ನವದೆಹಲಿ: ಭಾರತದಲ್ಲಿ ಯುರೇನಿಯಂ ನಿಕ್ಷೇಪಗಳ ಪತ್ತೆ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಇತ್ತೀಚೆಗೆ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಹೊಸ ಯುರೇನಿಯಂ ಸಂಗ್ರಹ ಪತ್ತೆಯಾಗಿರುವುದು ಗಮನಾರ್ಹವಾಗಿದೆ.
ಭಾರತದಲ್ಲಿ ಯುರೇನಿಯಂ ನಿಕ್ಷೇಪಗಳು ಮುಖ್ಯವಾಗಿ ಜಾರ್ಖಂಡ್ನ ಸಿಂಗ್ಭೂಮ್ ಮತ್ತು ಹಜಾರಿಬಾಗ್ ಜಿಲ್ಲೆಗಳು, ಬಿಹಾರದ ಗಯಾ ಜಿಲ್ಲೆ ಹಾಗೂ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಸಂಚಯನ ಶಿಲೆಗಳಲ್ಲಿ ಕಂಡುಬರುತ್ತವೆ. ಮೊನಾಜೈಟ್ ಮರಳು ಯುರೇನಿಯಂನ ಪ್ರಮುಖ ಮೂಲವೆಂದು ಪರಿಗಣಿಸಲಾಗುತ್ತದೆ.
ಪ್ರಸ್ತುತ ಭಾರತವು ವಿಶ್ವದ ಒಟ್ಟು ಯುರೇನಿಯಂ ಉತ್ಪಾದನೆಯಲ್ಲಿ ಸುಮಾರು ಶೇಕಡಾ 2 ರಷ್ಟು ಪಾಲು ಹೊಂದಿದೆ. ಜಾಗತಿಕವಾಗಿ ಆಸ್ಟ್ರೇಲಿಯಾ, ಕಜಕಿಸ್ತಾನ್ ಹಾಗೂ ಕೆನಡಾ ದೇಶಗಳಲ್ಲಿ ಅತಿದೊಡ್ಡ ಮತ್ತು ಲಾಭದಾಯಕ ಯುರೇನಿಯಂ ನಿಕ್ಷೇಪಗಳು ಕಂಡುಬರುತ್ತವೆ.
ಇತ್ತೀಚಿನ ಖನಿಜ ಸಂಗ್ರಹಗಳ ಪೈಕಿ ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ಕೂಡ ಗಮನಸೆಳೆದಿದೆ. ಇವು ವಿದ್ಯುತ್ ವಾಹನಗಳು ಹಾಗೂ ಎನರ್ಜಿ ಕ್ಷೇತ್ರಕ್ಕೆ ಮಹತ್ವದ ಸಂಪನ್ಮೂಲಗಳಾಗಿವೆ.
ರಾಜಸ್ಥಾನದ ಸಿಕರ್ನಲ್ಲಿ ಪತ್ತೆಯಾದ ಹೊಸ ಯುರೇನಿಯಂ ಸಂಗ್ರಹವು ಭಾರತದ ಅಣುಶಕ್ತಿ ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.
