ಕೆ.ಆರ್.ಪೇಟೆ,ಅ.29 ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಎಂಬುವವರು ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾಧ್ಯಮಗಳ ಮೂಲಕ ಟೀಕೆ ಮಾಡಿರುವುದನ್ನು ಖಂಡಿಸಿ, ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿ ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.

ನ್ಯಾಯಾಂಗವು ಸಂವಿಧಾನ ಬದ್ಧವಾಗಿ ಸಂವಿಧಾನದ ಅಡಕವಾಗಿರುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಂವಿಧಾನದ ಇತಿಮಿತಿಯಲ್ಲಿ ಆದೇಶಗಳನ್ನು ನೀಡುತ್ತಿದ್ದರೂ ಸಹ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಅವವಶ್ಯಕವಾಗಿ ನ್ಯಾಯಾಂಗದ ತೀರ್ಮಾನ ಮತ್ತು ನ್ಯಾಯಾಧೀಶರ ಆದೇಶಗಳನ್ನು ಅವಹೇಳನಕಾರಿಯಾಗಿ ಟೀಕಿಸುವ ಮೂಲಕ ನ್ಯಾಯಾಧೀಶರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ರೀತಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದು ಇಡೀ ನ್ಯಾಯಾಂಗ ವ್ಯವಸ್ಥೆಗೆ ದಕ್ಕೆ ಉಂಟು ಮಾಡುವಂತಿದೆ. ಅಲ್ಲದೇ ಸಾರ್ವಜನಿಕರು ನ್ಯಾಯಾಧೀಶರ ಮೇಲೆ ಇಟ್ಟಿರುವ ನಂಬಿಕೆಗೆ ದಕ್ಕೆ ಉಂಟಾಗುತ್ತದೆ. ನ್ಯಾಯಾಲಯ ಹಾಗೂ ನ್ಯಾಯಾಧೀಶರು ಸಂವಿಧಾನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೂ ಇದನ್ನು ಅರ್ಥ ಮಾಡಿಕೊಳ್ಳದ ಸ್ವಾಮೀಜಿ ಮನಬಂದಂತೆ ಮಾಧ್ಯಮಗಳ ಮೂಲಕ ನ್ಯಾಯಾಧೀಶರನ್ನು ಟೀಕೆ ಮಾಡುವುದು ಸಂವಿಧಾನಕ್ಕೆ ಮಾಡಿದ ಅಪಚಾರವಾಗುತ್ತದೆ.
ಇದನ್ನು ಓದಿ : ಕೆ.ಆರ್.ಪೇಟೆ- ಕನ್ನಡ ರಾಜ್ಯೋತ್ಸವ ಹಾಗೂ ದಾಸಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆ
ಭಾರತ ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವೇ ಸರ್ವಶ್ರೇಷ್ಠ ಎಂದು ಹೋದಲ್ಲಿ ಬಂದಲ್ಲಿ ತಮ್ಮ ಭಾಷಣದಲ್ಲಿ ಬೊಬ್ಬೆ ಹೊಡೆಯುವ ಜ್ಞಾನ ಪ್ರಕಾಶ ಸ್ವಾಮೀಜಿ, ಅದೇ ಭಾರತ ಸಂವಿಧಾನ ಅಡಿಯಲ್ಲಿ ಕೆಲಸ ಮಾಡುವ ನ್ಯಾಯಾಧೀಶರನ್ನು ಟೀಕಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ವಕೀಲರು ಸ್ವಾಮೀಜಿಯನ್ನು ಪ್ರಶ್ನಿಸಿದರು. ಕೆಲವು ವ್ಯಕ್ತಿಗಳು ಸ್ವ-ಹಿತಾಶಕ್ತಿಗೊಸ್ಕರ ನ್ಯಾಯಾಂಗ ವ್ಯವಸ್ಥೆಯನ್ನೇ ಹಾಳು ಮಾಡಲು ಪ್ರಯತ್ನಿಸುತ್ತಿರುವುದು ಮುಂದಿನ ದಿನಗಳಲ್ಲಿ ಯಾರು ಬೇಕಾದರೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ನ್ಯಾಯಾಧೀಶರನ್ನು ಟೀಕೆ ಮಾಡಿರುವ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಕೀಲರ ಸಂಘದ ಪದಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಗ್ರಹಿಸಿದರು.
ಘಟನೆ ಸಂಬಂಧ ಸರ್ಕಾರದ ಗಮನಕ್ಕೆ ತರುವಂತೆ ಕೋರಿ ತಹಶೀಲ್ದಾರ್ ಲೋಕೇಶ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಮಂಜೇಗೌಡ, ಉಪಾಧ್ಯಕ್ಷ ಎಸ್.ಎಸ್.ಪುರುಷೋತ್ತಮ್, ಕೋಶಾಧ್ಯಕ್ಷ(ಖಜಾಂಚಿ) ವಿ.ಪ್ರಸನ್ನಕುಮಾರ್, ಜಂಟಿ ಕಾರ್ಯದರ್ಶಿ ದೊಡ್ಡಯ್ಯ, ಮಾಜಿ ಅಧ್ಯಕ್ಷರಾದ ಹೆಚ್.ರವಿ, ಕೆ.ಆರ್.ಮಹೇಶ್, ಎಂ.ಆರ್.ಪ್ರಸನ್ನಕುಮಾರ್, ಎಸ್.ಆರ್.ನವೀನ್ಕುಮಾರ್, ಸಂಘದ ನಿರ್ದೇಶಕರಾದ ಹೆಚ್.ಎಸ್.ಶಿವಕುಮಾರ್, ಎಂ.ಎ.ಅವಿನಾಶ್, ಬಿ.ಜೆ.ಪ್ರವೀಣ್, ಎಸ್.ಪ್ರತಾಪ್, ಜೆ.ಎಂ.ಜನಾರ್ಧನ್, ಡಿ.ಎನ್.ಗಿರಿಜ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
