ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಟೂರಿಸ್ಟ್ ಸ್ಪಾಟೂ…….!!
ಮೂಡಿಗೆರೆಯಲ್ಲಿ ಸಹಜವಾಗಿ ಘಟಿಸುವ ಅನೇಕ ವಿದ್ಯಮಾನಗಳು ಕುತೂಹಲಕಾರಿಯಾಗಿರುತ್ತವೆ.
ಯಾರೋ ಏನನ್ನೋ ವ್ಯಾಪಾರ ಮಾಡುತ್ತಿರುತ್ತಾರೆ. ಚೌಕಾಸಿ ನಡೆಯುತ್ತಿರುತ್ತದೆ. ವ್ಯಾಪಾರಿ ಅಥವಾ ಗ್ರಾಹಕನಿಗೆ ಯಾವ ರೀತಿಯಲ್ಲೂ ಸೂತ್ರ ಸಂಬಂಧವಿಲ್ಲದವನ್ಯಾರೋ ಇದ್ದಕ್ಕಿದ್ದಂತೆ ಮದ್ಯೆ ತಲೆಹಾಕಿ ಯಾವುದೋ ಒಂದು ಬೆಲೆ ಹೇಳಿ `ಅಷ್ಟಕ್ಕೇ ಕೊಡೋ ಮಾರಾಯ’ ಎಂದು ಫರ್ಮಾನು ಹೊರಡಿಸಿ ಮಾಯವಾಗುತ್ತಾನೆ. ಅಲ್ಲಿ ವ್ಯಾಪಾರ ಘಟಿಸುತ್ತದೆ. ಯಾರೋ ಹೇಗೋ ಪ್ರವೇಶಿಸಿ ಅಂತರ್ಧಾನವಾಗುತ್ತಾನೆ.
ನಾನು ಮೂಡಿಗೆರೆ ಪಟ್ಟಣದಲ್ಲಿ ಮನೆ ಮಾಡಿ ವಾಸವಿದ್ದ ಸಂದರ್ಭ. ಎಂ.ಜಿ.ರಸ್ತೆ ಬದಿಯಲ್ಲಿ ಸ್ಕೂಟರ್ ಮೇಲೆ ಕುಳಿತ್ಕೊಂಡು ಪೇಟೆ ಬೀದಿಯನ್ನು ಅವಲೋಕಿಸುತ್ತಿದ್ದರು ತೇಜಸ್ವಿ. `ಏನ್ ಇಲ್ಲಿ ನಿಂತಿದ್ದೀರಿ?’ ಎಂದೆ. ತಪಸ್ಸಿಗೆ ಭಂಗ ಬಂದವರಂತೆ ತಿರುಗಿ ನೋಡಿದವರ ಮುಖದಲ್ಲಿ ತಥ್ ಎಂಬ ಬೇಜಾರಿತ್ತು. ನನಗೂ ಈಗ ಮಾತನಾಡಿಸಬಾರದಿತ್ತು ಅನ್ನಿಸಿತ್ತು. ಮಾತನಾಡಿಸಿಯಾಗಿತ್ತು. ಅವರಿಗೆ ಖಂಡಿತವಾಗಿಯೂ ಕಿರಿಕಿರಿಯಾಗಿತ್ತು. ಇನ್ನೇನು ಮಾತು ಮುಂದುವರಿಸಬೇಕಿತ್ತಲ್ಲ.
