ಹಾಸನ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಯಾವುದೇ ಶಾಶ್ವತ ಪ್ರಯೋಜನವಾಗಿಲ್ಲ. ಇಂತಹ ಗ್ಯಾರಂಟಿಗಳನ್ನು ಹೇಮಾವತಿ ಹೊಳೆಯಲ್ಲಿ ಮುಳುಗಿಸಿ, ಅಭಿವೃದ್ಧಿ ಹಾಗೂ ರೈತರ ಪರ ಹೋರಾಡುವ ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಕರೆ ನೀಡಿದರು.
ನಗರದ ಹೊರವಲಯದ ಭೂವನಹಳ್ಳಿಯಲ್ಲಿ ನಡೆದ ಜೆಡಿಎಸ್ ಜನತಾ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಲಾಗುತ್ತಿದೆ ಎಂದು ಆರೋಪಿಸಿದರು. “ಗ್ಯಾರಂಟಿಗಳು ಜನರನ್ನು ಆಲಸ್ಯಕ್ಕೆ ದೂಡುತ್ತಿವೆ. ಆದರೆ ಜೆಡಿಎಸ್ ಸರ್ಕಾರ ಅಭಿವೃದ್ಧಿ, ಕೃಷಿ, ನೀರಾವರಿ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿದೆ,” ಎಂದು ಹೇಳಿದರು.
ಹೇಮಾವತಿ ಯೋಜನೆಯಿಂದ ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳು ಹಸಿರಾಗಿದೆ. ಆದರೆ ಇಂದಿನ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. “ರೈತರಿಗೆ ಬೇಕಾಗಿರುವುದು ಗ್ಯಾರಂಟಿಯಲ್ಲ, ನೀರು, ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ,” ಎಂದು ಅವರು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಜೆಡಿಎಸ್ ರಾಜ್ಯಕ್ಕೆ ಶಾಶ್ವತ ಅಭಿವೃದ್ಧಿ ನೀಡಿದೆ ಎಂದು ಸ್ಮರಿಸಿದ ಸೂರಜ್ ರೇವಣ್ಣ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್–ಎನ್ಡಿಎ ಮೈತ್ರಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಜೆಡಿಎಸ್ ನಾಯಕರು, ಕಾರ್ಯಕರ್ತರು ಹಾಗೂ ಸಾವಿರಾರು ಜನರು ಭಾಗವಹಿಸಿದ್ದರು.
