ಅದೊಂದು ದಿನ ಮಂಜಯ್ಯನ ಪಟಾಲಂ ತೋಟಗಾರಿಕೆ ಇಲಾಖೆಯ ಕಾಳುಮೆಣಸಿನ ಗಿಡಗಳ ವಿತರಣೆಗೆ ತಮ್ಮೆಲ್ಲರ ಹೆಸರುಗಳನ್ನು ನೋಂದಾಯಿಸಿಕೊಂಡು, ಎಲ್ಲರೂ ಸೇರಿ ಗುಂಪಾಗಿ ಬಂದಿದ್ದರು. ಪ್ರತಿ ರೈತರಿಗೂ ತಲಾ ನೂರೈವತ್ತು ಗಿಡಗಳನ್ನು ವಿತರಿಸಲು ಯೋಜಿಸಲಾಗಿತ್ತು. ಗಿಡಗಳನ್ನು ಆಗ ತಾನೇ ಗುಂಡ್ಲುಪೇಟೆ ಬಳಿಯ ಬಾಸನಕಾನಿನಿಂದ ತರಿಸಿ, ಲಾರಿಯಿಂದ ಇಳಿಸಿ ಜೋಡಿಸಿಡುತ್ತಿದ್ದರು.
ಮುಕ್ಕಾಲು ಭಾಗ ಗಿಡಗಳನ್ನು ಇಳಿಸಿಡುತ್ತಿದ್ದಂತೆ ಮಂಜಯ್ಯ ಅಲ್ಲಿನ ಸೂಪರ್ವೈಸರ್ ಜೊತೆ ಮಾತುಕತೆಗಿಳಿದ. ತನ್ನ ಬಳಿ ನಲವತ್ತು ರೈತರ ಪಟ್ಟಿ ಇದೆ. ಆರು ಸಾವಿರ ಗಿಡಗಳನ್ನು ಕೆಳಗಿಳಿಸದೆ ಇದೇ ಲಾರಿಯಲ್ಲಿ ತಮಗೇ ಕಳಿಸಿಕೊಡಬೇಕೆಂದು ತಾಕೀತು ಮಾಡತೊಡಗಿದ. ಆಲ್ದೂರಿನ ಲಾರಿ ಚಾಲಕನಿಗೆ ಕಡೂರಿಗೆ ಕೊಬ್ಬರಿ ಲೋಡ್ ಮಾಡಲು ಹೋಗುವುದಿದೆ ಎಂದು ಹೇಳುತ್ತಿದ್ದ. ಸೂಪರ್ವೈಸರ್ ಚಾಲಕನ ಮನವೊಲಿಸಲು ಪ್ರಯತ್ನಿಸುತ್ತಿರುವಷ್ಟರಲ್ಲಿ ಅಲ್ಲಿಗೆ ಬಂದ ಗುಣೀಬೈಲಿನ ಕುಮಾರ ಮತ್ತು ಅವನ ಸಂಗಡಿಗರು, “ಯಾರಿಗೂ ಗಿಡ ಕೊಡಕೂಡದು. ಯಾರಾದರೂ ಬುಟ್ಟಿಗೆ ಕೈಹಾಕಿದರೆ ಚಿಂದಿಮಾಡಿ ಹಾಕ್ತೀವಿ” ಎಂದರು.
ಕುಮಾರನ ಗುಂಪಿನಲ್ಲಿ ಎಂಟು ಜನರಿದ್ದರು. ಮಂಜಯ್ಯನ ಜೊತೆಗಿದ್ದ ಸುಮಾರು ಇಪ್ಪತ್ತು ಜನ ಕೈಯಲ್ಲಿದ್ದ ಬ್ಯಾಗು, ಛತ್ರಿ ಮುಂತಾದುವುಗಳನ್ನು ಬದಿಗಿರಿಸಿ, ತೋಳೇರಿಸಿ ಗುದ್ದಾಟಕ್ಕೆ ಸಿದ್ಧರಾದರು.
