ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಅರವತ್ತರ ನಂತರದ್ದೇನಿದ್ದರೂ ಅದು ಬೋನಸ್ಸು!!
ಹಳೇಮೂಡಿಗೆರೆ ದೇವಾಲಯದ ಬಳಿ ಟೈರ್ಗೆ ಪಂಚರ್ ಹಾಕುವ ಶಾಪ್ ಒಂದಿದೆ. ಭಾನುವಾರವಾದ್ದರಿಂದ ತಿರುಗಾಟಕ್ಕೆ ಹೋಗಿದ್ದ ನಾನು ಸ್ಕೂಟರ್ ಟೈರ್ಗೆ ಗಾಳಿ ಹಾಕಿಸಲು ಅಲ್ಲಿಗೆ ಹೋಗಿದ್ದೆ. ಮನೆ ಕಡೆಯಿಂದ ಮೂಡಿಗೆರೆಗೆ ಬರುತ್ತಿದ್ದ ತೇಜಸ್ವಿ ನನ್ನನ್ನು ಕಂಡೊಡನೆ ಸ್ಕೂಟರ್ ನಿಲ್ಲಿಸಿ, “ಏನಯ್ಯಾ ಸ್ಕೂಟರ್ನ ಗುಡ್ಡ ಹತ್ತಿಸಲು ಹೋಗಿ ಪಂಚರ್ ಮಾಡಿಕೊಂಡೆಯಾ?” ಎಂದರು.
“ಇಲ್ಲಾ, ಗಾಳಿ ಕಡಿಮೆ ಇದ್ದ ಹಾಗಿತ್ತು. ಸರಿಮಾಡಿಸುವ ಅಂತ ಬಂದಿದ್ದೆ” ಎಂದೆ.
“ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ `ಕನ್ನಡವೇ ಸತ್ಯ’ ಎಂಬ ಸಂಗೀತ ಕಾರ್ಯಕ್ರಮ ಗೊತ್ತ?“ಎಂದೆ.
“ಟಿ.ವಿ., ಪೇಪರ್ನಲ್ಲಿ ಜೋರಾಗಿ ವರದಿ ಬಂದಿತಲ್ಲಯ್ಯಾ ಅದೇ ಅಲ್ವಾ?” ಎಂದರು.
“ಮೂಡಿಗೆರೆಯಲ್ಲಿ ಅಷ್ಟು ದೊಡ್ಡದಲ್ಲದಿದ್ದಾರೂ ಚಿಕ್ಕ ಕಾರ್ಯಕ್ರಮವನ್ನಾದರೂ ಮಾಡಿಸಬೇಕು ಅಂದುಕೊಂಡಿದ್ದೀನಿ”.
“ನಿನಗೆಲ್ಲೋ ಭ್ರಮೆ. ಅಲ್ಲ ಕಣಯ್ಯಾ ಎಷ್ಟು ಖರ್ಚು ಬರುತ್ತೆ ಗೊತ್ತಾ? ಆ ಟೇಸ್ಟ್ನ ಜನರನ್ನು ಎಲ್ಲಿಂದ ತರ್ತೀಯಾ? ಆಗೋ ಹೋಗೋ ವಿಚಾರ ಮಾತನಾಡು”
“ ಶಿವಮೊಗ್ಗದ ಸುಬ್ಬಣ್ಣನವರನ್ನು ಕರೆಸೋಣ, ನೀವೊಂದು ಮಾತು ಹೇಳಿ ಅವರಿಗೆ. ಮೂಡಿಗೆರೆ ಮಟ್ಟಿಗಿನ ಕಾರ್ಯಕ್ರಮವನ್ನೇ ಮಾಡೋಣ. ಉಳಿದ ತಯಾರಿ ವ್ಯವಸ್ಥೆಗೆ ನಮ್ಮ ಟೀಂ ಹುಡುಗರಿದ್ದಾರೆ. ಯಾಕೆ ಆಗೋದಿಲ್ಲ ನೋಡೋಣ” ಎಂದೆ.
ಕುವೆಂಪುರವರ ಕವನಗಳನ್ನು ಸುಬ್ಬಣ್ಣ ಮನೋಜ್ಞವಾಗಿ ಹಾಡಿದ್ದ ಸಂದರ್ಭಗಳನ್ನು ನೆನಪಿಸಿಕೊಂಡರು. “ಆನಂದಮಯ ಈ ಜಗಹೃದಯ”, “ಓ ತ್ರಿಷಿತ ಚಂಚರೀಕ” ಮುಂತಾದ ಗೀತೆಗಳನ್ನು ಸ್ವತಃ ಕುವೆಂಪು ಅಪೇಕ್ಷಿಸಿ ಸುಬ್ಬಣ್ಣನವರಿಂದಲೇ ಹಾಡಿಸಿದ ಘಟನೆಗಳನ್ನು ಮೆಲುಕು ಹಾಕಿ “ಸಂಗೀತ ಸಂಜೆ ಕಾರ್ಯಕ್ರಮವನ್ನು ಮಾಡಿಸೋಣ.
