ನವದೆಹಲಿ: ನೀವು ಕೃತಕ ಬುದ್ಧಿಮತ್ತೆಯ (AI) ಸಹಾಯದಿಂದ ಯಾವುದಾದರೂ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದು ನಿಮ್ಮ ಪಾಲಿಗೆ ಜೀವಹಾನಿಕಾರಕ ಎಂದು ಸಾಬೀತಾಗಬಹುದು.
ಹೌದು. ಏಕೆಂದರೆ, ದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಯಲ್ಲಿ ಇಂತಹದ್ದೇ ಒಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ದೆಹಲಿಯ 45 ವರ್ಷದ ವ್ಯಕ್ತಿಯೊಬ್ಬರು AI ಚಾಟ್ ಪ್ಲಾಟ್ಫಾರ್ಮ್ ನೀಡಿದ ಸಲಹೆಯ ಮೇರೆಗೆ ಎಚ್ಐವಿ (HIV) ತಡೆಗಟ್ಟುವ ಔಷಧಿಗಳನ್ನು ತಾವಾಗಿಯೇ ಸೇವಿಸಲು ಪ್ರಾರಂಭಿಸಿದರು. ಇದರ ನಂತರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಸದ್ಯ ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಯಾವುದೇ ಔಷಧಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅನಿವಾರ್ಯ, ಇಲ್ಲದಿದ್ದರೆ ಅದು ಪ್ರಾಣಕ್ಕೆ ಕುತ್ತು ತರಬಹುದು ಎಂದು ವೈದ್ಯರು ಜನರಲ್ಲಿ ಮನವಿ ಮಾಡಿದ್ದಾರೆ. ಈ ರೋಗಿಯು ಯಾವುದೇ ವೈದ್ಯರ ಚೀಟಿ (Prescription) ಇಲ್ಲದೆ ಸ್ಥಳೀಯ ಮೆಡಿಕಲ್ ಸ್ಟೋರ್ನಿಂದ ಎಚ್ಐವಿ ‘ಪೋಸ್ಟ್ ಎಕ್ಸ್ಪೋಸರ್ ಪ್ರೊಫಿಲ್ಯಾಕ್ಸಿಸ್’ (PEP) ನ 28 ದಿನಗಳ ಅವಧಿಯ ಔಷಧಿಗಳನ್ನು ಖರೀದಿಸಿದ್ದರು.
ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್ಗೆ ತುತ್ತಾದ ರೋಗಿ
ಕೆಲವು ದಿನಗಳ ಕಾಲ ಔಷಧಿ ಸೇವಿಸಿದ ನಂತರ ದೇಹದ ಮೇಲೆ ದದ್ದುಗಳು (Rashes) ಕಾಣಿಸಿಕೊಳ್ಳಲಾರಂಭಿಸಿದವು ಎಂದು ರೋಗಿ ವೈದ್ಯರಿಗೆ ತಿಳಿಸಿದ್ದಾರೆ. ಕ್ರಮೇಣ ಕಣ್ಣುಗಳು ಮತ್ತು ದೇಹದ ಇತರ ಅಂಗಗಳ ಮೇಲೆಯೂ ಇದು ಪರಿಣಾಮ ಬೀರಲಾರಂಭಿಸಿತು. ತಕ್ಷಣವೇ ಅವರು ಆರ್ಎಂಎಲ್ ಆಸ್ಪತ್ರೆಗೆ ಧಾವಿಸಿದರು. ಅಲ್ಲಿ ವೈದ್ಯರು ತಪಾಸಣೆ ನಡೆಸಿದಾಗ, ರೋಗಿಯು ‘ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್’ (Stevens-Johnson Syndrome) ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿರುವುದು ಪತ್ತೆಯಾಗಿದೆ. ಇದು ಚರ್ಮಕ್ಕೆ ತೀವ್ರವಾಗಿ ಹಾನಿ ಮಾಡುವ ಗಂಭೀರ ಸ್ಥಿತಿಯಾಗಿದೆ.ಗಂಭೀರ ಕಾಯಿಲೆ: ಔಷಧಿಯ ಅಡ್ಡಪರಿಣಾಮದಿಂದಾಗಿ ಚರ್ಮದ ಕೋಶಗಳನ್ನು ನಾಶಪಡಿಸುವ ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ್ ಕಾಣಿಸಿಕೊಂಡಿದೆ.