“ಸರ್ಕಾರ ಕೊಡೋ ಸವಲತ್ತಿಗೆ ಪಂಚಾಯಿತಿ ಮೆಂಬರುಗಳ ಪತ್ರ ಬೇಕಂತೆ! ಆ ನನ್ನ ಮಗ ಏ.ಎಚ್.ಓ. ಅವನ ಅಪ್ಪನ ಮನೆಯದ್ದನ್ನೇ ಕೊಡೋ ಹಾಗೆ ಮಾತನಾಡುತ್ತಾನೆ. ಬೆಳಿಗ್ಗೆ ಎದ್ದು ಮುಖಾನೇ ಸರಿಯಾಗಿ ತೊಳೆಯಲ್ಲ ಅಂಥ ನಮ್ಮೂರಿನ ಪಂಚಾಯಿತಿ ಮೆಂಬರುಗಳ ಪತ್ರವೂ ಬೇಕಂತೆ, ಪತ್ರ! ಪಂಚಾಯಿತಿಯಲ್ಲಿ ತುಂಬಿಕೊಂಡಿರುವವರೆಲ್ಲ ನಮ್ಮ ವೈರಿಗಳೇ. ನಮಗೆಲ್ಲಿ ಪತ್ರ ಕೊಡುತ್ತಾರೆ? ಕೊಟ್ರೂ ಆ ಹಲಾಲುಕೋರರ ಶಿಫಾರಸ್ಸು ನಮಗೆ ದೇವರಾಣೆಗೂ ಬೇಡ. ನಾವೂ ಟ್ಯಾಕ್ಸ್ ಕೊಡ್ತೀವಿ. ಜನರಿಗೆ ಹಂಚೋಕಂತಾನೇ ಈ ವ್ಯವಸ್ಥೆ ಮಾಡಿರೋದು. ಪಂಚಾಯಿತಿ ಮೆಂಬರು ಯಾರು? ಗಿಡ ಏನು ಅವರ ಅಪ್ಪಂದಾ? ಕೋಳಿ ಕೇಳಿ ಏನು ಮಸಾಲೆ ಅರೆಯೋದು? ತಿಕಾ ಮುಚ್ಕೊಂಡು ನಮಗೆಲ್ಲರಿಗೂ ಕೊಡೋ ಹಾಗೆ ಗಿಡ ಕೊಡಬೇಕು. ಯಾವ ಬೋಳಿಮಗನ ಶಿಫಾರಸ್ಸನ್ನೂ ತರೊಲ್ಲ ನಾವು. ಇದೊಂಥರ ‘ನಾನು ಸತ್ತಂಗೆ ಮಾಡ್ತೀನಿ, ನೀನು ಅತ್ತಂಗೆ ಮಾಡು’ ಅನ್ನೋ ಹಾಗೆ” ಎಂದು ಕುಮಾರನ ಗುಂಪಿನವರು ತಲೆಗೊಂದೊಂದು ಮಾತನಾಡತೊಡಗಿದರು.
ಮಂಜಯ್ಯನ ಕಡೆಯವರು ನಿಂತಲ್ಲೇ ಸ್ತಬ್ಧರಾದರು. ಕುಮಾರನ ಕಡೆಯವರ ಆವೇಶ ಕಂಡು, ಇವರೇನಾದರೂ ಅನಾಹುತ ಮಾಡುವ ಹಾಗೆಯೇ ಕಾಣುತ್ತಾರೆ ಎಂದುಕೊಂಡು, ಸೂಪರ್ವೈಸರ್ ಕಡೆಗೆ ಮುಂದೇನು ಎಂಬಂತೆ ನೋಡತೊಡಗಿದರು. ಲಾರಿ ಚಾಲಕ ತನ್ನ ಮುಂದಿನ ಬಾಡಿಗೆಯ ವ್ಯವಸ್ಥೆ ಹಾಳಾಗುತ್ತಿರುವುದನ್ನು ಕಂಡು ಕಂಗಾಲಾಗತೊಡಗಿದ.
ತನ್ನ ಪಕ್ಕದಲ್ಲೇ ನಿಂತಿದ್ದ ಕುಮಾರನ ಗುಂಪಿನವನೊಬ್ಬನನ್ನು ಕರೆದು, “ಅಣ್ಣಾ, ಗಿಡ ಇಳಿಸಿ ಹೋಗ್ತೀನಣ್ಣ; ನನಗೆ ಬೇರೆ ಬಾಡಿಗೆ ಇದೆ” ಎಂದ.
