ತುಮಕೂರು:ಬೆಂಗಳೂರಿನಲ್ಲಿ ಡಿಸೆಂಬರ್ 24 ರಿಂದ ಆರಂಭವಾಗುವ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಖ್ಯಾತ ಕ್ರಿಕೆಟಿಗ ವಿರಾಟ್ ಕೋಹ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅನುಮತಿ ನೀಡುವಂತೆ ಕೋರಲು ಇಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇನ್ ಅಧ್ಯಕ್ಷ ವೆಂಕಟೇಶಪ್ರಸಾದ್ ನೇತೃತ್ವದಲ್ಲಿ,ಕೆಎಸ್ಸಿಎ ವ್ಯವಸ್ಥಾಪಕ ಸಮಿತಿ ಸದಸ್ಯ ಹಾಗೂ ತುಮಕೂರು ವಲಯ ಸಂಚಾಲಕ ಸಿ.ಆರ್.ಹರೀಶ್,ಕೆಎಸ್ಸಿಎ ವಕ್ತಾರರಾದ ವಿನಯ ಮೃತ್ಯುಂಜಯ ಹಾಗೂ ಇನ್ನಿತರರು,ಇಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರನ್ನು ಅವರ ಸದಾಶಿವನಗರದ ಗೃಹ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಓರ್ವ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರ ವರ್ಷಕ್ಕೆ ಕನಿಷ್ಠ ಎರಡು ದೇಶಿಯ ಟೂರ್ನಿಗಳಲ್ಲಿ ಭಾಗವಹಿಸುವುದು ಕಡ್ಡಾಯ ಎಂಬ ಬಿಸಿಸಿಐ ನಿಯಮದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ ಹಜಾರೆ ಟ್ರೋಫಿಯ ಎರಡು ಪಂದ್ಯಗಳಲ್ಲಿ ದೆಹಲಿ ಪರವಾಗಿ ವಿರಾಟ್ ಕೊಹ್ಲಿ ಕಣಕ್ಕೆ ಇಳಿಯಲಿದ್ದಾರೆ.ಕ್ರೀಡಾಕೂಟಕ್ಕೆ ಅಗತ್ಯ ಭದ್ರತೆಯ ಜೊತೆಗೆ,ಪಂದ್ಯಾವಳಿಗಳ ಯಶಸ್ವಿಗೆ ಸಹಕರಿಸುವಂತೆ ಗೃಹ ಸಚಿವರು ಹಾಗೂ ಕರ್ನಾಟಕ ಅಥ್ಲೇಟಿಕ್ ಅಸೋಸಿಯೇಷನ್ ಅಧ್ಯಕ್ಷರು ಆಗಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದರು.
ಈ ವೇಳೆ ಗೃಹ ಸಚಿವರು ಕೆ.ಎಸ್.ಸಿ.ಎ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಾದ ವೆಂಕಟೇಶ್ಪ್ರಸಾದ್, ಸಿ.ಆರ್.ಹರೀಶ್, ಇನ್ನಿತರರನ್ನು ಆತ್ಮೀಯವಾಗಿ ಅಭಿನಂದಿಸಿ, ತಮ್ಮ ಆಡಳಿತದ ಅವಧಿಯಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ಯಶಸ್ಸಿನತ್ತ ಮುನ್ನೆಡೆಸುವಂತೆ ಸಲಹೆ ನೀಡಿದರು.
ವಿಜಯ ಹಜಾರೆ ಟ್ರೋಫಿಗೆ ಅನುಮತಿ ನೀಡುವ ಸಂಬಂಧ ಇಂದು ಮುಖ್ಯಮಂತ್ರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಕೆ.ಎಸ್.ಸಿ.ಎ ತಂಡಕ್ಕೆ ಗೃಹ ಸಚಿವರು ನೀಡಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್

[…] […]