ನೀನೊಬ್ಬ ನಕ್ಷತ್ರಿಕ! ಇರು ಹೇಗಾಗುತ್ತೆ ನೋಡೋಣ” ಎಂದು ಮೂಡಿಗೆರೆ ಕಡೆಗೆ ಹೋದರು. ಸುಗ್ಗಿಹಬ್ಬ, ಚೌಡಿಹಬ್ಬ, ನಾಮಕರಣ, ತಿಥಿ, ಸಾವು, ಮದುವೆ ಇವುಗಳ ಆಚೆಗೂ ಇರುವ ಸಾಂಸ್ಕೃತಿಕ ಬದುಕನ್ನು ತೆರೆದಿಡುವ ನಮ್ಮ ಪ್ರಯತ್ನಕ್ಕೆ ಬೆನ್ನು ತಟ್ಟಿದರು. ಕಾರಣಾಂತರಗಳಿಂದ ಕಾರ್ಯಕ್ರಮವನ್ನು ನಿಗದಿಗೊಳಿಸಲು ತಡವಾಯಿತು.
ಕ್ರೂರ ಕಾಲ ತೇಜಸ್ವಿಯವರನ್ನು ನುಂಗಿ ಹಾಕಿತ್ತು.
ಅಂದು ಬ್ಯಾಂಕ್ನ ದೈನಂದಿನ ಬ್ಯುಸಿಯಾದ ಕೆಲಸದಲ್ಲಿ ಮಗ್ನನಾಗಿದ್ದೆ.
ಮದ್ಯಾಹ್ನ 2 ಗಂಟೆಯ ಸಮಯ.
ನನ್ನ ಮೊಬೈಲ್ ರಿಂಗಣಿಸಿತು. ನಾಗೇಶ್ ಹೆಬ್ಬಾರ್ ಕರೆ ಮಾಡಿದ್ದರು.
“ಹಲೋ, ಹೇಳಿ ಹೆಬ್ಬಾರ್.”
“ಸರ್, ಎಲ್ಲಿದ್ದೀರಿ”
“ಆಫೀಸ್ನಲ್ಲಿ”
“ವಿಷ್ಯ ಗೊತ್ತಾಯ್ತಾ?”
“ಇಲ್ಲ, ಏನ್ ವಿಷ್ಯ?”
“ತೇಜಸ್ವಿ ಹೋದರಂತಲ್ಲ”
‘…………………………… ……………………………………………………..”
“ಹಲೋ…. ಹಲೋ…”
“ಹೆಬ್ಬಾರ್! ನಿಮಗೇನಾದ್ರು ತಲೆ ಕೆಟ್ಟಿದೆಯಾ?”
“ನಿವ್ಸ್ ನಿಜಾ ಸಾರ್, ನಿಮಗಿನ್ನೂ ಗೊತ್ತಾಗಿಲ್ವಾ?”
“……………………………………………………………………………”
“ ಪೇಪರ್ರಿನವ್ರು, ಟೀವಿಯವ್ರು ನನಗೆ ಫೋನ್ ಮಾಡ್ಲಿಕ್ಕೆ ಶುರೂ ಮಾಡಿದ್ದಾರೆ”
“…………………………………………………………”
ನನಗೆ ನಿಂತ ನೆಲವೇ ಕುಸಿದ ಅನುಭವ. ಈ ಹೆಬ್ಬಾರ್ ಪತ್ರಿಕೆಗೆ ವರದಿಗಾರರಾಗಿದ್ದವರು. ಈ ವಿಚಾರದಲ್ಲಿ ತಮಾಷೆ ಮಾಡಲು ಸಾಧ್ಯವೇ ಇರಲಿಲ್ಲ. ನನ್ನ ಕೈಕಾಲುಗಳೆಲ್ಲ ತಣ್ಣಗಾದಂತೆನಿಸಿತು. ನಿಂತಿದ್ದವನು ಹಾಗೆಯೇ ಕುರ್ಚಿಗೆ ಕುಸಿದು ಕುಳಿತೆ. ಸಹೋದ್ಯೋಗಿಗಳು ಪ್ರಶ್ನಾರ್ಥಕವಾಗಿ ಆತಂಕದಿಂದ ನನ್ನೆಡೆಗೆ ನೋಡಿದರು.