`ನನ್ನ ಮನೆ ಇಲ್ಲೇ ಇದೆ ಬನ್ನಿ’ ಎಂದೆ. ‘ಇಲ್ಲ ಕಣಯ್ಯ ಬೇಕಾದಷ್ಟು ಕೆಲ್ಸ ಇದೆ, ಇನ್ಯಾವತ್ತಾದ್ರೂ ನೋಡ್ತೀನಿ’ ಅಂದ್ರು. ಮತ್ತೊಮ್ಮೆ ‘ಬನ್ನಿ ಬಿಡುವಾಗಿದ್ದೀರಲ್ಲ’ ಎಂದೆ. ‘ನಿನ್ ಮನೆಯೇನು ಟೂರಿಸ್ಟ್ ಸ್ಪಾಟಾ? ಹ್ಹೆ ಹ್ಹೆ’ ಎಂದವರೇ ಸ್ಕೂಟರ್ ನ ಸ್ಟಾರ್ಟರ್ ಒದ್ದು ಸೀದಾ ಮನೆ ಕಡೆಗೆ ಹೊರಟರು. ನನ್ನ ಜೊತೆ ಗೆಳೆಯ ಹೆಬ್ಬಾರ್ ಸಹ ಇದ್ದರು. ಅವರ ಮಾತಿಗೆ ಸರಿಯಾಗಿ ಹೆಬ್ಬಾರ್ ಬೇರೆ ‘ಟೂರಿಸ್ಟ್ಗಳಿಗೆ ಎಂಟ್ರಿ ಟಿಕೇಟ್ಗೆ ಏನು ಚಾರ್ಜ್ ಮಾಡ್ತೀರಿ?’ ಎಂದು ಗಾಯಕ್ಕೆ ಉಪ್ಪು ಸವರಿದರು.
ಮಾರನೇ ದಿನ ಬೆಳಗ್ಗೆ ಏಳು ಗಂಟೆಗೆ ಬಾಗಿಲು ಟಕಟಕ ತಟ್ಟಿದಂತಾಯ್ತು. ಭಾನುವಾರವಾದ್ದರಿಂದ ನಿಧಾನಕ್ಕೆ ಎದ್ದರಾಯ್ತೆಂದು ಹಾಸಿಗೆಯಲ್ಲಿ ಮಲಗಿಕೊಂಡೇ ಹೆಂಚೆಣಿಸುತ್ತಿದ್ದೆ. ಬಾಗಿಲು ತೆಗೆದು ನೋಡಿದರೆ ತೇಜಸ್ವಿ! ಆಶ್ಚರ್ಯ, ಗಡಿಬಿಡಿಯಾಯ್ತು. ‘ಬನ್ನಿ ಬನ್ನಿ ನಾನಿನ್ನೂ ಎದ್ದಿರಲಿಲ್ಲ.’ “ಸೋಮಾರಿ, ಟೈಮೆಸ್ಟಾಗಿದೆ ನೋಡು. ನಿಮ್ಮಂತ ಹುಡುಗರೆಲ್ಲಾ ಇಷ್ಟೊತ್ತು ಮಲಗಿಕೊಂಡಿದ್ರೆ ಸರೀಯಾಯ್ತು. ಇವತ್ತು ಭಾನುವಾರ ಅಲ್ವಾ, ನಿನಗೇನಾದ್ರೂ ತಲೆ ಹೋಗೋ ಕೆಲಸ ಇದೆಯಾ?” ಅಂದರು.

ಮನೆಯವರೆಗೂ ಬಂದು ಕರೆದರೆ ಬರೋಲ್ಲ ಅನ್ನೋದು ಅವಿವೇಕದ ಪರಮಾವಧಿ ಎಂದೆನಿಸಿ `ಮುಖನಾದ್ರೂ ತೊಳೆದುಕೊಂಡು ಬರಲಾ?’ ಎಂದೆ. ‘ಎಂತಾದಾದ್ರೂ ಮಾಡು ಮಾರಾಯ. ಬೇಗ ಹೊರಡು’ ಎಂದು ಖಾಲಿಯಿದ್ದ ಖುರ್ಚಿಯಲ್ಲಿ ಕುಳಿತರು. ರಪರಪ ಸ್ನಾನ ಮಾಡಿದವನೇ ‘ಏನು ವಿಚಾರ, ಯಾವ್ಕಡೆ ಹೋಗ್ಬೇಕು’ ಎಂದೆ.