ಅಷ್ಟಕ್ಕೆ ಅವನು ಕುಮಾರನನ್ನು ಬದಿಗೆ ಸರಿಸಿ, ಚಾಲಕನ ಎದೆಗೆ ಕೈಹಾಕಿ, ಲಾರಿಯ ಬಾನೆಟ್ಗೆ ಗುದ್ದಿ ನಿಲ್ಲುವಂತೆ ನೂಕಿದ.
“ನನ್ಮಗನೆ, ಯಾರಿಗೋ ಬೀಳೋ ಗೂಸಾ ನಿನಗೇ ಬೀಳುತ್ತೆ. ಅಜ್ಜಿಗೆ ಅರಿವೆ ಚಿಂತೆ ಅಂದ್ರೆ ಮೊಮ್ಮಗಳು ಇನ್ನೇನೋ ಕೇಳಿದ್ಲಂತೆ! ಈ ನನ್ಮಕ್ಳು ಅಧ್ಯಕ್ಷ, ಸೆಕ್ರೆಟ್ರಿ ಸೇರಿಕೊಂಡು ಏನೇನು ಬಾನಗಡಿ ಮಾಡ್ತಿದಾರೆ ಗೊತ್ತಾ? ರಸ್ತೆ ಗುಂಡಿ ಬಿದ್ದಿದೆ ಅಂತ ನಮ್ಮ ಯುವಕ ಸಂಘದವರು ಶ್ರಮದಾನ ಮಾಡಿ ಗುಂಡಿಗಳಿಗೆಲ್ಲ ಗ್ರಾವೆಲ್ ಹಾಕಿ ರಸ್ತೆ ಸರಿ ಮಾಡಿದರೆ, ಈ ಹಲ್ಕಾಗಳು ಅದಕ್ಕೆ ಪಂಚಾಯಿತಿಯಿಂದ ಬಿಲ್ ಮಾಡಿಸಿಕೊಂಡು ತಿಂದಿದ್ದಾರೆ. ನಿಜವಾಗಿಯೂ ಖರ್ಚಾಗಿರೋದು ಒಂದು ಸಾವಿರ ರೂಪಾಯಿಗಿಂತಲೂ ಕಡಿಮೆ. ಈ ಬೋಳಿಮಕ್ಳು ಆ ಗುಂಡಿ ಮುಚ್ಚಿದ ಕೆಲಸಕ್ಕೆ ಎಂಟು ಸಾವಿರ ರೂಪಾಯಿ ಬಿಲ್ ಮಾಡಿಸಿಕೊಂಡಿದ್ದಾರೆ. ಅಂಥ ಅಯೋಗ್ಯರ ಹತ್ರ ನಾವು ಶಿಫಾರಸ್ಸು ಪತ್ರ ತರಬೇಕಾ?”
“ಸಾಹೇಬರು ಸಹಿ ಹಾಕಿ, ಗಿಡ ಕೊಡಲು ಅಲಾಟ್ಮೆಂಟ್ ಲೆಟರ್ ಬರೆದುಕೊಡದಿದ್ದರೆ ನಾನು ನಿಮಗೆ ಗಿಡ ಕೊಡೋಕೆ ಆಗೊಲ್ಲ. ನನ್ನ ಧರ್ಮಸಂಕಟ ಅರ್ಥ ಮಾಡ್ಕೊಳ್ಳಿ. ನೀವು ಏ.ಎಚ್.ಓ. ಹತ್ರಾನೇ ಮಾತಾಡಿಕೊಂಡು ಏನಾದರೂ ತೀರ್ಮಾನ ಮಾಡ್ಕೊಂಡು ಬನ್ನಿ. ಇಲ್ಲಿ ಹೊಡೆದಾಟ ಮಾಡಬೇಡಿ” ಎಂದ ಸೂಪರ್ವೈಸರ್.
