ಚನ್ನರಾಯಪಟ್ಟಣ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲೂಕಿನ ಘಟಕದ ವತಿಯಿಂದ ಮಡಬ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಭವ್ಯವಾಗಿ ಆಯೋಜಿಸಲಾಯಿತು. ಶಿಬಿರವನ್ನು ಹರಿಕಥೆ ವಿದ್ವಾಂಸರು ಶಿವಾರ ಉಮೇಶ್ ರವರು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಶ್ರೀ ಭರತ್ ಕುಮಾರ್ ಹೆಚ್.ಜಿ ಸೇರಿದಂತೆ ಗಣ್ಯರು ಉದ್ಘಾಟಿಸಿದರು.

ಉದ್ಘಾಟನಾ ಭಾಷಣದಲ್ಲಿ ಉಮೇಶ್ ರವರು ಮಾತನಾಡಿ, “ಇಂದು ಮನುಷ್ಯನ ಬಳಿ ಹಣವಿದ್ದರೂ ಆರೋಗ್ಯವಿಲ್ಲದ ಸ್ಥಿತಿ ಎದುರಾಗುತ್ತಿದೆ. ಮನುಷ್ಯನಿಗೆ ಅತ್ಯಂತ ಮುಖ್ಯವಾದ ಅಂಗ ಕಣ್ಣು. ಒಂದೇ ಕಣ್ಣಿದ್ದರೂ ಜಗತ್ತನ್ನು ನೋಡಬಹುದು. ಇಂತಹ ಕಣ್ಣಿನ ತಪಾಸಣೆ ಶಿಬಿರಗಳನ್ನು ಹಮ್ಮಿಕೊಂಡು ಸಾರ್ವಜನಿಕರ ಆರೋಗ್ಯ ಕಾಪಾಡಲು ರೆಡ್ ಕ್ರಾಸ್ ಸಂಸ್ಥೆ ಮಹತ್ವದ ಕೆಲಸ ಮಾಡುತ್ತಿದೆ” ಎಂದು ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆ ಚೇರ್ಮನ್ ಶ್ರೀ ಭರತ್ ಕುಮಾರ್ ಹೆಚ್.ಜಿ ಅವರು, “ಗ್ರಾಮೀಣ ಭಾಗದಲ್ಲಿ ವಯೋವೃದ್ಧರಲ್ಲಿ ಹೆಚ್ಚಾಗಿ ಕಣ್ಣಿನ ಸಮಸ್ಯೆಗಳು ಹಾಗೂ ಇತರ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಅದಕ್ಕಾಗಿ ನಮ್ಮ ಸಂಸ್ಥೆ ತಾಲೂಕಿನಾದ್ಯಂತ ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಇಂದು ಮಡಬ ಗ್ರಾಮದಲ್ಲಿ ಮಾತ್ರ 432ಕ್ಕೂ ಹೆಚ್ಚು ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣೆ ನೆರವೇರಿಸಲಾಗಿದೆ” ಎಂದು ತಿಳಿಸಿದರು.
ಶಿಬಿರದಲ್ಲಿ ಸಮಾಜ ಸೇವಕರಾದ ಶ್ರೀ ಜಗಣ್ಣ, ರೆಡ್ ಕ್ರಾಸ್ ಕಾರ್ಯದರ್ಶಿ ಜಬಿವುಲ್ಲಾ ಬೇಗ್, ನಿರ್ದೇಶಕ ಉದಯ ಶಂಕರ್, ಗ್ರಾಮದ ಮುಖಂಡರಾದ ಶ್ರೀ ನಂದೀಶ್, ಶ್ರೀ ಮಂಜೇಗೌಡ, ಪೊಲೀಸ್ ಅಧಿಕಾರಿಗಳಾದ ಶ್ರೀ ಸಂತೋಷ್ ಕುಮಾರ್, ಶ್ರೀ ಧರಣೇಶ್ ಹಾಗೂ ಬೆಂಕಿ ಆಂಜನೇಯ ಸ್ವಾಮಿ ಸೇವಾ ಸಮಿತಿಯ ಸದಸ್ಯರು ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಗ್ರಾಮದಲ್ಲಿ ನಡೆದ ಈ ಆರೋಗ್ಯ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನಷ್ಟು ಗ್ರಾಮಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
-ಮಂಜುನಾಥ್ ಐ.ಕೆ.