‘ಹುರುಡಿ ಹತ್ರ ಯಾವುದೋ ವಿಶೇಷ ಹಕ್ಕಿ ಮರದ ಪೊಟರೆಯೊಳಗೆ ಮೊಟ್ಟೆ ಇಟ್ಟು ಕಾವು ಕೊಡ್ತಿದೆಯಂತೆ ಆ ತರದ ಹಕ್ಕೀನ ಅವರು ಈ ಹಿಂದೆ ನೋಡಿಲ್ಲವಂತೆ. ಹೋಗಿ ಬರೋಣ ಬಾ. ರಘೂನೂ ಬರ್ತೀನಿ ಅಂತ ಹೇಳಿದಾನೆ. ಹಾಗೇ ಹೋಗ್ತಾ ಕರೆದ್ಕೊಂಡ್ಹೋಗೋಣ’ ಎಂದರು.
ಹಳ್ಳಿ ಭಾಗದ ನಿಜ ನಿಸರ್ಗಪ್ರೇಮಿಗಳು ನೀಡುವ ವರ್ತಮಾನವನ್ನು, ಮಾಹಿತಿಯನ್ನು ಖಚಿತವಾದ ಪುರಾವೆ ಎಂದೇ ಸ್ಪಷ್ಟವಾಗಿ ಗುರುತಿಸುವ ಪ್ರಾಮಾಣಿಕತೆ ಹಾಗೂ ಅಚಲ ವಿಶ್ವಾಸ ಮುಂಚಿನಿಂದಲೂ ರೂಢಿಸಿಕೊಂಡಿದ್ದ ತೇಜಸ್ವಿಯವರಿಗೆ ಯಾವುದೂ ಗೌಣವಲ್ಲ, ಯಾರೂ ಅಮುಖ್ಯರಾಗಿರಲಿಲ್ಲ. ಅರಿಸ್ಟಾಟಲ್ಗೆ ನೀಡುವ ಮಾನ್ಯತೆಯನ್ನು ಚೀಂಕ್ರ ಮೇಸ್ತ್ರಿಗೂ ನೀಡಿದ್ದಾರೆ. ಯಂಕ್ಟ, ಕರಿಯಪ್ಪ, ಚೀಂಕ್ರ, ಮಂದಣ್ಣ, ಕಾಳಪ್ಪ ಮುಂತಾದ ಸಾಮಾನ್ಯಾತಿಸಾಮಾನ್ಯ ಪಾತ್ರಗಳು ಕೂಡ ದಂಗುಬಡಿಸುವ ಸೋಜಿಗದ ಸಂಗತಿಗಳನ್ನು ಮುಖ್ಯವಲ್ಲವೇನೋ ಎಂಬಂತೆ ಆಡುಮಾತಿನಲ್ಲಿ ಹೇಳಿಬಿಡುತ್ತವೆ.
ರಾಘವೇಂದ್ರರನ್ನು ಜೊತೆಯಲ್ಲಿ ಕರೆದೊಯ್ಯಲು ಅವರ ಮನೆಯ ಬಳಿ ತೇಜಸ್ವಿ ಹಾಗೂ ನಾನು ನಿಂತಿದ್ದೆವು. ಯಾವುದೋ ಒಂದು ಐಷಾರಾಮಿ ಕಾರೊಂದು ನಮ್ಮ ಬಳಿ ಬಂದು ಸರಕ್ಕೆಂದು ನಿಂತಿತು. ಕಾರಿನ ಕಪ್ಪುಗಾಜು ನಿದಾನವಾಗಿ ಕೆಳಗಿಳಿಯಿತು.
`ನಮಸ್ಕಾರಾ ಸಾರ್’ ಎಂದಿತು ಒಳಗಿನ ಕಪ್ಪು ಕನ್ನಡಕದ ವ್ಯಕ್ತಿ. ತೇಜಸ್ವಿ ತಿರುಗಿ
`ನಮಸ್ಕಾರ’ ಎಂದರು.
`ಇಲ್ಲೇ ಸಕಲೇಶಪುರದಲ್ಲಿ ಮದುವೆಯಿದೆ. ಅದಕ್ಕೆ ಫ್ಯಾಮಿಲಿಯೆಲ್ಲ ಹೋಗ್ತಿದ್ದೀವಿ’ ಎಂದರು.
ತೇಜಸ್ವಿ ಸುಮ್ಮನೆ ನಗೆಮುಖ ತೋರಿದರು.
ಕಾರು ಮುಂದೆ ಹೋಯಿತು.