ಕುಮಾರನ ಗುಂಪಿನಲ್ಲಿ ಆಂಗ್ರಿ ಯಂಗ್ಮ್ಯಾನ್ನ ಪ್ರತಿರೂಪದಂತಿದ್ದ ಕೋಳೂರು ಸಂದೀಪ, “ಯಾವನ್ರೀ ಸಾಹೇಬ? ಆ ಕಮಿಷನ್ ತಿನ್ನೋ ಹೇತ್ಲಾಂಡಿನಾ? ಅವನೇನಿದ್ರೂ ನಿನಗೆ ಮಾತ್ರ ಸಾಹೇಬ. ಕಚಡಾ! ಚೇಂಬರ್ಗೆ ಹೋದ್ರೆ ಕೂತ್ಕಳಕ್ಕೆ ಸಹ ಹೇಳಲ್ಲ ರ್ಯಾಸ್ಕಲ್! ಅವರು ಕೂತಿರೋ ಚೇರ್ ಸಮೇತ ನಮ್ದು, ಗೊತ್ತಾಯ್ತಾ? ಅವನನ್ನೇ ಇಲ್ಲಿಗೆ ಬರೋಕೆ ಹೇಳಿ ಕಳಿಸಿ. ಅದೇನು ಪೂಕ್ತಾನೋ ಇಲ್ಲೇ ಪೂಕ್ಲಿ. ಹೋದ ವರ್ಷ ನಮ್ಮೂರಲ್ಲಿ ಆ ಮಹೇಶ ಸ್ಕೂಲಿಗೆ ಗಿಫ್ಟ್ ಅಂತ ನಾಲ್ಕು ಸಾವಿರ ಖರ್ಚು ಮಾಡಿ ಧ್ವಜಕಟ್ಟೆಯ ಕಂಬ ಮಾಡಿಸಿಕೊಟ್ರೆ, ಈ ಬಿಕನಾಸಿ ಮೆಂಬರುಗಳು ಸೇರಿ ಅದಕ್ಕೂ ಒಂಬತ್ತು ಸಾವಿರ ಬಿಲ್ ಮಾಡಿಸಿಕೊಂಡು ಹಂಚಿಕೊಂಡಿದ್ದಾರೆ ಗೊತ್ತಾ?” ಎಂದ.
ಯಾಕೋ ಇದು ಮುಗಿಯುವ ಹಾಗೆ ಕಾಣಲಿಲ್ಲ. ಈ ಚಾಲಕನನ್ನು ಪುಸಲಾಯಿಸಿ, ಮೆಣಸಿನ ಗಿಡಗಳ ಲೋಡ್ ಇಳಿಸದೆ ಹಾಗೆಯೇ ತಮ್ಮ ಜಾಗಕ್ಕೆ ಸಾಗಿಸಬೇಕೆಂದುಕೊಂಡಿದ್ದ ಮಂಜಯ್ಯನ ಕಡೆಯವರು, ಇದೇ ರೀತಿ ಸಮಯ ಕಳೆದರೆ ಒಂದಕ್ಕೆ ಎರಡು ಪಟ್ಟು ಹಣ ಕೊಟ್ಟು ಬೇರೆ ಲಾರಿ ತರಿಸಿ, ಲೋಡಿಂಗ್–ಅನ್ಲೋಡಿಂಗ್ಗೂ ಮತ್ತೆ ಖರ್ಚು ಮಾಡಬೇಕಾಗುತ್ತದೆ ಎಂದು ಯೋಚಿಸಿದರು.
