ತುಮಕೂರು: ಪ್ರಸಕ್ತ ಸಾಲಿನ ಶಿರಾ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪತ್ರಕರ್ತ ಸತೀಶ್ ಹಾರೋಗರೆ ಅವರು ಆಯ್ಕೆಯಾಗಿದ್ದಾರೆ.
ಮೂಲತಃ ಶಿರಾ ತಾಲ್ಲೂಕಿನವರಾದ ಸತೀಶ್ ಹಾರೋಗರೆ ಅವರು ಕಳೆದ 16 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, ಜಿಲ್ಲಾ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಕಸ್ತೂರಿ 24*7, ಸಮಯ ಟಿವಿ, ಪಬ್ಲಿಕ್ ಟಿವಿ ಹಾಗೂ ಬಿಟಿವಿ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. 2019ರಿಂದ 2022ರವರೆಗೆ ಜಿಲ್ಲಾ ನಿರ್ದೇಶಕರಾಗಿ, 2020ರಿಂದ 2025ರವರೆಗೆ ಜಿಲ್ಲಾ ಕಾರ್ಯದರ್ಶಿಯಾಗಿ ಹಾಗೂ 2025ರಿಂದ 2028ರವರೆಗೆ ಜಿಲ್ಲಾ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಲ್ಲದೆ, ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ವಸತಿ ಸಮಿತಿಯ ಅಧ್ಯಕ್ಷರಾಗಿ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮುಖ್ಯ ಸಂಚಾಲಕರಾಗಿ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸುದೀರ್ಘ ಅನುಭವ, ಸಂಘಟನಾ ಚಟುವಟಿಕೆಗಳಲ್ಲಿನ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸೇವೆಯನ್ನು ಪರಿಗಣಿಸಿ ಸತೀಶ್ ಹಾರೋಗರೆ ಅವರನ್ನು ಶಿರಾ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅವರ ಆಯ್ಕೆಗೆ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