ನನ್ನೆಡೆಗೆ ತಿರುಗಿ `ನಾವೇನಾದ್ರೂ ಅವರನ್ನು ಎಲ್ಲಿಗೆ ಹೋಗ್ತಿದ್ದೀರಿ ಎಂದು ಕೇಳಿದೆವಾ?’ ಎಂದು ನಸು ನಕ್ಕರು ತೇಜಸ್ವಿ. ಅನಪೇಕ್ಷಿತ ಔಪಚಾರಿಕತೆಗೆ ತೇಜಸ್ವಿ ಪ್ರತಿಕ್ರಿಯಿಸಿದ ರೀತಿಯಿದು.
ತಾನು ತಿಳಿದಿರುವ ವಿಚಾರ ಸಕಲರಿಗೂ ತಿಳಿಯಲಿ. ನನ್ನಂತೆ ಇತರರೂ ತಿಳುವಳಿಕೆ ಪಡೆಯಲಿ ಎಂದು ಸದಾ ಹಾರೈಸುತ್ತಿದ್ದ ತೇಜಸ್ವಿಯವರನ್ನು ನಾನೊಮ್ಮೆ ಈಜಿಪ್ಟಿನ ಪಿರಮಿಡ್ಡಿನ ವಿಚಾರದಲ್ಲಿ ಮಾಹಿತಿ ನೀಡಲು ಕೇಳಿದಾಗ ಸುಮಾರು 3೦ ನಿಮಿಷ ಸ್ಪಷ್ಠವಾದ ವಿಸ್ಮಯಕಾರೀ ವಿಷಯ ತಿಳಿಸಿದ್ದಲ್ಲದೆ ಅವರ ಕಂಪ್ಯೂಟರ್ನಲ್ಲಿದ್ದ ಮಾಹಿತಿಯನ್ನು ನಾಲ್ಕು ಪುಟದಲ್ಲಿ ಪ್ರಿಂಟ್ಔಟ್ ತೆಗೆದುಕೊಟ್ಟರು.
“ತಡಿ, ನಿನಗೆ ಶಾಶ್ವತ ಸೋರ್ಸ್ ಕೊಡ್ತೀನಿ” ಎಂದವರೇ, “ರಾಜೇಶ್, ನಮ್ಮ ನ್ಯಾಷನಲ್ ಜಿಯಾಗ್ರಫಿಕ್ ಪುಸ್ತಕಗಳೆಲ್ಲಿವೆ ಹೇಳು?” ಎಂದು ತಮ್ಮ ಶ್ರೀಮತಿಯವರನ್ನು ಕೇಳಿ 1957 ನೇ ಇಸವಿಯಿಂದ ತಮ್ಮ ಸಂಗ್ರಹದಲ್ಲಿದ್ದ ಸುಮಾರು 5೦ ನ್ಯಾಷನಲ್ ಜಿಯಾಗ್ರಫಿಕ್ ನಿಯತಕಾಲಿಕೆಗಳನ್ನು “ನಿನಗೆ ನನ್ನ ಗಿಫ್ಟ್ ಇವು, ಜೋಪಾನವಾಗಿಟ್ಟುಕೋ, ನನಗೆಂದಾದರೂ ಮಾಹಿತಿ ಬೇಕಿದ್ದಲ್ಲಿ ಕೇಳ್ತೀನಿ ಕೊಡುವಿಯಂತೆ” ಎಂದಿದ್ದರು. ಆ ನಂತರ ಎರಡು ಬಾರಿ ಬಂದು ಕೆಲ ಮಾಹಿತಿಯನ್ನು ರೆಫರ್ ಕೂಡಾ ಮಾಡಿದ್ದರು.
ಅವರು ನನಗೆ ನೀಡಿದ, ಅವರ ಅನೇಕ ಬರಹಗಳಿಗೆ ಪ್ರೇರಣೆಯಾಗಿದ್ದ ಪುಸ್ತಕಗಳು ನನ್ನಲ್ಲಿ ಇರುವುದು ನನ್ನ ಭಾಗ್ಯವೆಂದೇ ತಿಳಿದಿದ್ದೇನೆ.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

