ಕೊರಟಗೆರೆ ;- ನಗರ ಶಾಲೆಗಳ ರೀತಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಹಿನ್ನೆಲೆಯಲ್ಲಿ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದಿಂದ ಸ್ಥಾಪಿಸಿರುವ ಶ್ರಿಮಹಾಲಕ್ಷ್ಮಿ ಶಾಲೆ ಗ್ರಾಮೀಣ ಪ್ರದೇಶದ ವಿದ್ಯರ್ಥಿಗಳಿಗೆ ವರದಾನವಾಗಿದೆ ಎಂದು ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾದ್ಯಕ್ಷ ಡಾ.ಹನುಮಂತನಾಥಸ್ವಾಮೀಜಿ ತಿಳಿಸಿದರು.
ಅವರು ತಾಲೂಕಿನ ಗೊರವಹನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸ್ಥಾಪಿತವಾಗಿರುವ ಶ್ರೀಮಹಾಲಕ್ಷ್ಮಿ ಶಾಲೆಯ ವಾರ್ಷಿಕೋತ್ಸವ ಸಾಂಸ್ಕೃತಿಕ ಸೌರಭ-2026 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕಳೆದ 20 ವರ್ಷಗಳಿಂದ ಶಾಲೆ ನಡೆಯುತ್ತಿದ್ದು ಗ್ರಾಮೀಣ ಪ್ರದೇಶದ ಮಕ್ಕಳು ನಗರ-ಪಟ್ಟಣಗಳ ವಿದ್ಯಾರ್ಧಿಗಳಿಗೆ ಸರಿಸಮಾನಾತೆ ಯಿಂದ ಓದಿ ವಿದ್ಯಾವಂತರಾಗಬೇಕೆಂಬ ಹಿನ್ನೆಲೆಯಲ್ಲಿ ಕಳೆದ 20 ವರ್ಷಗಳ ಹಿಂದೆಯೇ ಎಲ್ಲಾ ಸೂಕ್ತ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಆಂಗ್ಲ ಮಾಧ್ಯಮದ ಶಾಲೆ ಪ್ರಾರಂಭಿಸಿ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದ ಶ್ರೀಗಳು ಈ ಭಾಗದ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಶಿಸ್ತು, ಪರಿಶ್ರಮ ಹಾಗೂ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರೀಕರಾಗಿ ಬೆಳೆಯಬೇಕೆಂದು ಸಲಹೆ ನೀಡಿದ ಶ್ರೀಗಳು ಮಹಾಲಕ್ಷ್ಮಿ ಚಾರಿಬಟಲ್ ಟ್ರಸ್ಟ್ ಅನ್ನ, ಶಿಕ್ಷಣ, ಆರೋಗ್ಯ ಹಾಗೂ ದಾಸೋಹದೊಂದಿಗೆ ಪ್ರಾರಂಭಿಸಿ ಶೈಕ್ಷಣಿಕವಾಗಿ ಒತ್ತು ನೀಡುವ ದೃಷ್ಠಿಯಿಂದ ಉಚಿತ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ ಈ ವಿದ್ಯಾ ಸಂಸ್ಥೆಯಲ್ಲಿ ಸುಮಾರು 600 ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ಶಿಕ್ಷಣ ನೀಡುತ್ತಿದ್ದು ಪೋಷಕರು ತಮ್ಮ ಮನೆಗಳಲ್ಲಿ ಮಕ್ಕಳಿಗೆ ಮೌಲ್ಯ ಆಧಾರಿತ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಬೇಕು ಎಂದರು.
ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಬಿ.ಜಿ.ವಾಸುದೇವ ಮಾತನಾಡಿ ದೇವಾಲಯದ ಟ್ರಸ್ಟ್ ದೇವಾಲಯದ ಅಭಿವೃದ್ದಿಯೊಂದಿಗೆ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಟ್ರಸ್ಟ್ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ಕಳೆದ 20 ವರ್ಷಗಳಿಂದ ಮುಖ್ಯ ಶಿಕ್ಷಕ ಸೋಮಶೇಖರ್ ರವರ ನೇತೃತ್ವದಲ್ಲಿ ಎಲ್ಲಾ ಶಿಕ್ಷಕರು ಉತ್ತಮ ರೀತಿಯ ಶೈಕ್ಷಣಿಕ ಪ್ರಗತಿ ಸಾಧಿಸಲು ಶ್ರಮಿಸುತ್ತಿದ್ದಾರೆ ಶಿಕ್ಷಕರೊಂದಿಗೆ ಪೋಷಕರು ಸಹ ತಮ್ಮ ಮಕ್ಕಳ ಬಗ್ಗೆ ಹೆಚ್ಚುಗಮನ ಹರಿಸಬೇಕು ಎಂದ ಅವರು ವಾರ್ಷಿಕೋತ್ಸವವು ಕೇವಲ ಆಚರಣೆಯಲ್ಲ, ಇದು ಶಾಲೆಯ ಪರಂಪರೆಯನ್ನು ಮತ್ತು ಸಾಧನೆಗಳನ್ನು ಗೌರವಿಸುವ ದಿನವಾಗಿದೆ ಇದು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಸಂತೋಷವನ್ನು ನೀಡುವುದಲ್ಲದೆ ಶಾಲೆಯ ಪ್ರಗತಿಯಲ್ಲಿ ಹೆಮ್ಮಯ ಭಾವನೆಯನ್ನು ಮೂಡಿಸುತ್ತದೆ ಎಂದು ತಿಳಿಸಿದರು.