ಅಷ್ಟರಲ್ಲಿ ನನ್ನ ಮೊಬೈಲ್ ಮತ್ತೊಮ್ಮೆ ಸದ್ದು ಮಾಡಿತು. ಬಲಹೀನವಾಗಿದ್ದ ಕೈಗಳಿಂದ ಫೋನ್ ಕೈಗೆತ್ತಿಕೊಂಡೆ.
ಈಗ ಬಂದ ಕರೆ ತೇಜಸ್ವಿಯವರ ಆಪ್ತ ಸಹಾಯಕರಾಗಿದ್ದ ರಾಘವೇಂದ್ರರದು.
“…………………………………………………..”
“ಧನಂಜಯ್…………………………………..”
ನನಗೆ ಬಾಯಿ ಬಿಟ್ಟು ಮಾತನಾಡಲು ಶಕ್ತಿಯೇ ಇಂಗಿ ಹೋದಂತಾಗಿತ್ತು.
ಹೆಬ್ಬಾರ್ ಹೇಳಿದ ವಿಷಯ ಬಿಟ್ಟು ಬೇರೆನನ್ನಾದರೂ ಮಾತನಾಡಲಿ ಎಂದುಕೊಂಡೆ.
“ಧನಂಜಯ್, ವಿಷಯ ತಿಳೀತಾ? …………..ಬಾಸ್ ಹೋಗಿಬಿಟ್ಟರು”
“ನಿಜಾನಾ?….”
“ಹೌದು, ನಾನಿಲ್ಲಿಯೇ ಇದ್ದೇನೆ…………….”
ಫೋನ್ ಕಟ್ಟಾಯ್ತು.
ಅಂತ್ಯಕ್ರಿಯೆ ಮೂಡಿಗೆರೆಯಲ್ಲೋ ಅಥವಾ ಕುಪ್ಪಳಿಯಲ್ಲೋ ಎಂಬ ಜಿಜ್ಞಾಸೆಯ ನಂತರ ಕುಪ್ಪಳಿಯಲ್ಲಿಯೇ ಎಂದು ತೀರ್ಮಾನವಾಯಿತು.
ಅವರನ್ನು ಕುಪ್ಪಳಿಗೆ ಕರೆದೊಯ್ಯವ ಸಂದರ್ಭದಲ್ಲಿ ದುಃಖತಪ್ತ ಜನಸಂದಣಿಯನ್ನು ದಾಟಿಕೊಂಡು ಬಂದ ಸುಬ್ಬಣ್ಣನವರು ಮ್ಲಾನವದನರಾಗಿದ್ದರು. ಸುಬ್ಬಣ್ಣನವರಿಗೆ ನಮಸ್ಕರಿಸಿದ ನಾನು ಈ ಹಿಂದೆ ತೇಜಸ್ವಿಯವರೊಡನೆ ನಡೆದ ಸಂಗೀತ ಸಂಜೆ ಕಾರ್ಯಕ್ರಮದ ಮಾತುಕತೆಯ ಬಗ್ಗೆ ತಿಳಿಸಿದೆ. ತೇಜಸ್ವಿ ಬದುಕಿದ್ದಾಗ ಬಂದು ಹಾಡು ಹೇಳಲಾಗದ್ದಕ್ಕೆ ವಿಷಾದಿಸಿದ ಸುಬ್ಬಣ್ಣ, ತೇಜಸ್ವಿಯವರ ಪಕ್ಕದಲ್ಲೇ ನಿಂತು “ಆನಂದಮಯ ಈ ಜಗಹೃದಯ” ಗೀತೆಯನ್ನು ಹಾಡಿದ ಘಟನೆ ಸುತ್ತ ನೆರೆದಿದ್ದ ಜನರ ಕಣ್ಣಿನಲ್ಲಿ ಕಣ್ಣೀರಧಾರೆ ಹರಿಸಿತ್ತು.
ಇದಾದ ನಂತರ ಕುಪ್ಪಳಿಗೆ ತೇಜಸ್ವಿಯವರನ್ನು ಕರೆತಂದು ಪಂಚಭೂತಗಳಿಗೆ ಅರ್ಪಿಸಲಾಯಿತು.

