಆರ್ಥಿಕ ಸ್ವಾವಲಂಬಿಗಳಾಗಿ ಬಾಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ನೂರುನ್ನೀಸಾ ಹೇಳಿದರು.
ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಇಕ್ಬಾಲ್ ಮಜೀದ್ ಫೌಂಡೇಷನ್ ಹಾಗೂ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಸಿಐಟಿಯು ಜಿಲ್ಲಾ ಶಾಖೆ, ಚಶನ್ ಸ್ಟಿಚ್ ಅಂಡ್ ಹಿಯರಿಂಗ್ ಸೆಂಟರ್ ಸಹಯೋಗದಲ್ಲಿ ಶುಕ್ರವಾರ ನಗರದ ಮೆಳೆಕೋಟೆ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್ನಲ್ಲಿ ವಿಕಲಚೇತನರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಂಗವೈಕಲ್ಯದಿಂದಾಗಿ ವಿಕಲಚೇತನರು ಕುಗ್ಗಬಾರದು, ಆತ್ಮವಿಶ್ವಾಸ ಕಡಿಮೆ ಮಾಡಿಕೊಳ್ಳಬಾರದು, ಉದ್ಯೋಗಾವಕಾಶಗಳನ್ನು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ, ಸ್ವತಂತ್ರವಾಗಿ ಬದುಕು ರೂಪಿಸಿಕೊಂಡು ಬಾಳಬೇಕು ಎಂದು ತಿಳಿಸಿದರು.
ಹುಟ್ಟಿನಿಂದಾಗಿನಿಂದ ಅಥವಾ ಅಪಘಾತದಿಂದ ಅಂಗವೈಕಲ್ಯ ಉಂಟಾಗಬಹುದು. ಅಂಗವೈಕಲ್ಯತೆಯನ್ನು ಕೊರತೆ ಎಂದು ಭಾವಿಸದೆ, ಆತ್ಮವಿಶ್ವಾಸದಿಂದ ಬದುಕುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಮ್ಮ ಸಂವಿಧಾನ ವಿಕಲಚೇತನರಿಗೆ ವಿಶೇಷ ಅನುಕೂಲ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಸವಲತ್ತಿನಲ್ಲಿ ಮೀಸಲಾತಿ ಇದೆ, ಉದ್ಯೋಗಾವಕಾಶಗಳೂ ಇವೆ. ಎಲ್ಲರಂತೆ ಸ್ವಾತಂತ್ರವಾಗಿ ಬಾಳುವ ಅವಕಾಶ ನೀಡಿದೆ. ವಿಕಲಚೇತನರ ಹಕ್ಕುಗಳ ಉಲ್ಲಂಘನೆಯಾದಾಗ ಕಾನೂನು ನೆರವಿಗೆ ಬರುತ್ತದೆ. ಕುಟುಂಬದವರೂ ವಿಕಲಚೇತನರನ್ನು ಕಡೆಗಣಿಸದೆ ಎಲ್ಲರಂತೆ ಘನತೆಯಿಂದ ಸಹಜವಾಗಿ ಬಾಳುವ ವಾತಾವರಣ ನಿರ್ಮಿಸಬೇಕು ಎಂದರು.
ಇಕ್ಬಾಲ್ ಮಜೀದ್ ಫೌಂಡೇಷನ್ ಮುಖ್ಯಸ್ಥ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಅಸಮಾನತೆ ಇದೆ. ಬಡವರು-ಶ್ರೀಮಂತರು, ಅಕ್ಷರಸ್ಥರು-ಅನಕ್ಷರಸ್ಥರು, ಬಲ-ದುರ್ಬಲರು, ಅಧಿಕಾರವುಳ್ಳವರು-ಅಧಿಕಾರ ಇಲ್ಲದವರು ಇಂತಹ ತಾರತಮ್ಯ ತೊಡೆದುಹಾಕಲು ಇವರುವವರು ಇಲ್ಲದವರಿಗೆ ನೀಡಿ ಸಮಾಜದಲ್ಲಿ ಸಮಾನತೆಯಿಂದ ಬಾಳಲು ಅವಕಾಶ ಮಾಡಿಕೊಡಬೇಕು ಎನ್ನುವ ಕಾರಣಕ್ಕೆ ದೇವರು ಕೆಲವರಿಗೆ ಹೆಚ್ಚು ಕೊಟ್ಟಿರುತ್ತಾನೆ ಎಂಬದನ್ನು ತಿಳಿಯಬೇಕು ಎಂದು ಹೇಳಿದರು.
ವಿಕಲಚೇತನರಿಗೆ ತಮ್ಮಿಂದಾಗುವ ಎಲ್ಲಾ ಸಹಾಯ ಮಾಡುವುದಾಗಿ ಹೇಳಿದ ಅವರು, ಇವರು ಸ್ವಾವಲಂಬಿಯಾಗಿ ಬಾಳಲು ಎಲ್ಲರೂ ಅವಕಾಶ ಮಾಡಿಕೊಡಬೇಕು. ಸರ್ಕಾರವೂ ವಿವಿಧ ಯೋಜನೆಗಳನ್ನು ರೂಪಿಸಿ ನೆರವಾಗಬೇಕು. ವಿಕಲಚೇತನರಿಗಾಗಿಯೇ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು, ಅಗತ್ಯ ಸಂದರ್ಭಗಳಲ್ಲಿ ವಿಕಲಚೇತನರು ಪ್ರಯಾಣ ಮಾಡಲು ವಿಶೇಷ ಬಸ್ ಸೌಲಭ್ಯ ಒದಗಿಸಬೇಕು ಎಂದು ಕೋರಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಇಕ್ಬಾಲ್ ಅಹ್ಮದ್ ಹೇಳಿದರು.
ಹೃದಯ ತಜ್ಞ ವೈದ್ಯ ಡಾ.ತಮೀಮ್ ಅಹಮದ್, ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಎಸ್. ಬಾಬು ಮಾತನಾಡಿದರು.
ವರದಿ : ಕೆ ಬಿ ಚಂದ್ರಚೂಡ್