ಚಾರಿಟಬಲ್ ಟ್ರಸ್ಟ್ನ ಧರ್ಮದರ್ಶಿ ಶ್ರೀಪ್ರಸಾದ್ ಮಾತನಾಡಿ ಶ್ರೀ ಮಹಾಲಕ್ಷ್ಮಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅರ್ಥಪೂರ್ಣವಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುತ್ತಿರುವ ಶಿಕ್ಷಕರುಗಳಿಗೆ ಅಭಿನಂದಿಸಿದ ಅವರು ಬೆಂಗಳೂರು ಮತ್ತು ಜಿಲ್ಲಾ ಮಟ್ಟದ ಶಾಲೆಗಳಲ್ಲಿ ಕಂಡು ಬರುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಬಾಗದ ಶಾಲೆಗಳು ಏನು ಕಮ್ಮಿಇಲ್ಲ ಎಂಬಂತೆ ನಮ್ಮ ಶಾಲೆಗಳಲ್ಲಿ ಇಂತಹ ಬೃಹತ್ ಸಂಸ್ಕೃತಿ ಕಾರ್ಯಕ್ರಮಗಳು ನಡೆಯತ್ತಿದ್ದು ಇದಕ್ಕೆಲ್ಲಾ ನಮ್ಮ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಶೈಕ್ಷಣಿಕ ಅಭಿವೃದ್ದಿಯೊಂದಿಗೆ ಸಮಾಜಿಕವಾಗಿ ಹಲವಾರು ಕೊಡುಗೆಗಳು ನೀಡುತ್ತಿರುವುದರಿಂದ ಸಾದ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳಾದ ನೃತ್ಯ, ನಾಟಕ, ದೇಶಭಕ್ತಿ ಗೀತೆಗಳು ಎಲ್ಲರ ಮನಸೂರೆಗೊಂಡವು ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಾಲೆಯ ಮುಖ್ಯಶಿಕ್ಷಕ ಸೋಮಶೇಖರ್ ರವರನ್ನು ದೇವಾಲಯದ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಧ್ಯಕ್ಷ ಬಿ.ಜಿ.ವಾಸುದೇವ ಮತ್ತು ಪಧಾಧಿಕಾರಿಗಳು ಮತ್ತು ಶಾಲೆಯ ಹಳೆವಿದ್ಯಾರ್ಥಿಗಳು, ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಮುರಳಿಕೃಷ್ಣ, ಖಜಾಂಚಿ ಜಗದೀಶ್, ದರ್ಮದರ್ಶಿಗಳಾದ ಶ್ರೀಪ್ರಸಾದ್, ಡಾ.ಕಾಂತರಾಜು, ನಟರಾಜು, ರವಿರಾಜೇಅರಸ್, ಮಂಜುನಾಥ್, ಲಕ್ಷ್ಮಿನರಸಯ್ಯ, ನರಸರಾಜು, ರಾಜಣ್ಣ, ಬಾಲಕೃಷ್ಣ, ಚಿಕ್ಕನರಸಯ್ಯ, ಸಾಹಿತಿ ನರಸಿಂಹಮೂರ್ತಿ(ಸಂತಶಿಶುನಾಳ ಷರೀಫ್), ಸಿರಿಗೆಜ್ಜೆ ರಾಮಣ್ಣ, ಉಪನ್ಯಾಸಕ ಮುದ್ದವೀರಪ್ಪ, ಟ್ರಸ್ಟ್ನ ವಿಶೇಷಾಧಿಕಾರಿ ಕೇಶವಮೂರ್ತಿ, ಲಕ್ಷ್ಮಣ್, ಕಾರ್ಯನಿರ್ವಹಣಾದಿಕಾರಿ ರಂಗಸ್ವಾಮಿ, ಶಾಲೆಯ ಮುಖ್ಯಶಿಕ್ಷಕ ಸೋಮಶೇಖರ್, ಶಿಕ್ಷಕ ಹನುಮಂತರೆಡ್ಡಿ, ಮಂಜುಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
