ತುಮಕೂರು: ಭಾರತೀಯ ಸನಾತನ ಸತ್ಯವನ್ನು ಹಿಂದೂ ಧರ್ಮ ಸಾರುತ್ತದೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹಿಂದೂ ಎಂಬುದು ಕೇವಲ ಒಂದು ಧರ್ಮವಲ್ಲ, ಅದು ನಮ್ಮ ಜೀವನಕ್ರಮ, ನಮ್ಮ ದೈನಂದಿನ ಸಂಸ್ಕೃತಿ, ಸಂಪ್ರದಾಯ ಎಂದು ಶಿವಗಂಗೆ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ 31ನೇ ವಾರ್ಡಿನ ಜಯನಗರದಲ್ಲಿ ಭಾನುವಾರ ಅಲ್ಲಿನ ಸಮಿತಿ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ಆದರ್ಶವಾಗಿ ಬದುಕುವ, ಸಹಜತೆ, ಸಹಬಾಳ್ವೆ, ಧರ್ಮಪಾಲನೆ ಎಲ್ಲವೂ ಹಿಂದೂ ಧರ್ಮದ ಜೀವನ ಪದ್ದತಿಯ ಮೂಲ ಆಶಯಗಳು, ನಾವು ಆದರ್ಶದಿಂದ ಉತ್ತಮವಾಗಿ ಬದುಕುವುದೇ ಹಿಂದೂ ಧರ್ಮದ ಸಾರ್ಥಕತೆ ಎಂದರು.

ಇಂದಿನ ಸಂದರ್ಭದಲ್ಲಿ ಹಿಂದೂ ಸಮಾಜವು ಒಗ್ಗಟ್ಟಾಗಿ ನಿಲ್ಲುವ ಅಗತ್ಯವಿದೆ. ಜಾತಿ-ಪಂಥಗಳ ಭೇದ ಮರೆತು ಹಿಂದೂಗಳೆಲ್ಲರೂ ಒಂದೇ ಕುಟುಂಬದ ಭಾವನೆಯೊಂದಿಗೆ ಧರ್ಮ ರಕ್ಷಣೆಗೆ ಪಣ ತೊಟ್ಟು ನಿಲ್ಲಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.
ವಿದ್ಯಾಭಾರತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ಕುಮಾರ್ ಮಾತನಾಡಿ, ಹಿಂದೂ ಸಮಾಜೋತ್ಸವ ಮಾಡುವ ಉದ್ದೇಶವೆಂದರೆ ನಮ್ಮ ಸಂಘಟನಾ ಸಾಮರ್ಥ್ಯವನ್ನು ನಾವು ಕಂಡುಕೊಳ್ಳುವುದಾಗಿದೆ. ಸಾವಿರಾರು ವರ್ಷಗಳಿಂದ ಮಾನವ ಬದುಕಿಗೆ ದಿಕ್ಕು ತೋರಿಸಿದ ಮಹಾ ಸಂಸ್ಕೃತಿ. ಸಹಿಷ್ಣುತೆ, ಸಮನ್ವಯ ಇವು ಹಿಂದೂ ಧರ್ಮದ ಆತ್ಮ. ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ, ಧರ್ಮದ ತತ್ವಗಳನ್ನು ಅರಿತು ಬಾಳಲು ತಿಳಿಸಬೇಕು ಎಂದು ಹೇಳಿದರು.
ಶೋಭಾಯಾತ್ರೆಯನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್ ಉದ್ಘಾಟಿಸಿ ಭಾಗವಹಿಸಿದ್ದರು. ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ಶೋಭಾಯಾತ್ರೆಯ ಸಂಭ್ರಮ ಹೆಚ್ಚಿಸಿತ್ತು. ಸಮಿತಿ ಮುಖಂಡರು, ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶೋಭಾಯಾತ್ರೆಯಲ್ಲಿ ಸಾಗಿದರು.
ಸಮಿತಿ ಅಧ್ಯಕ್ಷ ಎಸ್.ಪುಟ್ಟೀರಪ್ಪ, ಹನುಮಂತಪ್ಪ, ಸಿ.ಎನ್.ರಮೇಶ್, ಎಂ.ವಿ.ರುದ್ರೇಶ್, ಜಗಜ್ಯೋತಿ ಸಿದ್ಧರಾಮಯ್ಯ, ಆರ್.ಎಸ್.ವೀರಪ್ಪದೇವರು, ರಾಕೇಶ್, ಶೆಟ್ಟಳ್ಳಯ್ಯ, ಸಿದ್ಧಗಂಗಪ್ಪ, ಎಸ್ಟಿಡಿ ನಾಗರಾಜು, ಬಲರಾಮ್, ಪ್ರಧಾನ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ನಾರಾಯಣ ನಾಯಕ್, ಕೆ.ವಿ.ಪ್ರಕಾಶ್, ಚೇತನ್ ಪುಟ್ಟೀರಪ್ಪ, ಮಲ್ಲಪ್ಪ, ಹನುಮಂತರಾಜು, ಗೋವಿಂದರಾಜು, ವಸಂತ ಸುದರ್ಶನ್, ಸಿದ್ಧರಾಜು, ತರಕಾರಿಮಹೇಶ್, ಅಕ್ಷಯ್ ಚೌಧರಿ, ವರದಯ್ಯ, ಲಿಂಗದೇವರು, ಜಗದೀಶ್, ಕೆ.ವಿ.ಕುಮಾರ್, ಮನೋಜ್, ಶಿವಲಿಂಗಶೆಟ್ಟಿ, ರಾಜಶೇಖರ್, ನಾಗರಾಜಮೂರ್ತಿ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
