ಬೆಂಗಳೂರು: ದಾಖಲೆಯ 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ಮಂಡಿಸಿದ ರಾಜ್ಯದ ಆಯವ್ಯಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ. ಮಾತ್ರವಲ್ಲ, ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಕೊಳವೆ ಬಾವಿಗಳ ವಿದ್ಯುದೀಕರಣಕ್ಕಾಗಿ ಪಾವತಿಸುವ ಮೊತ್ತ ₹75,000 ದಿಂದ ₹1,50,000ಕ್ಕೆ ಹೆಚ್ಚಳ ಮಾಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಗೆ ಸಿಕ್ಕಿದ್ದೆಷ್ಟು?
- ಪ್ರತಿ ಜಿಲ್ಲೆಗೆ 150 ಸಂಖ್ಯಾಬಲದ ಒಂದು ಬಾಲಕಿಯರ ಮತ್ತು ಒಂದು ಬಾಲಕರ ಒಟ್ಟು 62 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಸ್ಥಾಪನೆ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣಕ್ಕೆ ಅನುವು ಮಾಡಿಕೊಡಲು ಒಟ್ಟು 31 ವಸತಿ ಶಾಲೆಗಳನ್ನು ಉನ್ನತೀಕರಿಸಲಾಗುವುದು.
- ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು 40 ಹೊಸ ವಸತಿ ಶಾಲೆಗಳ ಸ್ಥಾಪನೆ
- ಕ್ರೈಸ್ ವಸತಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನೀಡಲು ₹50 ಕೋಟಿಗಳನ್ನು ಒದಗಿಸುವುದು.
- ಪರಿಶಿಷ್ಟ ಜಾತಿಯ 20, ಪರಿಶಿಷ್ಟ ಪಂಗಡದ 5 ಮತ್ತು ಹಿಂದುಳಿದ ವರ್ಗಗಳ 5 ವಸತಿ ಶಾಲೆಗಳು ಸೇರಿದಂತೆ ಒಟ್ಟು 30 ಕ್ರೈಸ್ ವಸತಿ ಶಾಲೆಗಳಿಗೆ ₹660 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡಗಳ ನಿರ್ಮಾಣ.
- ಸಮಾಜ ಕಲ್ಯಾಣ ಇಲಾಖೆಯಡಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ ₹1,500 ಕೋಟಿ ಅನುದಾನ
- ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಕೊಳವೆ ಬಾವಿಗಳ ವಿದ್ಯುದೀಕರಣಕ್ಕಾಗಿ ಪಾವತಿಸುವ ಮೊತ್ತ ₹75,000 ದಿಂದ ₹1,50,000ಕ್ಕೆ ಹೆಚ್ಚಳ.
- ನಾಲ್ಕೂ ಇಲಾಖೆಗಳಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿಗೆ ಕ್ರಮ
ಪರಿಶಿಷ್ಟ ವರ್ಗಗಳ ಕಲ್ಯಾಣ
- 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ಹೊಸ ವಿದ್ಯಾರ್ಥಿ ನಿಲಯಗಳ ಆರಂಭ
- ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕ/ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್ ಟ್ರೈಲರ್ / ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ (Kiosk) ಆರಂಭಿಸಲು ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ ₹4 ಲಕ್ಷಗಳ ಸಹಾಯಧನ.
- ಪರಿಶಿಷ್ಟ ಪಂಗಡದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಆರೈಕೆಗಾಗಿ 119 ಮಹಿಳಾ ಕೇರ್ಟೇಕರ್ ಹುದ್ದೆಗಳಿಗೆ ಮಂಜೂರಾತಿ.
- ಪರಿಶಿಷ್ಟ ಪಂಗಡದ ಸಮುದಾಯದವರ ಹಕ್ಕುಗಳನ್ನು ಸಂರಕ್ಷಿಸಲು ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಆಯೋಗ ಸ್ಥಾಪನೆ.
- ನಮ್ಮ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ಕಳೆದ ಮೂರು ವರ್ಷಗಳಲ್ಲಿ ಈ ಕೆಳಕಂಡ ನಾಲ್ಕು ಪ್ರಮುಖ ದಿಕ್ಕುಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕೈಗೊಂಡಿದೆ.
ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ:
75 ಲಕ್ಷ ವಿದ್ಯಾರ್ಥಿಗಳಿಗೆ ₹2,676 ಕೋಟಿ ವಿದ್ಯಾರ್ಥಿವೇತನ, 2,231 ವಿದ್ಯಾರ್ಥಿಗಳಿಗೆ ₹389 ಕೋಟಿ ಶೈಕ್ಷಣಿಕ ಸಾಲ ಮತ್ತು 18 ಲಕ್ಷ ವಿದ್ಯಾರ್ಥಿಗಳಿಗೆ ₹1,273 ಕೋಟಿಯಷ್ಟು ಶುಲ್ಕ ಮರುಪಾವತಿ ಮಾಡಲಾಗಿದೆ.
