ನವದೆಹಲಿ: ಬಂಜೆತನವು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಜಗತ್ತಿನಲ್ಲಿ ಪ್ರತಿ ಆರು ಜನರಲ್ಲಿ ಒಬ್ಬರ ಮೇಲೆ (ವಯಸ್ಕ ಜನಸಂಖ್ಯೆಯ ಶೇ.17.5) ಪರಿಣಾಮ ಬೀರುತ್ತಿದೆ. ಇದರ ಪರಿಣಾಮವಾಗಿ ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ಅಥವಾ ಫಲವತ್ತತೆ ಉದ್ಯಮವೂ ವೇಗವಾಗಿ ಬೆಳೆಯುತ್ತಿದೆ.
ನವದೆಹಲಿ ಮೂಲದ ಫಲವತ್ತತೆ ಸೇವೆಗಳನ್ನು ಒದಗಿಸುವ ಗೌಡಿಯಂ ಐವಿಎಫ್ ಅಂಡ್ ವುಮೆನ್ ಹೆಲ್ತ್ ಕಂಪನಿಯು ಐಪಿಒ ಮೂಲಕ ಸಾರ್ವಜನಿಕರಿಗೆ ಷೇರು ಮಾರಾಟ ಮಾಡಿ ಬಂಡವಾಳ ಸಂಗ್ರಹಣೆಗೆ ಮುಂದಾಗಿದೆ. ಈ ಮೂಲಕ ಷೇರುಪೇಟೆಗೆ ಕಾಲಿಟ್ಟ ಮೊದಲ ಐವಿಎಫ್ ಸೇವೆ ಒದಗಿಸುವ ಕಂಪನಿಯಾಗಿದೆ ಎಂಬುದು ವಿಶೇಷ.
ಕಂಪನಿಯ ಮಾಹಿತಿ ಪ್ರಕಾರ, ಫೆಬ್ರುವರಿ 20ರಂದು ಐಪಿಒ ಸಾರ್ವಜನಿಕ ಚಂದಾದಾರಿಕೆಗೆ ತೆರೆಯಲಿದ್ದು, ಫೆಬ್ರುವರಿ 24ರಂದು ಮುಕ್ತಾಯಗೊಳ್ಳಲಿದೆ. ಫೆಬ್ರುವರಿ 25ರೊಳಗೆ ಷೇರು ಹಂಚಿಕೆಯನ್ನು ಅಂತಿಮಗೊಳಿಸಲಾಗುತ್ತದೆ. ನಂತರ ಫೆಬ್ರುವರಿ 27ರಿಂದ ಕಂಪನಿಯ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE)ಗಳಲ್ಲಿ ವಹಿವಾಟಿಗೆ ಲಭ್ಯವಾಗಲಿವೆ.
ಈ ಐಪಿಒದಲ್ಲಿ 1.13 ಕೋಟಿ ಈಕ್ವಿಟಿ ಷೇರುಗಳ ಹೊಸ ವಿತರಣೆ ಜೊತೆಗೆ ಸಂಸ್ಥೆಯ ಪ್ರವರ್ತಕಿ ಹಾಗೂ ಸಂಸ್ಥಾಪಕಿ ಡಾ. ಮಾನಿಕಾ ಖನ್ನಾ ಅವರ 94.93 ಲಕ್ಷ ಷೇರುಗಳ ಮಾರಾಟವೂ ಒಳಗೊಂಡಿದೆ.
ಭಾರತದಲ್ಲಿ ಐವಿಎಫ್ ಸೇವೆಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿರುವ ಹಾಗೂ ಲಾಭದಾಯಕ ಕ್ಷೇತ್ರವಾಗಿದ್ದು, ಹೆಚ್ಚುತ್ತಿರುವ ಬಂಜೆತನದ ದರಗಳು, ಅರಿವು ಮತ್ತು ತಾಂತ್ರಿಕ ಪ್ರಗತಿಗಳು ಇದಕ್ಕೆ ಕಾರಣವಾಗಿವೆ. ಮುಂದಿನ ವರ್ಷಗಳಲ್ಲಿ ಮಾರುಕಟ್ಟೆಯ ಮೌಲ್ಯ ಗಣನೀಯವಾಗಿ ಹೆಚ್ಚಳವಾಗುವ ನಿರೀಕ್ಷೆ ಇದೆ.
ವರದಿಗಳ ಪ್ರಕಾರ, ಭಾರತದ ಐವಿಎಫ್ ಸೇವೆಗಳ ಮಾರುಕಟ್ಟೆ 2023ರಲ್ಲಿ ಸುಮಾರು 1.06 ಶತಕೋಟಿ ಡಾಲರ್ ಮೌಲ್ಯ ಹೊಂದಿದ್ದು, 2034ರ ವೇಳೆಗೆ ಸುಮಾರು 4.9 ಶತಕೋಟಿ ಡಾಲರ್ಗೆ ತಲುಪುವ ಸಾಧ್ಯತೆ ಇದೆ. ಅಂದರೆ, ವರ್ಷಕ್ಕೆ ಶೇ.16ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
