ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ 79ನೇ ಭಾರತ ಸ್ವಾತಂತ್ರ್ಯೋತ್ಸವನ್ನು ಸಗಡರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಟೆಂಪೋ ಮಂಜು ರಾಷ್ಟ್ರ ಧ್ವಜಾರೋಹಣ ಮಾಡಿದರು. ಬಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಪಿ.ಎನ್.ಶಿವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಮಾತನಾಡಿದ ಪಿ.ಎನ್.ಶಿವಣ್ಣ ಅವರು ನಮ್ಮ ಸರ್ಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿ, ದಾನಿಗಳು ಹಾಗೂ ಪ್ರಥಮ ದರ್ಜೆ ಸಿವಿಲ್ ಮತ್ತು ಎಲೆಕ್ಟ್ರಿಕಲ್ಸ್ ಗುತ್ತಿಗೆದಾರರಾದ ಬಿ.ಎಸ್.ರಾಮು(ಆಡು ನಿಂಗಣ್ಣನ ಸ್ವಾಮೀಗೌಡರ ರಾಮು) ಅವರು ಬಲ್ಲೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ದಾಖಲಾತಿ ಶುಲ್ಕವನ್ನು ಪಾವತಿಸುವ ಜೊತೆಗೆ ಎಲ್ಲರಿಗೂ ಸಮವಸ್ತ್ರ ವನ್ನು ಕೊಡುಗೆಯಾಗಿ ನೀಡಿದರು. ಎಸ್.ಎಸ್.ಎಲ್.ಸಿ ಟಾಪರ್ಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿದ್ದಾರೆ. ಇದಲ್ಲದೆ ಬಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಈ ಸಾಲಿನ ೮, ೯, ೧೦ನೇ ತರಗತಿಗೆ ದಾಖಲಾಗಿರುವ ಎಲ್ಲಾ ವಿದ್ಯಾರ್ಥಿಗಳ ದಾಖಲಾತಿ ಶುಲ್ಕವನ್ನು ಪಾವತಿಸುವ ಮೂಲಕ ಶಾಲೆಯಲ್ಲಿ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದ್ದಾರೆ. ಕಳೆದ 5 ವರ್ಷಗಳಿಂದ ಬಲ್ಲೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಪಾವತಿಸುವ ಮೂಲಕ ಕಾಲೇಜಿನಲ್ಲಿಯೂ ದಾಖಲಾತಿ ಹೆಚ್ಚಳಕ್ಕೆ ಬಿ.ಎನ್.ರಾಮು ಅವರು ಕಾರಣರಾಗಿದ್ದಾರೆ. ಬಿ.ಎನ್.ರಾಮು ಅವರಂತಹ ದಾನಿಗಳು ನಮ್ಮ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆ ಮತ್ತು ಕಾಲೇಜಿನಲ್ಲಿ ದಾಖಲಾತಿ ಹೆಚ್ಚಳವಾಗಲು ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ದಿನದ ಸಾಂಸ್ಕೃತಿಕ- ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಕೊಡುಗೆಯಾಗಿ ನೀಡಿದ ದಾನಿ ಬಿ.ಎಸ್.ರಾಮು ಅವರು ಮಾತನಾಡಿ ನಮ್ಮ ದೇಶಕ್ಕೆ ಸಾಂಬಾರ ಪದಾರ್ಥಗಳ ವ್ಯಾಪಾರ ಮಾಡಲು ಬಂದ ಬ್ರಿಟೀಷರು ಭಾರತೀಯರಾದ ನಮ್ಮನ್ನು ಸುಮಾರು 200 ವರ್ಷಗಳ ಕಾಲ ಗುಲಾಮರನ್ನಾಗಿ ಮಾಡಿಕೊಂಡು ನಮ್ಮ ದೇಶದ ಸಂಪತ್ತನ್ನು ಕೊಳ್ಳೆಹೊಡೆದು ಆಡಳಿತ ನಡೆಸಿದರು. ರಾಷ್ಟ್ರ ಪಿತ ಮಹಾತ್ಮಾಗಾಂಧೀಜಿ, ಸರ್ದಾರ್ ವಲ್ಲಭಬಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರೀ, ಲಾಲಾ ಲಜಪಥರಾಯ್, ಸುಭಾಷ್ಚಂದ್ರಬೋಸ್,ಡಾ.ಬಿ ಆರ್ ಅಂಬೇಡ್ಕರ್, ವೀರ ಸಾವರ್ಕರ್, ಮಂಗಳ್ಪಾಂಡೆ, ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕಿತ್ತೂರರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಸೇರಿದಂತೆ ಸಾವಿರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟೀಷರ ವಿರುದ್ಧ ಹೋರಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ವನ್ನು ತಂದುಕೊಟ್ಟಿದ್ದಾರೆ. ನಮ್ಮ ಹಿರಿಯರ ತ್ಯಾಗ ಬಲಿದಾನದ ಮೂಲಕ ನಾವು ಪಡೆದಿರುವ ಸ್ವಾತಂತ್ರ್ಯ ವನ್ನು ಉಳಿಸಿಕೊಳ್ಳಲು ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡಬೇಕಾಗಿದೆ ಎಂದು ರಾಮು ಹೇಳಿದರು.
ಬಲ್ಲೇನಹಳ್ಳಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜೆ.ಜಿ.ರಾಜೇಗೌಡ ಮಾತನಾಡಿ ಸರ್ಕಾರಿ ಶಾಲಾ-ಕಾಲೇಜುಗಳ ಉಳಿವಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಬಲ್ಲೇನಹಳ್ಳಿ ಗ್ರಾಮದ ದಾನಿಗಳು ಹಾಗೂ ಪ್ರಥಮ ದರ್ಜೆ ಸಿವಿಲ್ ಮತ್ತು ಎಲೆಕ್ಟ್ರಿಕಲ್ಸ್ ಗುತ್ತಿಗೆದಾರರಾದ ಬಿ.ಎಸ್.ರಾಮು ಅವರು ಕಳೆದ 5 ವರ್ಷಗಳಿಂದ ನಮ್ಮ ಕಾಲೇಜು ವಿಭಾಗದ ಎಲ್ಲಾ ವಿದ್ಯಾರ್ಥಿಗಳ ದಾಖಲಾತಿ ಶುಲ್ಕವನ್ನು ಪಾವತಿಸುವ ಮೂಲಕ ಕಾಲೇಜಿನ ಅಭಿವೃದ್ಧಿ ಸಹಕಾರ ನೀಡುತ್ತಿದ್ದಾರೆ. ಇದೇ ರೀತಿ ಎಲ್ಲಾ ಹಿರಿಯ ವಿದ್ಯಾರ್ಥಿಗಳು ಸಹಾಯ ಮಾಡಿದರೆ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಲ್ಲೇನಹಳ್ಳಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜೆ.ಜಿ.ರಾಜೇಗೌಡ, ಕಾಲೇಜು, ಉಪನ್ಯಾಸಕರಾದ ಬೃಂದಾ, ವೀಣಾ, ಹಿರಿಯ ಶಿಕ್ಷಕರಾದ ಬಿ.ಬಸಪ್ಪ, ಮಮತ, ಅರುಣ್ಕುಮಾರ್, ನಟರಾಜು, ಹೆಚ್.ಬಿ.ಮಲ್ಲಿಕಾರ್ಜುನ್, ರವಿ ಸೇರಿದಂತೆ ಬಲ್ಲೇನಹಳ್ಳಿ ಗ್ರಾಮಸ್ಥರು, ಪೋಷಕರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
