ಕೆ.ಆರ್.ಪೇಟೆ: ಕೆನರಾ ಬ್ಯಾಂಕ್ ಹಾಗೂ ಕೆನರಾ ಎಚ್ಎಸ್ಬಿಸಿ ಲೈಫ್ ಇನ್ಶೂರೆನ್ಸ್ ಸಂಸ್ಥೆಯ ಸಹಯೋಗದಲ್ಲಿ ಜಾರಿಯಲ್ಲಿರುವ ಅಪಘಾತ ವಿಮಾ ಯೋಜನೆಯಡಿ ಬೈಕ್ ಅಪಘಾತದಲ್ಲಿ ಮೃತಪಟ್ಟ ಚೆಸ್ಕಾಂ ನೌಕರ ಎಂ. ಶಿವು ಅವರ ಕುಟುಂಬಕ್ಕೆ ₹1.06 ಕೋಟಿ ವಿಮಾ ಪರಿಹಾರದ ಚೆಕ್ ವಿತರಿಸಲಾಯಿತು.
ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವಿಭಾಗೀಯ ಕಚೇರಿಯ ಡಿವಿಜನಲ್ ಮ್ಯಾನೇಜರ್ ರಂಗನಾಯಕ್ ಅವರು ಮೃತ ನೌಕರನ ಪತ್ನಿ ಮಾಲಿನಿ ಅವರಿಗೆ ಪರಿಹಾರದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಂಗನಾಯಕ್, ಕೆನರಾ ಬ್ಯಾಂಕ್, ಕೆನರಾ ಎಚ್ಎಸ್ಬಿಸಿ ವಿಮಾ ಸಂಸ್ಥೆ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಡುವಿನ ಒಡಂಬಡಿಕೆಯಂತೆ ಕೆನರಾ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದಿರುವ ವಿದ್ಯುತ್ ಇಲಾಖೆಯ ನೌಕರರಿಗೆ ಅಪಘಾತ ವಿಮಾ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
“ನೌಕರರ ಆಕಸ್ಮಿಕ ಮರಣದ ಸಂದರ್ಭದಲ್ಲಿ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಈ ಯೋಜನೆ ಸಹಕಾರಿಯಾಗಿದೆ. ಎಲ್ಲ ನೌಕರರು ಇದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ಅಪಘಾತ ವಿಮಾ ಸೌಲಭ್ಯವು ಕೇವಲ ಬೈಕ್ ಅಥವಾ ಕಾರು ಅಪಘಾತಗಳಿಗೆ ಸೀಮಿತವಾಗಿಲ್ಲ. ಹಾವು ಕಚ್ಚಿ ಮೃತಪಟ್ಟ ಸಂದರ್ಭ, ಬೆಂಕಿ ಅನಾಹುತ ಅಥವಾ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಸಂದರ್ಭಗಳಲ್ಲಿಯೂ ಯೋಜನೆಯ ನಿಯಮಾನುಸಾರ ವಿಮಾ ಪರಿಹಾರಕ್ಕೆ ಅರ್ಹತೆ ಇರಬಹುದು ಎಂದು ರಂಗನಾಯಕ್ ವಿವರಿಸಿದರು.
ಕೆನರಾ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದುವ ಮೂಲಕ ನೌಕರರು ತಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆ ಕಲ್ಪಿಸಿಕೊಳ್ಳಬಹುದು. ನೌಕರನ ಅಕಾಲಿಕ ಮರಣದ ಬಳಿಕ ಅವಲಂಬಿತ ಕುಟುಂಬ ಸದಸ್ಯರಿಗೆ ದೊರೆಯುವ ವಿಮಾ ಪರಿಹಾರವು ಸಂಕಷ್ಟದ ಸಂದರ್ಭದಲ್ಲಿ ದೊಡ್ಡ ಆಸರೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡ್ಯ ಕೆನರಾ ಬ್ಯಾಂಕ್ ಆರ್ಒ ಕಚೇರಿಯ ಎಜಿಎಂ ಹರಿಕೃಷ್ಣ, ಪಂಚಲಿಂಗೇಗೌಡ, ಕೆ.ಆರ್.ಪೇಟೆ ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವಾಸನ್, ಅಕೌಂಟ್ ಆಫೀಸರ್ ಮಹೇಶ್ ಚಂದ್ರು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ. ಪುಟ್ಟಸ್ವಾಮಿ, ಪ್ರದೀಪ್, ಮಂಜುನಾಥ್, ಕೆ.ಆರ್.ಪೇಟೆ ಕೆನರಾ ಬ್ಯಾಂಕ್ ಹಿರಿಯ ಶಾಖಾ ವ್ಯವಸ್ಥಾಪಕ ನಾಗೇಶ್ ಪ್ರವೀಣ್, ನೌಕರರ ಕೇಂದ್ರ ಸಮಿತಿ ಸದಸ್ಯ ಮಧುಸೂಧನ್, ತಾಲ್ಲೂಕು ಚೆಸ್ಕಾಂ ನೌಕರರ ಸ್ಥಳೀಯ ಸಮಿತಿ ಅಧ್ಯಕ್ಷ ಎಚ್.ಸಿ. ಶಿವಶಂಕರಮೂರ್ತಿ, ತಾಲ್ಲೂಕು ಆರ್ಥಿಕ ಸಾಕ್ಷರತಾ ವಿಭಾಗದ ಸಂಚಾಲಕ ಪ್ರಮೋದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