ಆಗ ಮಂಜಯ್ಯ, “ಹೌದೌದು ಸಂದೀಪಣ್ಣ, ಈ ಪಂಚಾಯಿತಿಗಳು ಎಷ್ಟು ಕುಲಗೆಟ್ಟಿವೆ ಅಂದ್ರೆ, ಕೆಲವು ಕಡೆ ಹೆಬ್ಬೆಟ್ಟು ಹಾಕುವವರನ್ನೇ ಅಧ್ಯಕ್ಷರನ್ನಾಗಿ ಮಾಡಿಕೊಂಡು ಸೆಕ್ರೆಟ್ರಿಗಳೇ ರಾಜ್ಯಭಾರ ಮಾಡ್ತಿದ್ದಾರೆ. ಇನ್ನು ಕೆಲವೆಡೆ ಬಿಲ್ ಕಲೆಕ್ಟರ್ಗಳು ಪಂಚಾಯಿತಿ ಕೆಲಸಗಳನ್ನೇ ತಮ್ಮ ಮನಸೋಇಚ್ಛೆ ಬೇಕಾದವರಿಗೆ ಹಂಚುತ್ತಿದ್ದಾರಂತೆ. ಎಲ್ಲಮ್ಮನ ಜಾತ್ರೆ ಮಾಡ್ತಾ ಸರ್ಕಾರದ ದುಡ್ಡನ್ನ ಹಬ್ಬ, ಹುಡಿಹಾರ ಅಂತ ಖರ್ಚು ಮಾಡ್ತಾ ಇದ್ದಾರಂತೆ. ಅದ್ಯಾವುದೋ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರೇ ತಹಸೀಲ್ದಾರರ ಸಹಿ ಹಾಕಿ ನಿವೇಶನ ಹಂಚ್ತಿದ್ದಾನಂತೆ. ಒಂದು ಸೈಟಿಗೆ ಹತ್ತು ಸಾವಿರ ಕಮಿಷನ್ನಂತೆ. ಸೈಟ್ ಸಿಗದವರು ಯಾರೋ ದೂರು ಕೊಟ್ಟರೆ, ನೆಪ ಮಾತ್ರಕ್ಕೆ ಅಮಾನತು ಮಾಡಿ ಮತ್ತೆ ಅದೇ ವಂಚಕನನ್ನು ಕೆಲಸಕ್ಕೆ ತಗೊಂಡಿದ್ದಾರಂತೆ. ಈಗ ಅವನು ಅಂಥ ಕೆಲಸ ಮಾಡೋ ಖದೀಮರಿಗೆ ಗುರುವಾಗಿ, ಯಾರ್ಯಾರಿಗೆ, ಯಾವಾಗ, ಹೇಗೆ, ಎಲ್ಲಿ ಟೋಪಿ ಹಾಕಬಹುದು ಅಂತ ಟ್ಯೂಷನ್ ಕೊಡ್ತಾನಂತೆ. ಎಂಥಾ ಕಾಲ ಬಂತು, ಛೇ!” ಎಂದು ಉದ್ಗರಿಸಿದ.
ಅಷ್ಟರಲ್ಲಿ ಏ.ಎಚ್.ಓ. ತಮ್ಮ ಕಾಲಾಳುಗಳೊಂದಿಗೆ ಬಂದಿಳಿದರು. ಮಂಜಯ್ಯ ದೂರದಿಂದಲೇ ಸಾಹೇಬರಿಗೆ ಅರ್ಥಗರ್ಭಿತವಾಗಿ ಸಲಾಮು ಹೊಡೆದ. ಕುಮಾರ ಮತ್ತು ಅವನ ಗೆಳೆಯರಿಗೆ ಏ.ಎಚ್.ಓ. ಬಂದಿದ್ದು ಗೊತ್ತಾದರೂ ತಿರುಗಿಯೂ ನೋಡಲಿಲ್ಲ.
ಸೂಪರ್ವೈಸರ್ ಏ.ಎಚ್.ಓ. ಬಳಿಗೆ ಓಡಿಹೋದ.
“ಯಾವುದೋ ಒಂದಷ್ಟು ಟ್ರಾನ್ಸಿಟ್ ಡ್ಯಾಮೇಜ್ ಅಂತ ತೋರಿಸಿ ಕೊಟ್ಟು ಕಳಿಸ್ರೀ. ಸುಮ್ಮನೆ ಯಾಕೆ ತರಲೆ ಮಾಡ್ಕೊಳ್ತೀರಿ? ಇವರ ಸಹವಾಸ ನಿಮಗೆ ಗೊತ್ತಿಲ್ವಾ? ಆ ಸ್ಪೈಸಸ್ ಬೋರ್ಡ್ನ ವೇಲಾಯುಧನ್ನ ಎತ್ತಿ ಕುಕ್ಕರಿಸಿದ್ದು, ಆತ ಸೊಂಟ ಮುರಕೊಂಡು ಈ ಊರಿಂದಲೇ ವರ್ಗ ಮಾಡಿಸಿಕೊಂಡು ಹೋದದ್ದು ಮರೆತ್ರಾ?” ಎಂದವರೇ, ಅದೇ ಲಡಾಸು ಜೀಪಿನಲ್ಲಿ ಗೊಸಗೊಸ ಸದ್ದು ಮಾಡುತ್ತಾ ಹೊರಟುಹೋದರು.
