ನವದೆಹಲಿ, ಜೂ.26: ಬ್ರಿಟನ್ನಲ್ಲಿ ಹರಾಜಾಗಿ ಗುಜರಿಗೆ ಸೇರಬೇಕಿದ್ದ 9 ನಿವೃತ್ತ ರಾಯಲ್ ಏರ್ ಫೋರ್ಸ್ ಜಾಗ್ವಾರ್ ಯುದ್ಧವಿಮಾನಗಳನ್ನು ಖರೀದಿಸಲು ಭಾರತ ಸರ್ಕಾರ ಮುಂದಾಗಿದೆ. ಮೇಲ್ನೋಟಕ್ಕೆ ಇದು ಹಳೆಯ ಯುದ್ಧವಿಮಾನಗಳ ಖರೀದಿಯಂತೆ ಕಂಡರೂ, ಇದರ ಹಿಂದೆ ಭಾರತೀಯ ವಾಯುಪಡೆಯ ಮಹತ್ವದ ರಕ್ಷಣಾ ತಂತ್ರ ಅಡಗಿದೆ.
ಭಾರತ ಈ ವಿಮಾನಗಳನ್ನು ಮತ್ತೆ ಸೇವೆಗೆ ಸೇರಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ, ಭಾರತೀಯ ವಾಯುಪಡೆಯಲ್ಲಿ ಸಕ್ರಿಯವಾಗಿರುವ ಸುಮಾರು 120 ಜಾಗ್ವಾರ್ (ಶಂಶೇರ್) ಯುದ್ಧವಿಮಾನಗಳ ಕಾರ್ಯಾಚರಣೆಯನ್ನು ಮುಂದುವರಿಸಲು ಅಗತ್ಯವಿರುವ ಬಿಡಿಭಾಗಗಳನ್ನು ಪಡೆಯುವ ಉದ್ದೇಶದಿಂದ ಈ ಖರೀದಿ ನಡೆಯುತ್ತಿದೆ.
ಜಾಗ್ವಾರ್ ಯುದ್ಧವಿಮಾನಗಳ ಉತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಹಲವು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ ಇಂಜಿನ್, ಏವಿಯಾನಿಕ್ಸ್, ಹೈಡ್ರಾಲಿಕ್ಸ್ ಸೇರಿದಂತೆ ಹಲವು ಪ್ರಮುಖ ಬಿಡಿಭಾಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗಿ ಬ್ರಿಟನ್ನಿಂದ ಖರೀದಿಸುವ ಈ 9 ನಿವೃತ್ತ ವಿಮಾನಗಳನ್ನು ಬಿಡಿಭಾಗಗಳ ಮೂಲವಾಗಿ ಬಳಸಿಕೊಳ್ಳಲಾಗುತ್ತದೆ. ಅವುಗಳನ್ನು ಪ್ರತ್ಯೇಕಿಸಿ, ಭಾರತೀಯ ವಾಯುಪಡೆಯ ಆರು ಜಾಗ್ವಾರ್ ಸ್ಕ್ವಾಡ್ರನ್ಗಳ ನಿರ್ವಹಣೆ ಮತ್ತು ದುರಸ್ತಿಗೆ ಅಗತ್ಯವಿರುವ ಭಾಗಗಳನ್ನು ಬಳಸಲಾಗುತ್ತದೆ.
ಭಾರತೀಯ ವಾಯುಪಡೆಯಲ್ಲಿ ಯುದ್ಧವಿಮಾನಗಳ ಕೊರತೆಯೂ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ವಾಯುಪಡೆಯಲ್ಲಿ ಇರಬೇಕಾದ 42 ಸ್ಕ್ವಾಡ್ರನ್ಗಳ ಬದಲಿಗೆ ಸದ್ಯ ಕೇವಲ 29 ಸ್ಕ್ವಾಡ್ರನ್ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದೇ ವೇಳೆ ಸ್ವದೇಶಿ ತೇಜಸ್ ಎಂಕ್-1ಎ ಯುದ್ಧವಿಮಾನಗಳ ಪೂರೈಕೆಯಲ್ಲಿ ವಿಳಂಬವಾಗಿದ್ದು, ಹೊಸ ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಯೂ ಇನ್ನೂ ಪೂರ್ಣಗೊಂಡಿಲ್ಲ.
ಈ ಹಿನ್ನೆಲೆ, ಹೊಸ ಯುದ್ಧವಿಮಾನಗಳು ಸೇರ್ಪಡೆಯಾಗುವವರೆಗೆ ಈಗಿರುವ ಜಾಗ್ವಾರ್ ಪಡೆಗಳನ್ನು ಕಾರ್ಯಕ್ಷಮವಾಗಿ ಉಳಿಸಿಕೊಳ್ಳುವುದು ಭಾರತೀಯ ವಾಯುಪಡೆಯ ಆದ್ಯತೆಯಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಜಾಗ್ವಾರ್ ಯುದ್ಧವಿಮಾನಗಳನ್ನು ಸಕ್ರಿಯವಾಗಿ ಬಳಸುತ್ತಿರುವ ಏಕೈಕ ದೇಶ ಭಾರತವಾಗಿರುವುದರಿಂದ, ಬ್ರಿಟನ್ನ ಈ ನಿವೃತ್ತ ವಿಮಾನಗಳು ಭಾರತೀಯ ವಾಯುಪಡೆಗೆ ಅತ್ಯಂತ ಮೌಲ್ಯಯುತ ಬಿಡಿಭಾಗಗಳ ಮೂಲವಾಗಲಿವೆ.
