ಕೆ.ಆರ್.ಪೇಟೆ: ತಾಲ್ಲೂಕಿನ ದಬ್ಬೇಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 15 ಸರ್ಕಾರಿ ಶಾಲೆಗಳು ಹಾಗೂ ಬೆಡದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೆಳ್ಳಿ ಬೆಟ್ಟದ ಕಾವಲು ಶಾಲೆಗಳ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅವಿರತ ಪ್ರತಿಷ್ಠಾನ ಮತ್ತು ಇಸ್ರೇ ಬೆಂಗಳೂರು ಕಂಪನಿಯ ಸಹಯೋಗದಲ್ಲಿ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಬೆಡದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವಿರತ ಪ್ರತಿಷ್ಠಾನದ ಸಂಸ್ಥಾಪಕ ಗುರುಪ್ರಸಾದ್ ರವರು ಅವಿರತ ಪ್ರತಿಷ್ಠಾನ ಹಲವು ವರ್ಷಗಳಿಂದ ನಿರಂತರ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ನೋಟ್ ಪುಸ್ತಕಗಳನ್ನು ವಿತರಿಸಿದ್ದೇವೆ. ವಿದ್ಯೆ ಬಡತನವನ್ನು ದೂರ ಮಾಡುವ ಏಕೈಕ ಸಾಧನ. ಮಕ್ಕಳು ಶಿಸ್ತು, ಸಮಯ ಪಾಲನೆ ರೂಢಿಸಿಕೊಂಡು ಚೆನ್ನಾಗಿ ಓದಬೇಕು. ಮೊಬೈಲ್ ಗೀಳು ಬಿಟ್ಟು ಪುಸ್ತಕದ ಗೀಳು ಬೆಳೆಸಿಕೊಳ್ಳಿ. ಹೆತ್ತವರಿಗೆ, ಗುರುಗಳಿಗೆ, ದೇಶಕ್ಕೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಳಿಕ ಮಾತನಾಡಿದ ಗುಡುಗನಹಳ್ಳಿ ಶಾಲಾ ಮುಖ್ಯ ಶಿಕ್ಷಕ ಮತ್ತು ಕೆ.ಆರ್.ಪೇಟೆ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಜಿ.ಎಸ್. ಮಂಜು ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಇಂತಹ ಸಹಾಯ ಅಗತ್ಯವಿದೆ. ಅವಿರತ ಪ್ರತಿಷ್ಠಾನ ಹಾಗೂ ಇಸ್ರೇ ಕಂಪನಿಯ ಸಾಮಾಜಿಕ ಕಳಕಳಿ ಶ್ಲಾಘನೀಯ. ಇಂತಹ ಸಂಸ್ಥೆಗಳ ಸಹಕಾರದಿಂದ ಸರ್ಕಾರಿ ಶಾಲೆಗಳು ಸಬಲೀಕರಣಗೊಳ್ಳುತ್ತಿವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅವಿರತ ಪ್ರತಿಷ್ಠಾನದ ಸಂತೋಷ್, ಮಲ್ಲೇಶ್ ಹಾಗೂ ಇಸ್ರೇ ಬೆಂಗಳೂರು ಕಂಪನಿಯ ಅರುಣ್, ಮಧುಸೂದನ್, ದೀಪಕ್, ಸತ್ಯ ಕುಮಾರ್, ಮೋಹನ್ ನಿಂಬಾಳ್ಕರ್, ದೀಪ, ನಿಶಾ, ಶ್ವೇತ, ನಾಗಭೂಷಣ, ವಿನೋದ್ ಕುಮಾರ್, ಗಿರೀಶ್, ಶಶಿಕಿರಣ್ಸಹ ಶಿಕ್ಷಕ ವಸಂತ್ ಕುಮಾರ್, ಸೇರಿದಂತೆ ಶಾಲಾ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