ಎಲ್ಲಾ ಮುಗಿದು ಮಾರನೇ ದಿನ ಬೆಳಗ್ಗೆ ಎಚ್ಚರವಾದರೆ, ನಿನ್ನೆ ರಾತ್ರಿ ಕೆಟ್ಟ ಕನಸ್ಸೊಂದನ್ನು ಕಂಡಂತಾಯಿತಲ್ಲ. ಅರೆ! ತೇಜಸ್ವಿ ನಮ್ಮೊಡನಿಲ್ಲವಾ? ಎಂದು ದಿಗ್ಭೃಮೆಯಾಯಿತು. ದೇವರೇ ಅದು ಸುಳ್ಳಾಗಿರಲಿ. ನಾವು ಅವರನ್ನು ಕುಪ್ಪಳಿಗೆ ಕರೆದೋಯ್ದು, ಅವರಲ್ಲಿ ನಮ್ಮೆದುರಿಗೇ ಕಣ್ಮರೆಯಾದದ್ದು ಇದೆಲ್ಲಾ ಸುಳ್ಳಾಗಲಿ.
ಸತ್ಯ ಕಣ್ಣೆದುರೇ ಸುಳಿದು ಎದೆ ದಸಕ್ಕೆಂದಿತು. ಮನಸ್ಸೆಲ್ಲ ಖಾಲಿ ಖಾಲಿಯಾದಂತೆನಿಸಿತು. ಅನಾಥ ಪ್ರಜ್ಞೆ ಬಿಟ್ಟೂ ಬಿಡದೇ ಕಾಡಲಾರಂಭಿಸಿತು. ಅಯ್ಯೋ ಇಲ್ಲೇ ಈಗ ತಾನೇ ನಮ್ಮೊಡನೆ ಗದರುತ್ತಾ, ಎಚ್ಚರಿಸುತ್ತಾ, ಲೇವಡಿ ಮಾಡುತ್ತಾ ಇದ್ದ ತೇಜಸ್ವಿ ಇನ್ನು ನೋಡಲು, ಮಾತನಾಡಲು ಸಿಗುವುದಿಲ್ಲವಾ? ಅಯ್ಯೋ ಏನಾಗಿ ಹೋಯ್ತು? ದೇವರೇ ಇದೆಲ್ಲಾ ಬರೀ ಕನಸಾಗಿರಲಿ ಎಂದು ಪ್ರಾರ್ಥಿಸಿದೆ.
ಇಲ್ಲ, ನಾನೇ ಅವರನ್ನು ತಲೆಯ ಬಳಿ ಹಿಡಿದು ಎತ್ತಿ ಮಲಗಿಸಿದೆ. ಅವರ ಪಕ್ಕ ಬೆಳಗುತ್ತಿದ್ದ ಎಣ್ಣೆ ದೀಪದ ವಾಸನೆ ನನ್ನ ಶ್ವಾಸದೊಳಗೆ ಮತ್ತೊಮ್ಮೆ ಹೊರಳಿದಂತಾಯಿತು. ಗಂಧದ ಹಾರ, ಹೂವಿನ ಮಾಲೆಯ ಮಿಶ್ರಣದ ಸೂತಕದ ವಿಚಿತ್ರ ಗಂಧಗಾಳಿ ನನ್ನನ್ನು ಧೃತಿಗೆಡಿಸಿತು. ಹೌದಲ್ಲಾ, ನಮ್ಮನ್ನೆಲ್ಲಾ ಅನಾಥರನ್ನಾಗಿ ಮಾಡಿ ಹೋದರಲ್ಲಾ ಛೇ ಏನೇನು ಕೆಲಸ ಬಾಕಿ ಇದ್ದವೋ? ನಮ್ಮನ್ನೆಲ್ಲಾ ಇನ್ನೂ ಏನೇನಕ್ಕೆ ಗದರಿಸಲಿಕ್ಕಿದ್ದರೋ? ಈಗ ತಾನೇ ಇದ್ದವರು ಈಗಿಲ್ಲವಲ್ಲ ಎಂದು ವಿಷಣ್ಣತೆ ಕಾಡಿತ್ತು. ಈಗಲೂ ಕಾಡುತ್ತಿದೆ. ಲಕ್ಷಾಂತರ ಜನರಿಗೆ ರೋಲ್ ಮಾಡೆಲ್ ಆಗಿದ್ದ ತೇಜಸ್ವಿ ನಿಜವಾಗಿಯೂ ಮೂಡಿಗೆರೆಯ ಆನೆಯೇ.
