ಕೊರಟಗೆರೆ :- ಕರುನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿಯ ಧನಗಳ ಜಾತ್ರೆ ಮತ್ತು ಬ್ರಹ್ಮ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗುತ್ತಿದ್ದು, ಸಾವಿರಾರು ರಾಸುಗಳು ದನಗಳ ಜಾತ್ರೆಯಲ್ಲಿ ಪಾಲ್ಗೊಂಡು, ಕೊಡು – ಕೊಳ್ಳುವ ವ್ಯವಹಾರ ಬಹಳ ಭರ್ಜರಿಯಿಂದ ನಡೆಯುತ್ತಿದ್ದು, ಕಮನಿಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರಾ ಮಹೋತ್ಸವ ಬಹಳ ಸಡಗರ ಸಂಭ್ರಮದಿಂದ ಜರುಗುತ್ತಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕಮನೀಯ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆ ಸಂಕ್ರಾಂತಿ ಹಬ್ಬದ ಮಾರನೇಯ ದಿನದಿಂದ ಪ್ರಾರಂಭಗೊಂಡು ಸಾವಿರಾರು ವಿವಿಧ ತಳಿಯ ರಾಸುಗಳು ಜಾತ್ರೆಗೆ ಆಗಮಿಸುತ್ತಿದ್ದು ರೈತರನ್ನ ಆಕರ್ಷಿಸುತ್ತಿದೆ .
ಜನಮೇಜಯ ರಾಜರ ಕಾಲದಿಂದಲೂ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲಿ ಜಾತ್ರೆ ನಡೆಯುತ್ತಿದೆ ಎಂಬುದು ಈ ಭಾಗದವರ ನಂಬಿಕೆ, ಜಿಲ್ಲೆ ಮಾತ್ರವಲ್ಲದೇ ರಾಜ್ಯದಲ್ಲೆ ವಿವಿಧ ಭಾಗಗಳಿಂದಲೂ ರಾಸುಗಳನ್ನು ಕೊಳ್ಳಲು ಹಾಗೂ ಮಾರಟ ಮಾಡಲು ರೈತರು ಬರುತ್ತಾರೆ, ಕಳೆದ ಮೂರ್ನಾಲ್ಕು ದಿನಗಳಿಂದ ವಿವಿಧ ಕಡೆಗಳಿಂದ ರಾಸುಗಳು ಜಾತ್ರೆಗೆ ಬಂದು ಸೇರುತ್ತಿರುವುದು ದನಗಳ ಜಾತ್ರೆಗೆ ಮೆರುಗು ನೀಡಿದೆ.

ದನಗಳ ಜಾತ್ರೆ ಕಳೆದ 5-6 ವರ್ಷಗಳ ಹಿಂದೆ ಮಳೆ-ಬೆಳೆ ಸರಿಯಾಗಿ ಆಗದ ಕಾರಣ ದನಗಳ ಜಾತ್ರೆಯ ಬಗ್ಗೆ ನಿರ್ಲಕ್ಷ ವಹಿಸುತಿದ್ದ ರೈತಪಿ ವರ್ಗ 2-3 ವರ್ಷಗಳಿಂದ ಉತ್ತಮ ಮಳೆಯಾಗಿ ಇದರಿಂದ ರೈತರು ಕೊಡು-ಕೊಳ್ಳುವ ವ್ಯವಹಾರ ಉತ್ತಮವಾಗಿದ್ದು, ಆ ಕಾರಣದಿಂದಾಗಿ ಜಾತ್ರೆಯಲ್ಲಿ ರೈತರು ತುಸು ಉತ್ಸುಕತೆಯಿಂದಲೇ ದನಗಳ ವ್ಯಾಪಾರದಲ್ಲಿ ತೊಡಗಿದ್ದಾರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರ ವಹಿವಾಟು ಚುರುಕಾಗಿದೆ ಎಂದು ಜಾತ್ರೆಗೆ ಬಂದಿರುವ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆಗೆ ಬಳ್ಳಾರಿ, ದಾವಣಗೆರೆ, ಹೂವಿನಹಡಗಲಿ, ರಾಯಚೂರು, ಬಿಜಾಪುರ, ಹುಬ್ಬಳ್ಳಿ, ದಾರವಾಡ, ವಿಜಯಪುರ, ಕಲಬುರಗಿ ಸೇರಿದಂತೆ ನೆರೆಯ ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ರಾಸುಗಳ ಖರೀದಿಗೆ ರೈತರು ಈ ಜಾತ್ರೆಗೆ ಬರುತ್ತಾರೆ, ರಾಸುಗಳ ವ್ಯಾಪಾರ ಪ್ರತಿ ವರ್ಷಕ್ಕಿಂತಲೂ ಈ ಬಾರಿ ಭರ್ಜರಿಯಾಗಿ ನಡೆಯುತ್ತಿದ್ದು, ರೈತರು ಬಹಳ ಹುಮ್ಮಸ್ಸಿನಿಂದ ವ್ಯವಹರಿಸುತ್ತಿರುವುದು ಕಂಡುಬರುತ್ತದೆ.

