ಲಖನೌ: ಒಂದೇ ಒಂದು ಸರ್ಕಾರಿ ಕೆಲಸ ಗಿಟ್ಟಿಸಲು ಇಂದು ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿದಿನ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಆ ಅದೃಷ್ಟ ಕೆಲವರಿಗೆ ಮಾತ್ರ. ಕೇವಲ 1 ಪೋಸ್ಟ್ಗೆ ಸಾವಿರಾರು ಜನರು ಪೈಪೋಟಿ ನಡೆಸುವ ಈ ಕಾಲದಲ್ಲಿ ಒಂದು ಸರ್ಕಾರಿ ಕೆಲಸ ಪಡೆಯುವುದೆಂದರೆ ನಿಜಕ್ಕೂ ಗ್ರೇಟ್.
ಹೀಗಿರುವಾಗ, ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ( Pak Woman ) ಭಾರತದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿರುವುದು ನಿಜಕ್ಕೂ ಆಘಾತಕಾರಿ ವಿಚಾರವೇ! ಇದು ಹೇಗೆ ಸಾಧ್ಯ? ಆ ವ್ಯಕ್ತಿ ಯಾರು? ಕೆಲಸ ಸಿಕ್ಕಿದ್ದು ಹೇಗೆ? ಪಾಕ್ ಮೂಲ ಬಯಲಾಗಿದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ತನ್ನ ಮೂಲ ಗುರುತನ್ನು ಮರೆಮಾಚಿ ಬರೋಬ್ಬರಿ 30 ವರ್ಷಗಳಿಂದ ಉತ್ತರ ಪ್ರದೇಶದ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಮಹಿಳೆಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಾನು ಪಾಕಿಸ್ತಾನದ ಪ್ರಜೆ ಎಂಬ ರಹಸ್ಯವನ್ನು ಇಷ್ಟು ವರ್ಷಗಳ ಕಾಲ ಗೌಪ್ಯವಾಗಿ ಇಟ್ಟಿದ್ದು ಅಚ್ಚರಿ ಹಾಗೂ ಆಘಾತಕ್ಕೆ ಕಾರಣವಾಗಿದೆ.
ಆರೋಪಿ ಮಹಿಳೆಯನ್ನು ಮಹಿರಾ ಅಖ್ತರ್ ಅಲಿಯಾಸ್ ಫರ್ಝಾನಾ ಎಂದು ಗುರುತಿಸಲಾಗಿದೆ. ಈಕೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಕೆಲಸ ಗಿಟ್ಟಿಸಿಕೊಂಡಿರುವುದು ಆಂತರಿಕ ತನಿಖೆಯಲ್ಲಿ ಕಂಡು ಬಂದ ಬಳಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಜೀಮ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿ ಫರ್ಝಾನಾ, ಕುಮ್ಹರಿಯಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸಿಂಗ್ ತಿಳಿಸಿದ್ದಾರೆ. ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 318(4), 336, 338 ಮತ್ತು 340ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪಾಕಿಸ್ತಾನಿ ಪ್ರಜೆಯಾಗಿದ್ದರೂ, ನಕಲಿ ನಿವಾಸ ಪ್ರಮಾಣಪತ್ರವನ್ನು ಬಳಸಿಕೊಂಡು ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ಮಹಿಳೆ 1979ರಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗಿ ನಂತರ ಪಾಕಿಸ್ತಾನಿ ಪೌರತ್ವವನ್ನು ಪಡೆದಿದ್ದಳು. ಗಂಡನಿಂದ ವಿಚ್ಛೇದನ ಪಡೆದ ನಂತರ, ಪಾಕಿಸ್ತಾನಿ ಪಾಸ್ಪೋರ್ಟ್ನಲ್ಲಿ ಭಾರತಕ್ಕೆ ಮರಳಿ, 1985ರ ಸುಮಾರಿಗೆ ಸ್ಥಳೀಯ ವ್ಯಕ್ತಿಯೊಬ್ಬರನ್ನು ವಿವಾಹವಾದಳು. ಅದೇ ಸಮಯದಲ್ಲಿ, ತನ್ನನ್ನು ತಾನು ಭಾರತೀಯ ಪ್ರಜೆ ಎಂದು ಬಿಂಬಿಸಿಕೊಂಡು, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಶಿಕ್ಷಣ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಂಡಳು.
ಇತ್ತೀಚೆಗೆ ಶಿಕ್ಷಣ ಇಲಾಖೆ ನಡೆಸಿದ ಆಂತರಿಕ ತನಿಖೆಯಲ್ಲಿ ಆಕೆ ಪಾಕಿಸ್ತಾನಿ ಪ್ರಜೆ ಎಂಬುದು ಗೊತ್ತಾಗಿದೆ. ಹೀಗಾಗಿ, ಆಕೆಯನ್ನು ಆರಂಭದಲ್ಲಿ ಅಮಾನತುಗೊಳಿಸಿ, ಇದೀಗ ಕೆಲಸದಿಂದಲೇ ವಜಾಗೊಳಿಸಲಾಗಿದೆ. ಇಲಾಖೆಯ ವರದಿಯ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಆಕೆಯ ವಿರುದ್ಧ ತನಿಖೆ ಪ್ರಗತಿಯಲ್ಲಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿಯವರೆಗೆ ಆಕೆಯನ್ನು ಬಂಧಿಸಿಲ್ಲ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ

ನಿಮ್ಮ ಸುದ್ದಿ ಹೇಳುವಂತೆ ಅವಳನ್ನು ಮೊದಲಿನಿಂದಲೂ ಅಮಾನತುಗೊಳಿಸಲಾಗಿದೆ.adu hege?