ಯಾವುದೇ ವಿಚಾರ ಅಥವಾ ಸಮಸ್ಯೆಯ ಕುರಿತು ನಮ್ಮ ವ್ಯಾಪ್ತಿಯಲ್ಲಿ ಯೋಚಿಸಿ, ಮಂಥನ ನಡೆಸಿ ಕಡೆಗೆ ಹೀಗೆ ಮಾಡುವುದೇ ಸರಿ ಎಂದುಕೊಂಡು ನಿರ್ಣಯಕ್ಕೆ ಬಂದ ನಂತರವೂ ಯಾವುದಕ್ಕೂ ಒಂದು ಸೆಕೆಂಡ್ ಒಪಿನಿಯನ್ ಇರಲಿ ಎಂದು ತೇಜಸ್ವಿಯವರ ಬಳಿ ಹೋಗಿ ವಿವರಣೆ ನೀಡಿ ಅಭಿಪ್ರಾಯ ತಿಳಿಸಿ ಎಂದು ಕೇಳಿದರೆ, ನಾವಂದುಕೊಂಡಿದ್ದ ನಿರ್ಣಯಕ್ಕೆ ಸಂಪೂರ್ಣ ವ್ಯತಿರಿಕ್ತ ಸಾಧ್ಯತೆಯನ್ನು ಮತ್ತು ಅದನ್ನು ಕಾರ್ಯರೂಪಕ್ಕಿಳಿಸುವ ಬಗೆಯನ್ನು ಸೂಚಿಸುತ್ತಿದ್ದರು. ಅವರ ನಿಲುವಿನಿಂದ ಕನ್ವಿನ್ಸ್ ಆದ ನಾವು ಹೌದಲ್ವಾ ಎಂದುಕೊಂಡು ಹಿಂದಿರುಗುತಿದ್ದೆವು. ಸಮಾಜದೆಡೆಗೆ, ಅಲ್ಲಿನ ವಿದ್ಯಮಾನದ ಬಗ್ಗೆ ತನ್ನದೇ ಆದ ವಾಸ್ತವವಾದಿ ದೋರಣೆ ಹೊಂದಿದ್ದ ತೇಜಸ್ವಿಯವರ ನಿರ್ಗಮನದ ನಂತರ, ನಾವು ತಪ್ಪುದಾರಿ ಹಿಡಿದಾಗ ಕಿವಿಹಿಡಿದು ಸರಿದಾರಿಗೆ ತಂದು ನಿಲ್ಲಿಸುತಿದ್ದ ಹಿರಿಯರೊಬ್ಬರನ್ನು ಕಳೆದುಕೊಂಡೆವಲ್ಲಾ ಎಂಬ ವಿಷಣ್ಣತೆ ಕಾಡುತ್ತಿದೆ.
ಸುಖಾಸುಮ್ಮನೇ ಕಾಲಹರಣದ ಮಾತುಗಳನ್ನಾಡುತಿದ್ದ ಸಿನಿಕರನ್ನೆಲ್ಲಾ ಗದರಿಸಿ ದೂರವಿಡುತಿದ್ದ ತೇಜಸ್ವಿ ತೀರಿಕೊಂಡಾಗ ಹರಿದುಬಂದ ಜನಸಾಗರವನ್ನು, ಅಭಿಮಾನಿ ಬಳಗವನ್ನು ನೋಡಿದರೆ ಸಹ್ಯವಾದ ಗಂಭೀರತೆಯಿಂದಲೇ ಎಷ್ಟು ದೊಡ್ಡ ಪ್ರೀತಿಯನ್ನು ಪಡೆದಿದ್ದಾರೆ ಎನಿಸಿತು. “ನಮ್ಮದೆಲ್ಲಾ ಮುಗಿಯಿತು. ನಾವೆಷ್ಟು ಮಾಡಬಹುದೋ ಅಷ್ಟು ಮಾಡಿದ್ದೇವೆ. ನಮ್ಮ ಗ್ಯಾರಂಟಿ ಪಿರಿಯಡ್ ಮುಗಿದುಹೋಗಿದೆ. ಅರವತ್ತರ ನಂತರದ್ದೇನಿದ್ದರೂ ಬೋನಸ್ ಪಿರಿಯಡ್ ಕಣ್ರಯ್ಯಾ . ಆದಷ್ಟು ಬೇಗ ಅಂದುಕೊಂಡದ್ದನ್ನು ಮಾಡಿ ಮುಗಿಸಿಬಿಡಬೇಕು” ಎಂದಿದ್ದರು ತೇಜಸ್ವಿ.
ಮುಂದುವರೆಯುತ್ತದೆ..
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

