ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋದ ಮಾದರಿಯಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು ನಗರದಲ್ಲಿನ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಡೆಸುತ್ತಿರುವ ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರು ತಮ್ಮೊಂದಿಗೆ ಮದ್ಯದ ಬಾಟಲಿಗಳನ್ನು ಸಾಗಾಣೆ ಮಾಡಲು ಅವಕಾಶ ನೀಡುವ ಕುರಿತು ಚಿಂತನೆ ಆರಂಭಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರಕ್ಕೆ ಮದ್ಯಪ್ರಿಯ ಪ್ರಯಾಣಿಕರಿಂದ ಸ್ವಾಗತ ವ್ಯಕ್ತವಾಗುವ ಸಾಧ್ಯತೆ ಇದ್ದರೂ, ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಈವರೆಗೆ ನಮ್ಮ ಮೆಟ್ರೋ ರೈಲುಗಳಲ್ಲಿ ಮದ್ಯ ಸಾಗಾಣೆಗೆ ಅನುಮತಿ ಇರಲಿಲ್ಲ. ಆದರೆ ಹಲವು ವರ್ಷಗಳಿಂದ ಈ ನಿಯಮವನ್ನು ಸಡಿಲಗೊಳಿಸುವ ಕುರಿತು ಬೇಡಿಕೆ ಕೇಳಿಬರುತ್ತಿದ್ದು, ಇದೀಗ ಬಿಎಂಆರ್ಸಿಎಲ್ ಅಧಿಕಾರಿಗಳು ಅದನ್ನು ಪರಿಗಣಿಸುತ್ತಿದ್ದಾರೆ. ಆದರೆ ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಲಾಗಿಲ್ಲ.
ಮತ್ತೊಂದೆಡೆ ಮೆಟ್ರೋ ಪ್ರಯಾಣಿಕರ ವೇದಿಕೆ ಈ ಚಿಂತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಮದ್ಯ ಸಾಗಾಣೆಗೆ ಅವಕಾಶ ನೀಡುವುದಕ್ಕಿಂತ, ಪ್ರಯಾಣ ದರ ಇಳಿಕೆ, ರೈಲುಗಳ ಸಂಚಾರದ ಅವಧಿ ಹೆಚ್ಚಳ, ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಹೊಸ ಮಾರ್ಗಗಳನ್ನು ಶೀಘ್ರವಾಗಿ ಆರಂಭಿಸುವತ್ತ ಗಮನ ಹರಿಸಬೇಕು ಎಂದು ವೇದಿಕೆ ಅಭಿಪ್ರಾಯಪಟ್ಟಿದೆ. ಮದ್ಯ ಸಾಗಾಣೆಗೆ ಅವಕಾಶ ನೀಡುವುದು ಅಸಂಬದ್ಧ ನಿರ್ಧಾರ ಎಂದು ಕೂಡ ಟೀಕಿಸಿದೆ.
58 ವಸ್ತುಗಳ ಸಾಗಾಣೆಗೆ ನಿಷೇಧ
ಪ್ರಸ್ತುತ ನಮ್ಮ ಮೆಟ್ರೋದಲ್ಲಿ ಸುಮಾರು 58 ವಸ್ತುಗಳ ಸಾಗಾಣೆಗೆ ನಿಷೇಧವಿದ್ದು, ಮದ್ಯವೂ ಅದರಲ್ಲಿ ಒಂದಾಗಿದೆ. ಮುಂದಿನ ವರ್ಷ ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂ ಮೂಲಕ ಬೆಂಗಳೂರು ವಿಮಾನ ನಿಲ್ದಾಣದವರೆಗೆ ತೆರೆಯಲಿರುವ ಹೊಸ ನೀಲಿ ಮಾರ್ಗದ ಕಾರ್ಯಾಚರಣೆ ಆರಂಭವಾದ ಬಳಿಕ ಮದ್ಯ ಸಾಗಾಣೆಗೆ ಅವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಿಂಕ್ ಲೈನ್ ಆರಂಭಕ್ಕೆ ಸಿದ್ಧತೆ
ಇನ್ನೊಂದೆಡೆ ನಮ್ಮ ಮೆಟ್ರೋ ಗುಲಾಬಿ ಮಾರ್ಗವನ್ನು 2026ರಲ್ಲಿ ಎರಡು ಹಂತಗಳಲ್ಲಿ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಸುಮಾರು 21 ಕಿಲೋಮೀಟರ್ ಉದ್ದದ ಈ ಮಾರ್ಗದ ಮೊದಲ ಹಂತವಾದ ಕಾಳೇನ ಅಗ್ರಹಾರದಿಂದ ತಾವರೆಕರೆವರೆಗೆ 7.5 ಕಿಮೀ ಭಾಗವನ್ನು 2026ರ ಮೇ ತಿಂಗಳಲ್ಲಿ ಆರಂಭಿಸುವ ಉದ್ದೇಶವಿದೆ. ಬಳಿಕ ಡಿಸೆಂಬರ್ ವೇಳೆಗೆ ಉಳಿದ 13.5 ಕಿಮೀ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಈ ಮಾರ್ಗದಲ್ಲಿ ಸುರಂಗ ಹಾಗೂ ಎತ್ತರಿಸಿದ ರೈಲು ಮಾರ್ಗಗಳಿದ್ದು, ಮೆಟ್ರೋ ಸುರಕ್ಷತಾ ಆಯುಕ್ತರಿಂದ ಪರೀಕ್ಷಾ ಪ್ರಕ್ರಿಯೆಗಳು ನಡೆಯುತ್ತಿವೆ.
