ಚನ್ನರಾಯಪಟ್ಟಣ: ಒಬ್ಬರಿಗೊಬ್ಬರ ಸಹಕಾರದಿಂದ ಮಾತ್ರ ಸಹಕಾರಿ ಕ್ಷೇತ್ರ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕತೆ ಒಳ್ಳೆಯ ಭಾವನೆಗಳೊಂದಿಗೆ ಕೆಲಸ ಮಾಡಲು ಮುಂದಾದಾಗ ರೈತರಿಗೆ ಅನುಕೂಲ ಮಾಡಲು ಸಾಧ್ಯವೆಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.
ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ತತ್ವದಡಿ ಎಲ್ಲರೂ ಸಾಗಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು: ರೈತರ ಅಭ್ಯುದಯಕ್ಕಾಗಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉನ್ನತಮಟ್ಟಕ್ಕೆ ಬೆಳೆಸಿದ್ದಾರೆ. ಜಿಲ್ಲೆಯ ಸಹಕಾರಿ ರಂಗವೂ ಒಂದು ಹಂತದಲ್ಲಿ ತನ್ನ ನೌಕರಿಗೆ ಸಂಬಳ ಕೊಡಲು ಹಣವಿಲ್ಲದೆ ಸೊರಗಿತ್ತು. ಆಗ ದೇವೇಗೌಡರು ರೂಪಿಸಿದ ಪೈಲಟ್ ಯೋಜನೆಯ ಫಲವಾಗಿ ಇಂದು ಜಿಲ್ಲೆಯ ಸಹಕಾರಿ ಕ್ಷೇತ್ರವೂ 2 ಸಾವಿರ ಕೋಟಿ ರೂ. ವಹಿವಾಟು ಮಾಡುತ್ತಿದೆ. ಜಿಲ್ಲೆಯಲ್ಲಿ 1300 ಕೋಟಿ ರೂ. ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ ಎಂದರು.

ಮೈಸೂರು ರಸ್ತೆಯಲ್ಲಿನ ಟಿಎಪಿಸಿಎಂಎಸ್ ಭವನ ಪಾಳು ಬಿದ್ದಿತ್ತು. ಅಲ್ಲೀಗ ಒಂದು ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಆರ್ಥಿಕ ಮೂಲವನ್ನಾಗಿಸಲಾಗಿದೆ. ಅದೇ ರೀತಿ ಕಳೆದ 5ವರ್ಷಗಳಲ್ಲಿ ಗೊಬ್ಬರ ಮಾರಾಟದಲ್ಲಿ 15 ಕೋಟಿ ರೂ. ವಹಿವಾಟು ನಡೆಸಿದ್ದು, ಲಾಭದ ದೃಷ್ಟಿಯಿಂದ ಮಾಡದೆ ಸೇವೆಯ ದೃಷ್ಟಿಯಿಂದ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಇದೀಗ ಹಳೇ ಕಟ್ಟಡಗಳ ನವೀಕರಣಗೊಳಿಸಿ, ಟಿಎಪಿಸಿಎಂಸ್ ಅವರಣದಲ್ಲಿ ಶುದ್ದ ಕುಡಿಯುವ ನೀರಿನ
ಘಟಕಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಇಲ್ಲಿನ ಅವರಣಕ್ಕೆ ಕಾಂಕ್ರೀಟ್ ನೆಲಹಾಸು ಹಾಕಿಸಲಾಗುವುದು ಎಂದು ತಿಳಿಸಿದರು.ಸಂಘದ ಅಧ್ಯಕ್ಷ ಎಂ.ಆರ್.ಅನಿಲ್ ಕುಮಾರ್ ಮಾತನಾಡಿ, ವಾರ್ಷಿಕ ಸಭೆಯ ಮೂಲಕ ಷೇರುದಾರರು ಮತ್ತು ಆಡಳಿತ ಮಂಡಳಿಯ ನಡುವಿನ ಸಂಬಂಧ ಗಟ್ಟಿಗೊಳ್ಳಿಸುವ ಕೆಲಸವಾಗುತ್ತಿದೆ. ಆಯಾ ವರ್ಷದ ಖರ್ಚು ವೆಚ್ಚವನ್ನು ಸದಸ್ಯರಿಗೆ ಒಪ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿಗೆ ನಿಮ್ಮ ಸಲಹೆ ಸೂಚನೆ ಅಗತ್ಯ, ರೈತರಿಗೆ ರಿಯಾಯಿತಿ ದರದಲ್ಲಿ ಗೊಬ್ಬರ ಮಾರಾಟ ಮಾಡುತ್ತಿದ್ದು, ನಮ್ಮ ಸಂಘವು ರಸಗೊಬ್ಬರ ಮಾರಾಟದಲ್ಲಿ ಮೈಸೂರು ವಲಯದಲ್ಲಿ ಅತ್ಯುತ್ತಮ ಮಾರಾಟ ಮಾಡಿದ ಹೆಗ್ಗಳಿಕೆ. ಹೊಂದಿ ರಾಜ್ಯ ಪ್ರಶಸ್ತಿ ಗಳಿಸಿದೆ. ಇದು ನಮಗೆ ಮತ್ತಷ್ಟು ಪ್ರೇರಣೆಯಾಗಿದೆ. ರೈತ ವರ್ಗಕ್ಕೆ ಬೇಕಾದ ಅನುಕೂಲಗಳನ್ನು ರೂಪಿಸುವಲ್ಲಿ ನಾವು ಬದ್ಧರಾಗಿದ್ದೇವೆ. ಶಾಸಕರ
ಸೂಚನೆಯ ಮೇರೆಗೆ ಸಂಘವು ಅವರ ಸಹಕಾರದಿಂದ ಉತ್ತಮ ಯೋಜನೆಗಳನ್ನು ರೂಪಿಸುವಲ್ಲಿ ಮುಂದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಶಾಸಕರಾದ ಸಿ ಎನ್ ಬಾಲಕೃಷ್ಣ, ಟಿಎಪಿಎಂಎಸ್ ನ ಅಧ್ಯಕ್ಷರಾದ ಎಮ್ ಆರ್ ಅನಿಲ್ ಕುಮಾರ್,ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕರಾದ ಸಿ ಎನ್ ಪುಟ್ಟಸ್ವಾಮಿಗೌಡ, ಪುರಸಭಾ ಅಧ್ಯಕ್ಷ ಮೋಹನ್, ಉಪಾಧ್ಯಕ್ಷೆ ಕವಿತಾರಾಜು, ಪುರಸಭಾ ಸದಸ್ಯರಾದ ರೇಖಾಅನಿಲ್, ಬನಶಂಕರಿ ರಘು, ರಾಣಿಕೃಷ್ಣ, ಸುಜಾತ, ಹೇಮಾವತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ವೆಂಕಟೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ಟಿಎಪಿಎಂಎಸ್ ಉಪಾಧ್ಯಕ್ಷರಾದ ಯೋಗೇಶ್ ಗುರಿಗಾರನಹಳ್ಳಿ, ನಿರ್ದೇಶಕರುಗಳಾದ ವಿ ಎನ್ ರಾಜಣ್ಣ,ಬಿ ಎಚ್ ಶಿವಣ್ಣ,ಪರಮಕೃಷ್ಣೇಗೌಡ, ಕುಂಬಾರಹಳ್ಳಿ ರಮೇಶ್, ಸಿ ಜಿ ಜಗದೀಶ್, ಚಂದ್ರಕಲಾ ಮಂಜೇಗೌಡ, ಬಿ ಕೆ ಮನು, ಎಸ್ ಜಿ ಚಿರಂಜೀವಿ, ನಿವೃತ್ತ ಕಾರ್ಯದರ್ಶಿ ಮಂಜುಳಮ್ಮ, ಕಾರ್ಯದರ್ಶಿ ಸಂಧ್ಯಾ, ಸಹಕಾಯದರ್ಶಿ ಬಾಗೂರು ಸತೀಶ್, ಟಿಎಪಿಎಂಎಸ್ ನೌಕರರಾದ ಜಯಸೂರ್ಯ, ಜಯಪಾಲ, ತ್ರಿವೇಣಿ, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
