ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಶಾಲೆಯ ಮಾಲೀಕ ಧನಂಜಯ್ (A1) ಮತ್ತು ಅವರ ಪತ್ನಿ ಶೈಲಜಾ (A2) ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ವಸತಿ ಶಾಲೆಯಲ್ಲಿ ವಾಸಿಸುತ್ತಿದ್ದ ಇಬ್ಬರು ಬಾಲಕಿಯರಿಗೆ ಶಾಲೆಯ ಮಾಲೀಕನೇ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ದೂರಿನ ಮೇರೆಗೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ರಾತ್ರಿವೇಳೆ ಮದ್ಯದ ಅಮಲಿನಲ್ಲಿ ಬಾಲಕಿಯರ ಕೊಠಡಿಗಳಿಗೆ ತೆರಳಿ, ಕೆಲವೊಮ್ಮೆ ವಾರ್ಡನ್ ಕೊಠಡಿಗೆ ಕರೆಸಿ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಬಾಲಕಿಯರು ಆರೋಪಿಯ ಪತ್ನಿಗೆ ತಿಳಿಸಿದರೂ, ಕಿರುಕುಳದ ವಿಷಯವನ್ನು ಹೊರಗೆ ಹೇಳದಂತೆ ತಾಕೀತು ಮಾಡಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ.
ಇನ್ನು, ವಸತಿ ಶಾಲೆಯಲ್ಲಿ ನಡೆದ ದೌರ್ಜನ್ಯದ ಬಗ್ಗೆ ಯಾರಿಗೂ ಹೇಳದಂತೆ ದಂಪತಿ ಬಾಲಕಿಯರ ಮೇಲೆ ಒತ್ತಡ ಹೇರಿದ್ದರೆಂದು ಹೇಳಲಾಗಿದೆ. ಪೋಷಕರಿಗೆ ಮಾಹಿತಿ ಮುಟ್ಟಿಸದಂತೆ ಸುಮಾರು ಎಂಟು ದಿನಗಳ ಕಾಲ ಹೊರಗೆ ಹೋಗಲು ಹಾಗೂ ದೂರವಾಣಿ ಮೂಲಕ ಸಂಪರ್ಕ ಸಾಧಿಸಲು ಅವಕಾಶ ನೀಡಿರಲಿಲ್ಲ ಎಂಬುದು ದೂರಿನ ಅಂಶವಾಗಿದೆ.
ಫೆಬ್ರವರಿ 27ರಂದು ಬಾಲಕಿಯರು ಪೋಷಕರಿಗೆ ಕರೆ ಮಾಡಿ ಘಟನೆ ತಿಳಿಸಿದ ಬಳಿಕ, ಪೋಷಕರು ಶಾಲೆಗೆ ಆಗಮಿಸಿ ದಂಪತಿ ವಿರುದ್ಧ ದೂರು ಸಲ್ಲಿಸಿದ್ದಾರೆ.
ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ವಸತಿ ಶಾಲೆಯ ಮಾಲೀಕ ಧನಂಜಯ್ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ.
ಪ್ರಸ್ತುತ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