ಈ ಬಾರಿ ಜಾತ್ರೆಯಲ್ಲಿ ಕನಿಷ್ಠ 50,000 ದಿಂದ 5 ಲಕ್ಷದವರೆಗೂ ರಾಸುಗಳ ಕೊಡು-ಕೊಳ್ಳುವ ವ್ಯವಹಾರ ಉತ್ತಮವಾಗಿ ಜರುಗುತ್ತಿದ್ದು, ಹೊಲ ಉಳುಮೆಗೆ ಯೋಗ್ಯವಾದ ರಾಸುಗಳಿಗೆ ಹೆಚ್ಚಿನ ಬೆಲೆ ವ್ಯವಹರಿಸುತ್ತಿದ್ದು, ಹೈನುಗಾರಿಕೆಗೆ ಹಾಗೂ ಮನೆ ಬಳಕೆಗೆ ಈ ಬಾರಿ ನಾಟಿ ಹಸುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಹಳ್ಳಿಕಾರ್ ತಳಿಯ ಎತ್ತುಗಳಿಗೆ ಬಹಳ ಬೇಡಿಕೆ ಕಂಡುಬಂದಿದ್ದು ಬಹಳ ವಿಶೇಷವಾಗಿತ್ತು.
ಈ ಭಾಗದ ಹಳ್ಳಿಕಾರ್ ಜಾತಿಯ ಎತ್ತುಗಳಿಗೆ ಬಹು ಬೇಡಿಕೆ ಇದೆ, ಆ ಕಾರಣದಿಂದಾಗಿ ರಾಜ್ಯದ ಬಳ್ಳಾರಿ, ಹೂವಿನಹಡಗಲಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಹಾವೇರಿ ಜಿಲ್ಲೆಗಳಿಂದ ರೈತರು ಜಾತ್ರೆಗೆ ಬಂದು ಎತ್ತುಗಳನ್ನು ಪ್ರತಿವರ್ಷ ಕೊಂಡೊಯ್ಯುತ್ತಾರೆ, ಈ ಬಾರಿ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ರೈತರು ದನಗಳನ್ನು ಕೊಳ್ಳಲು ಜಾತ್ರೆಯಲ್ಲಿ ಓಡಾಡುತ್ತಿದ್ದದ್ದು ಕಂಡು ಬಂತು.

ದಿನಮಾನ ಕಳದಂತೆಲ್ಲಾ ವರ್ಷದಿಂದ ವರ್ಷಕ್ಕೆ ಉತ್ತಮ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಹಳ್ಳಿಗಾಡಿನ ಜನರು ಉದ್ಯೋಗ ಹರಿಸಿ ಪಟ್ಟಣದತ್ತ ಮುಖ ಮಾಡುತ್ತಿರುವ ಕಾರಣದಿಂದಾಗಿ ದನಗಳನ್ನು ಕಟ್ಟುವವರ ಸಂಖ್ಯೆ ಕಡಿಮೆಯಾಗುತ್ತಿದೆ, ಇದರೊಂದಿಗೆ ಸರಿಯಾಗಿ ಮಳೆ-ಬೆಳೆ ಇಲ್ಲದ ಕಾರಣಕ್ಕೂ ಕೆಲವರು ದನ–ಕರುಗಳನ್ನು ಸಾಕುವುದನ್ನು ಬಿಟ್ಟಿದ್ದಾರೆ.
ಈರಣ್ಣ.. ಬಜ್ಜನಹಳ್ಳಿ ಕೊರಟಗೆರೆ ತಾಲೂಕು.
