ತುಮಕೂರು: ನಗರದ ಹಿರಿಯ ಆಟೋ ಚಾಲಕ ಹಾಗೂ ಸಮಾಜ ಸೇವಕರಾದ ಕೆ.ಎಂ. ಶಿವಕುಮಾರ್ (ಆಟೋ ಯಡಿಯೂರಪ್ಪ) ಅವರು ಈ ಬಾರಿಯ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಲತಃ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕಳ್ಳಿಪಾಳ್ಯದವರಾದ ಕೆ.ಎಂ. ಶಿವಕುಮಾರ್ ಅವರು ಮಲ್ಲಪ್ಪ ಮತ್ತು ಮುದ್ದಮ್ಮ ದಂಪತಿಯ ಪುತ್ರ. ಆರಂಭದಲ್ಲಿ ಕೆಲವು ವರ್ಷಗಳ ಕಾಲ ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡಿದ್ದ ಅವರು, ಕಳೆದ ಸುಮಾರು 28 ವರ್ಷಗಳಿಂದ ತುಮಕೂರು ನಗರದಲ್ಲಿ ಆಟೋ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿಯ ಜೊತೆಯಲ್ಲಿಯೇ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಪ್ಪಟ ಅಭಿಮಾನಿಯಾಗಿರುವ ಇವರು ‘ಆಟೋ ಯಡಿಯೂರಪ್ಪ’ ಎಂದೇ ಜನಪ್ರಿಯರಾಗಿದ್ದಾರೆ. ತಮ್ಮ ಆಟೋರಿಕ್ಷಾದಲ್ಲಿ ಗರ್ಭಿಣಿಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುತ್ತಿರುವುದು ಇವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ವಿವಿಧ ದಾನಿಗಳ ಸಹಕಾರದೊಂದಿಗೆ ಸಾವಿರಾರು ಆಟೋ ಚಾಲಕರಿಗೆ ದಿನಸಿ ಕಿಟ್ಗಳನ್ನು ವಿತರಿಸಿ ನೆರವಾಗಿದ್ದಾರೆ. ಅಲ್ಲದೆ, ಪ್ರಯಾಣಿಕರು ತಮ್ಮ ಆಟೋರಿಕ್ಷಾದಲ್ಲಿ ಮರೆತು ಬಿಟ್ಟುಹೋಗುವ ಹಣ, ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಪ್ರಾಮಾಣಿಕತೆಯಿಂದ ಮರಳಿಸುವ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ.
ಹೀಗೆ ವೃತ್ತಿಪರ ಸೇವೆಯೊಂದಿಗೆ ಪ್ರಾಮಾಣಿಕತೆ, ಮಾನವೀಯತೆ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಆಟೋ ಯಡಿಯೂರಪ್ಪ ಅವರ ಸೇವೆಯನ್ನು ಪರಿಗಣಿಸಿ ಜಿಲ್ಲಾಡಳಿತ ಈ ಬಾರಿಯ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿಗೆ ಭಾಜನರಾಗಿರುವ ಕೆ.ಎಂ. ಶಿವಕುಮಾರ್ ಅವರನ್ನು ಶಾಸಕರು, ಸಂಸದರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್. ಕೆಂಪರಾಜಯ್ಯ, ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್ ಸೇರಿದಂತೆ ವಕೀಲರು ಹಾಗೂ ಪತ್ರಕರ್ತರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
