ಬೆಂಗಳೂರು: ರಾಜ್ಯಗಳು ಸ್ವೀಕರಿಸಿದ ವಿದೇಶಿ ಬಂಡವಾಳ ಹೂಡಿಕೆ ಪಟ್ಟಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ ಹಿಂದಿಕ್ಕಿ ರಾಜ್ಯವು ಮೊದಲ ಸ್ಥಾನಕ್ಕೆ ಏರಿದೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯಕ್ಕೆ 50,107 ಕೋಟಿ ರೂ.ಬಂಡವಾಳ ಹರಿದುಬಂದಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಮಹಾರಾಷ್ಟ್ರವನ್ನು ಹಿಂದಿಕ್ಕಿ ರಾಜ್ಯ ಪ್ರಥಮ ಸ್ಥಾನ ತಲುಪಿದೆ. ಇದು ಕರ್ನಾಟಕದ ಬಗೆಗೆ ಅಂತಾರಾಷ್ಟ್ರೀಯ ಹೂಡಿಕೆದಾರರು ಹೊಂದಿರುವ ವಿಶ್ವಾಸ ಮತ್ತು ಭರವಸೆಯನ್ನು ಪ್ರತಿಬಿಂಬಿಸುತ್ತದೆ.
ಜೂನ್ ತ್ರೈಮಾಸಿಕದಲ್ಲಿ ದೇಶದಲ್ಲಿನ ವಿದೇಶಿ ನೇರ ಹೂಡಿಕೆ (FDI) ಪ್ರಮಾಣ ಶೇ.15ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿ ಮಹಾರಾಷ್ಟ್ರ (47,188 ಕೋಟಿ), ತಮಿಳುನಾಡು (23,505 ), ಹರಿಯಾಣ (11,444 ಕೋಟಿ ), ಗುಜರಾತ್ (10,564 ಕೋಟಿ), ದೆಹಲಿ (8,803 ಕೋಟಿ) ಮತ್ತು ತೆಲಂಗಾಣ (3,477 ಕೋಟಿ) ಇವೆ. ಇದೇ ಅವಧಿಯಲ್ಲಿ ಅಮೆರಿಕದ ಹೂಡಿಕೆಯ ಪ್ರಮಾಣದಲ್ಲಿ ಮೂರು ಪಟ್ಟು ಏರಿಕೆಯಾಗಿದೆ.
ಅಮೆರಿಕವು ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿದ ದೇಶವಾಗಿದೆ. ಈ ತ್ರೈಮಾಸಿಕದಲ್ಲಿ ಅಮೆರಿಕದಿಂದ ಒಟ್ಟು 49,379 ಕೋಟಿ ಹೂಡಿಕೆಯಾಗಿದೆ. ಕಳೆದ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ 13,205 ಕೋಟಿ ಬಂಡವಾಳ ಒಳಹರಿವಾಗಿತ್ತು.
2000 ಏಪ್ರಿಲ್ನಿಂದ 2025 ರ ವರೆಗೆ ಅಮೆರಿಕ 6.71 ಲಕ್ಷ ಕೋಟಿ ಹೂಡಿಕೆ ಮಾಡಿದೆ. ಈ ಮೂಲಕ ಮೂರನೇ ಅತಿಹೆಚ್ಚು ಎಫ್ಡಿಐ ಹೂಡಿಕೆ ಮಾಡಿದ ದೇಶವಾಗಿದೆ. ಮಾರಿಷಸ್ ₹16.04 ಲಕ್ಷ ಕೋಟಿ ಹೂಡಿಕೆ ಮಾಡಿದ್ದು, ಅತಿ ಹೆಚ್ಚು ಹೂಡಿಕೆ ಮಾಡಿದ ದೇಶವಾಗಿದೆ. ಸಿಂಗಪುರ ಎರಡನೇ ಸ್ಥಾನದಲ್ಲಿದ್ದು, 15.80 ಲಕ್ಷ ಕೋಟಿಯಾಗಿದೆ.
ಜೂನ್ ತ್ರೈಮಾಸಿಕದಲ್ಲಿ ಹೂಡಿಕೆ ಮಾಡಿದ ದೇಶಗಳ ಪೈಕಿ ಸಿಂಗಾಪುರ, ಮಾರಿಷಸ್, ಸೈಪ್ರಸ್, ಯುಎಇ, ಕೇಮನ್ ಐಸ್ಲ್ಯಾಂಡ್, ನೆದರ್ಲೆಂಡ್ಸ್, ಜಪಾನ್ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿ ಇವೆ.
ಲಕ್ಷಾಧಿಪತಿ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1: ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯವು ಲಕ್ಷಾಧಿಪತಿ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿ ನಿಂತಿದೆ ಎಂದು ಕಾಂಗ್ರೆಸ್ ಈ ಹಿಂದೆ ತಿಳಿಸಿತ್ತು.
ಈ ಸಂಬಂಧ ಎಕ್ಸ್ ಖಾತೆಯಲ್ಲಿ “ಭರವಸೆಯ ಪಥದಲ್ಲಿ ಕರ್ನಾಟಕ” ಎಂದು ಬರೆದುಕೊಂಡಿದ್ದ ಕರ್ನಾಟಕ ಕಾಂಗ್ರೆಸ್, ಲಕ್ಷಾಧಿಪತಿ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ನಮ್ಮ ರಾಜ್ಯ ದೇಶದ ಮುಂಚೂಣಿಯಲ್ಲಿ ನಿಂತಿದೆ. ಇದು ಕೇವಲ ಆರ್ಥಿಕ ಸಾಧನೆಯಷ್ಟೇ ಅಲ್ಲ, ಜನರ ಶ್ರಮಕ್ಕೆ ನ್ಯಾಯ ನೀಡುವ ಕಾಂಗ್ರೆಸ್ ಸರ್ಕಾರದ ಜನಪರ ನೀತಿಗಳ ಪ್ರತಿಫಲ. ಜನರ ವಿಶ್ವಾಸ, ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿಯ ಸಂಕಲ್ಪವೇ ಕರ್ನಾಟಕವನ್ನು ಸಮೃದ್ಧಿಯ ದಾರಿಗೆ ಮುನ್ನಡೆಸುತ್ತಿದೆ ಎಂದಿತ್ತು.