“ಸರಿ ಕುಮಾರಣ್ಣ, ನಿಮಗೆ ಬೇಕಾದ ಗಿಡಗಳನ್ನ ನೀವೇ ಸೆಲೆಕ್ಟ್ ಮಾಡಿಕೊಂಡು ತಗೊಂಡು ಹೋಗಿ. ಬನ್ನಿ, ಬನ್ನಿ” ಎಂದ ಸೂಪರ್ವೈಸರ್.
“ಅದೆಲ್ಲ ಆಗೊಲ್ಲ. ನಿಮ್ಮ ಪ್ರೊಸೀಜರ್ ಪ್ರಕಾರವೇ ಆಫೀಸ್ ರೆಕಾರ್ಡ್ನಲ್ಲೆಲ್ಲ ದಾಖಲಾಗಬೇಕು. ನಾವ್ಯಾರು ಶಿಫಾರಸ್ಸು ಪತ್ರ ತರಲ್ಲ, ನೆನಪಿರಲಿ. ಮಂಜಣ್ಣಾ, ನೀವು ಗಿಡ ತಗೊಂಡು ಹೋಗಿ. ರೀ ಸೂಪರ್ವೈಸ್ರೇ, ನಾಳೆ ಬರ್ತೀವಿ. ನಿಮ್ಮ ಸಾಹೇಬರಿಗೆ ಹೇಳಿ, ಯಾರದ್ದೂ ಪತ್ರ ತರಲ್ಲ. ನಿಮ್ಮ ಸಾಹೇಬರೇ ಅಲಾಟ್ಮೆಂಟ್ ಲೆಟರ್ ಕೊಡಬೇಕು, ಗೊತ್ತಾಯ್ತಾ? ಬನ್ರೋ, ಕೊನೇ ಬಸ್ಸು ಮಿಸ್ಸಾದ್ರೆ ಕಷ್ಟ” ಎಂದವನೇ, ದುಸದುಸನೆ ಉಸಿರು ಬಿಡುತ್ತಾ ಅಲ್ಲಿಂದ ನಿರ್ಗಮಿಸಿದ.
ಲಾರಿ ಚಾಲಕನನ್ನು ಪುಸಲಾಯಿಸಿ ಇನ್ನೂರು ರೂಪಾಯಿ ಕೊಟ್ಟು, ಎಲ್ಲಾ ಬುಟ್ಟಿಗಳನ್ನು ಚೆಟ್ಟಿಯಾರರ ಕೋಣನಕಾನು ಎಸ್ಟೇಟಿಗೆ ಡಂಪ್ ಮಾಡಿಸಿದ. ಚೆಟ್ಟಿಯಾರನಿಂದ ಆರು ಸಾವಿರ ರೂಪಾಯಿ ಹಣ ಇಸ್ಕೊಂಡು, ಜೊತೆಯವರಿಗೆ ರಾಜಾ ವಿಸ್ಕಿ ಕುಡಿಸಿ, ಬಾಯಮ್ಮನ ಹೋಟೆಲಿನಲ್ಲಿ ಭರ್ಜರಿ ಪೋರ್ಕ್ ಊಟ ಹಾಕಿಸಿ, ಕೈಗೆ ಐವತ್ತು–ಐವತ್ತು ರೂಪಾಯಿ ಕೊಟ್ಟು, ತಾನು ಮೂರು ಸಾವಿರ ರೂಪಾಯಿಯನ್ನು ಜೇಬಿಗಿಳಿಸಿದ. ನಂತರ ಕೆಮ್ಮಿ, ಕ್ಯಾಕರಿಸುತ್ತಾ ಊರಿಗೆ ಹೋಗಲು ನಾಲ್ಕು ಆಟೋಗಳನ್ನು ಎಂಗೇಜ್ ಮಾಡಿದ.
ಈ ರೀತಿಯ ಇತಿಹಾಸವಿರುವ ಮಂಜಯ್ಯ, ಮೈಯಲ್ಲಿ ಬೆವರಿಳಿಯದಂತಹ ಮೆತ್ತನೆಯ ಕೆಲಸಗಳನ್ನು ಆಯ್ದುಕೊಂಡು, ಮುಂದಿನ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ನಿಲ್ಲುವ ಲೆಕ್ಕಾಚಾರ ನಡೆಸಿದ್ದ.

