ಬೆಂಗಳೂರು: ಪ್ರತೀ ವರ್ಷದಂತೆ ಈ ಬಾರಿಯೂ ವಿಶ್ವ ನಾವಿಕ ಸಮ್ಮೇಳನ ವಿಜೃಂಭಣೆಯಿಂದ ನಡೆಯಲಿದೆ. ಆಗಸ್ಟ್ 29, 30 ಮತ್ತು 31ರಂದು ಮೂರು ದಿನಗಳ ಕಾಲ ಅಮೆರಿಕದ ಫ್ಲೋರಿಡಾ ರಾಜ್ಯದ ಲೇಕ್ಲ್ಯಾಂಡ್ ನಗರ ಈ ಮಹೋತ್ಸವಕ್ಕೆ ಆತಿಥ್ಯ ವಹಿಸುತ್ತಿದೆ.
ಇದೀಗ 8ನೇ ಬಾರಿ ಆಯೋಜಿಸಲಾಗುತ್ತಿರುವ ಈ ಸಮ್ಮೇಳನವು ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ನಾವಿಕ ಸಮುದಾಯದ ಬಾಂಧವ್ಯ, ಸಂಸ್ಕೃತಿ ಮತ್ತು ಭಾಷಾ ಪರಂಪರೆಯನ್ನು ಒಟ್ಟುಗೂಡಿಸುವ ಸೇತುವೆ ಆಗಿದೆ. ಕನ್ನಡ ಸಾಹಿತ್ಯ, ಸಂಗೀತ, ನೃತ್ಯ, ನಾಟಕ ಮತ್ತು ಕಲಾ ಪ್ರದರ್ಶನಗಳೊಂದಿಗೆ ಸಮ್ಮೇಳನವು ಸಂಭ್ರಮಭರಿತವಾಗಲಿದೆ.
ವಿಶ್ವ ನಾವಿಕ ಸಂಘಟನೆಯ ಆಶ್ರಯದಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಅಮೆರಿಕಾ, ಭಾರತ ಸೇರಿದಂತೆ ಅನೇಕ ದೇಶಗಳಿಂದ ನಾವಿಕರು, ಗಣ್ಯರು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ. ಕನ್ನಡದ ನಾನಾ ಮುಖಗಳ ಪ್ರತಿಭೆಗಳು ಜಾಗತಿಕ ವೇದಿಕೆಯಲ್ಲಿ ಮೆರೆದಾಡಲಿದ್ದು, ವಿದೇಶದಲ್ಲಿರುವ ಕನ್ನಡಿಗರಿಗೆ ಸಾಂಸ್ಕೃತಿಕ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ.
“ನಮ್ಮ ಸಂಸ್ಕೃತಿಯನ್ನು, ನಮ್ಮ ಪರಂಪರೆಯನ್ನು ವಿಶ್ವದ ಕನ್ನಡಿಗರಿಗೆ ಪರಿಚಯಿಸಿ, ನಾವಿಕರ ವೈಭವವನ್ನು ಮತ್ತಷ್ಟು ಉಜ್ವಲಗೊಳಿಸುವುದು ಸಮ್ಮೇಳನದ ಮುಖ್ಯ ಉದ್ದೇಶ” ಎಂದು ಆಯೋಜಕರು ತಿಳಿಸಿದ್ದಾರೆ.
ಮೂರು ದಿನಗಳ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳೊಂದಿಗೆ ಈ ವರ್ಷದ ನಾವಿಕ ವಿಶ್ವ ಕನ್ನಡ ಸಮ್ಮೇಳನ ಭಿನ್ನತೆಯೊಂದಿಗೆ ನೆನಪಾಗುವಂತಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಥೈಲ್ಯಾಂಡ್: 39 ಮೀಟರ್ ಎತ್ತರದ ಗಣೇಶ ಪ್ರತಿಮೆ – ಜಗತ್ತಿನ ಅತಿ ದೊಡ್ಡ ವಿಗ್ರಹ
