ನವದೆಹಲಿ: ಭಾರತದ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳು (AFMS) ದೇಶದಲ್ಲೇ ಮೊದಲ ಬಾರಿಗೆ 3D Flex Aqueous Angiography ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸುವ ಮೂಲಕ ಗ್ಲಾಕೋಮಾ (ಕಣ್ಣಿನ ಒತ್ತಡದಿಂದ ಉಂಟಾಗುವ ಕುರುಡುತನ) ಚಿಕಿತ್ಸೆಯಲ್ಲಿ ಐತಿಹಾಸಿಕ ಸಾಧನೆ ಮಾಡಿವೆ.
ಈ ಅತ್ಯಾಧುನಿಕ ವೈದ್ಯಕೀಯ ಕಾರ್ಯವಿಧಾನವನ್ನು ಡಿಸೆಂಬರ್ 2025 ರಲ್ಲಿ ದೆಹಲಿ ಕ್ಯಾಂಟ್ನಲ್ಲಿರುವ ಆರ್ಮಿ ಹಾಸ್ಪಿಟಲ್ (ರಿಸರ್ಚ್ & ರೆಫರಲ್) – AHRR ನ ನೇತ್ರ ವಿಭಾಗದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಗ್ಲಾಕೋಮಾ ಸಾಮಾನ್ಯವಾಗಿ ಯಾವುದೇ ಲಕ್ಷಣಗಳಿಲ್ಲದೆ ಬೆಳೆಯುವ ಗಂಭೀರ ಕಣ್ಣಿನ ರೋಗವಾಗಿದ್ದು, ಚಿಕಿತ್ಸೆ ವಿಳಂಬವಾದರೆ ಶಾಶ್ವತ ಕುರುಡುತನಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ 3D Flex Aqueous Angiography ತಂತ್ರಜ್ಞಾನವು ಗ್ಲಾಕೋಮಾ ಚಿಕಿತ್ಸೆಯಲ್ಲಿ ಕ್ರಾಂತಿಕಾರಕವಾಗಲಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ ಹೊಸ ತಂತ್ರಜ್ಞಾನವನ್ನು iStent (ಕನಿಷ್ಠ ಆಕ್ರಮಣಕಾರಿ ಗ್ಲಾಕೋಮಾ ಶಸ್ತ್ರಚಿಕಿತ್ಸೆ – MIGS) ಜೊತೆಗೆ ಸಂಯೋಜಿಸಿ ಬಳಸಲಾಗಿದೆ. ಜೊತೆಗೆ Spectralis Imaging System ಹಾಗೂ ಅತ್ಯಾಧುನಿಕ 3D ಆಪರೇಟಿಂಗ್ ಮೈಕ್ರೋಸ್ಕೋಪ್ ನೆರವಿನಿಂದ ಕಣ್ಣಿನ ಒಳಗಿನ ದ್ರವದ ಹರಿವಿನ ಮಾರ್ಗಗಳನ್ನು ನೈಜ ಸಮಯದಲ್ಲಿ (Real-Time) ನಿಖರವಾಗಿ ವೀಕ್ಷಿಸಲು ಸಾಧ್ಯವಾಗಿದೆ.
ಈ ವಿಧಾನದಿಂದ ಕಣ್ಣಿನ ಒಳಗಿನ ದ್ರವ ಹರಿವಿನಲ್ಲಿ ಉಂಟಾಗುವ ಅಡ್ಡಿಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಹೆಚ್ಚು ನಿಖರ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಇದರಿಂದ ರೋಗಿಗಳಿಗೆ ಕಡಿಮೆ ತೊಂದರೆ, ಉತ್ತಮ ದೀರ್ಘಕಾಲೀನ ಫಲಿತಾಂಶ ಹಾಗೂ ದೃಷ್ಟಿ ಸಂರಕ್ಷಣೆಯಲ್ಲಿ ಮಹತ್ವದ ಲಾಭ ದೊರೆಯಲಿದೆ.
ಈ ಶಸ್ತ್ರಚಿಕಿತ್ಸೆಯನ್ನು ಬ್ರಿಗೇಡಿಯರ್ ಡಾ. ಸಂಜಯ್ ಮಿಶ್ರಾ, ನೇತ್ರ ವಿಭಾಗದ ಮುಖ್ಯಸ್ಥರ ನೇತೃತ್ವದಲ್ಲಿ ನಡೆಸಲಾಗಿದೆ.
ಈ ಸಾಧನೆಯೊಂದಿಗೆ, ಭಾರತೀಯ ಸೇನೆಯ ವೈದ್ಯಕೀಯ ಸೇವೆಗಳು ಜಾಗತಿಕ ಮಟ್ಟದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಲಕ್ನೋದ ಕಮಾಂಡ್ ಹಾಸ್ಪಿಟಲ್ಗೂ ಇದೇ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ.
ರಕ್ಷಣಾ ಸಚಿವಾಲಯವು ಈ ಸಾಧನೆಯನ್ನು “ಭಾರತೀಯ ವೈದ್ಯಕೀಯ ಕ್ಷೇತ್ರಕ್ಕೆ ಐತಿಹಾಸಿಕ ಸಾಧನೆ” ಎಂದು ಬಣ್ಣಿಸಿದೆ. ಭಾರತೀಯ ಸೇನೆಯ ವೈದ್ಯಕೀಯ ತಂಡವು ಸೈನಿಕರ ಜೊತೆಗೆ ಸಾಮಾನ್ಯ ನಾಗರಿಕರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಮುಂದುವರಿಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