ಈ ಭಾಗದ ಎತ್ತುಗಳು ಗಟ್ಟಿಮುಟ್ಟಾಗಿರುತ್ತವೆ. ವ್ಯವಸಾಯಕ್ಕೆ ಯೋಗ್ಯವಾಗಿವೆ, ಆ ಕಾರಣಕ್ಕೆ ನಾವು ಈ ಜಾತ್ರೆಗೆ ಪ್ರತಿ ವರ್ಷ ಬಂದು ದನಗಳನ್ನು ಕೊಳ್ಳುತ್ತೇವೆ, ಒಮ್ಮೆ ಕೊಂಡ ಎತ್ತುಗಳನ್ನು ನಾವು ಐದಾರು ವರ್ಷ ಬೇಸಾಯಕ್ಕೆ ಬಳಸುತ್ತೇವೆ, ಉತ್ತಮ ರಾಸುಗಳು ಬೇಕಾಗಿದೆ ಹುಡುಕಾಟದಲ್ಲಿದ್ದೇವೆ, ದನಗಳು ಇನ್ನೂ ಬರುವ ನಿರೀಕ್ಷೆ ಇರುವುದರಿಂದ ಕಾದುಕುಳಿತ್ತಿದ್ದೇವೆ, ಆದರೆ ದನಗಳ ಸಂಖ್ಯೆಯೇ ಕಡಿಮೆಯಾಗಿದೆ’ ಎಂದು ಉತ್ತರ ಕರ್ನಾಟಕ ಭಾಗದ ರೈತರು ಹೇಳಿದರು,ಜಾತ್ರೆಯಲ್ಲಿ ಹಳ್ಳಿಕಾರ್ ಉತ್ತಮ ತಳಿಯ ಜೋಡಿ ಎತ್ತುಗಳು ₹ 50 ಸಾವಿರದಿಂದ ಸುಮಾರು ₹ 3 ಲಕ್ಷ ಮಾರಾಟಗೊಳ್ಳುತ್ತಿವೆ .
ತಿಮ್ಮೇಗೌಡ … ರೈತ ಚುಂಚನೂರು ..ಬಳ್ಳಾರಿ ಜಿಲ್ಲೆ
ಈ ಹಿಂದೆ ಮಳೆ ಇಲ್ಲದ್ದರಿಂದ ಮೇವಿನ ಅಭಾವವಿದೆ ಎಂಬ ಕಾರಣಕ್ಕೆ ಮನೆಯಲ್ಲಿದ್ದ ದನಗಳನ್ನು ಮಾರಿದ್ದವರು 2-3 ವರ್ಷಗಳಿಂದ ಉತ್ತಮ ಮಳೆಯಾದ್ದರಿಂದ ಮೇವು ಸಂಗ್ರಹಣೆ ಮಾಡಿಕೊಂಡು ಮತ್ತೆ ದನಗಳನ್ನು ಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ, ಒಳ್ಳೆಯ ಎತ್ತುಗಳು ದುಬಾರಿಯಾಗಿರುವ ಕಾರಣ ಸಣ್ಣ ರೈತರು ಕಡಿಮೆ ಬೆಲೆಯ ಸಣ್ಣ-ಸಣ್ಣ ಕರುಗಳನ್ನೆ ಕೊಂಡುಕೊಳ್ಳುತ್ತಿದ್ದಾರೆ,
ದೊಡ್ಡಯ್ಯ … ಸಿಂಗನಾಯಕನಹಳ್ಳಿ ದೊಡ್ಡಬಳ್ಳಾಪುರ…
ಹಳ್ಳಿಕಾರ್ ತಳಿಯ ಜೋಡೆತ್ತುಗಳಿಗೆ ₹80 ಸಾವಿರದಿಂದ ₹4 ಲಕ್ಷದವರೆಗೆ ಬೆಲೆ ಇದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ರಾಸುಗಳನ್ನು ಸಾಕುವುದು ಕಷ್ಟವಾಗುತ್ತಿದೆ. ಸಕಾಲದಲ್ಲಿ ಮಳೆ-ಬೆಳೆಯಾಗದೆ ಮೇವಿನ ಕೊರತೆ ಹೆಚ್ಚಾಗಿದೆ. ವ್ಯವಸಾಯಕ್ಕೆ ಎತ್ತುಗಳ ಅವಲಂಬನೆ ಕಡಿಮೆಯಾಗುತ್ತಿದೆ. ಎತ್ತುಗಳ ಜಾಗವನ್ನು ಯಂತ್ರಗಳು ಆಕ್ರಮಿಸಿಕೊಂಡಿವೆ. ಯುವಕರಿಗೆ ರಾಸುಗಳ ಸಾಕಾಣಿಕೆಯಲ್ಲಿ ಆಸಕ್ತಿಯಿಲ್ಲ. ಅಪ್ಪನ ಕಾಲದಿಂದಲೂ ಹಳ್ಳಿಕಾರ್ ತಳಿಯ ಎತ್ತುಗಳನ್ನು ಸಾಕಿ ಈ ಜಾತ್ರೆಯಲ್ಲಿ ಮಾರಾಟ ಮಾಡುತ್ತಿದ್ದೆವು, ಈ ಸಂಸ್ಕೃತಿ ಬಹುಶಃ ನನ್ನ ತಲೆಮಾರಿಗೆ ಕೊನೆಯಾಗುತ್ತದೆ
ಜವರೇಗೌಡ . ರೈತ… ರಾಮನಗರ
ವರದಿ: ಶ್ರೀನಿವಾಸ್, ಕೊರಟಗೆರೆ.