ರಾಜ್ಯದಲ್ಲಿ 5,306 ವಿದ್ಯಾರ್ಥಿನಿಲಯ ಮತ್ತು 1,258 ವಸತಿ ಶಾಲೆಗಳನ್ನು ಹಾಗೂ 300 ಮೌಲಾನಾ ಆಜಾದ್ ಶಾಲೆಗಳಲ್ಲಿ 13.30 ಲಕ್ಷ ಮಕ್ಕಳ ಶಿಕ್ಷಣಕ್ಕಾಗಿ ₹15,081 ಕೋಟಿ ಒದಗಿಸಲಾಗಿದೆ.
ಕೌಶಲ್ಯ ಮತ್ತು ಜೀವನೋಪಾಯಕ್ಕೆ ನೆರವು: ಸಬ್ಸಿಡಿ ಆಧಾರಿತ ಸಣ್ಣ ಉದ್ಯಮಗಳಿಂದ ಸುಸ್ಥಿರ ಆದಾಯ ಮೂಲಗಳನ್ನು ಸೃಜಿಸುವ ಉದ್ಯಮಶೀಲತೆಗೆ ಉತ್ತೇಜನೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡುವುದು.
ಸ್ವಾವಲಂಬಿ ಸಾರಥಿ ಯೋಜನೆಯಡಿ 8,195 ಫಲಾನುಭವಿಗಳಿಗೆ ₹249 ಕೋಟಿ ಸಾಲ, ಗಂಗಾಕಲ್ಯಾಣ ಯೋಜನೆಯಡಿ 21,556 ಫಲಾನುಭವಿಗಳಿಗೆ ₹637 ಕೋಟಿ ಮತ್ತು 2,928 ಫಲಾನುಭವಿಗಳಿಗೆ ಭೂಮಿ ಒದಗಿಸಲು ₹421 ಕೋಟಿ ನೀಡಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ: ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡುವುದರ ಮೂಲಕ ಬಡಜನರ ಜೀವನ ಮಟ್ಟವನ್ನು ಸುಧಾರಿಸುವ ಕಾರ್ಯಕ್ರಮಗಳು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೋನಿಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ₹1,332 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.
ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ 11 ಸಮುದಾಯಗಳ ವಸತಿರಹಿತ 6,257 ಕುಟುಂಬಗಳಿಗೆ ₹4.50 ಲಕ್ಷಗಳ ಘಟಕ ವೆಚ್ಚದಲ್ಲಿ ಒಟ್ಟು ₹282 ಕೋಟಿಗಳಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ.
ಅಲ್ಪಸಂಖ್ಯಾತರ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ₹1,635 ಕೋಟಿ ರೂ.ಗಳ ವೆಚ್ಚದಲ್ಲಿ 3,662 ಕಾಮಗಾರಿಗಳನ್ನು ಅನುಮೋದಿಸಲಾಗಿದೆ.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಗಳಲ್ಲಿ 1,650 ಸಮುದಾಯ ಭವನ/ವಾಲ್ಮೀಕಿ ಭವನ/ಶಾದಿ ಮಹಲ್ ಗಳ ನಿರ್ಮಾಣಕ್ಕಾಗಿ ₹822 ಕೋಟಿಗಳನ್ನು ಮಂಜೂರು ಮಾಡಿ ₹732 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.
ನಾಯಕತ್ವ ಮತ್ತು ಪ್ರಾತಿನಿಧ್ಯ: ಸರ್ಕಾರದ ನೀತಿ ನಿರೂಪಣೆ ಹಾಗೂ ಅನುಷ್ಠಾನದಲ್ಲಿ ಹಿಂದುಳಿದವರಿಗೆ ಸೂಕ್ತ ಪ್ರಾತಿನಿಧ್ಯತೆಯನ್ನು ಕಲ್ಪಿಸುವುದು.
ಒಟ್ಟು 26,821 ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ/ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕೌಶಲ್ಯಾಭಿವೃದ್ಧಿಗೆ ತರಬೇತಿಯನ್ನು ನೀಡಲು ₹841 ಕೋಟಿಗಳನ್ನು ವೆಚ್ಚ ಮಾಡಲಾಗಿದೆ.
ಕರ್ನಾಟಕ ಅನುಸೂಚಿತ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿಯಲ್ಲಿ 2026-27ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಗೆ ₹31,804 ಕೋಟಿ ರೂ. ಹಾಗೂ ಬುಡಕಟ್ಟು ಉಪಯೋಜನೆಗೆ ₹12,828 ಕೋಟಿ ಸೇರಿದಂತೆ ಒಟ್ಟಾರೆ ₹44,632 ಕೋಟಿ ಅನುದಾನ ಒದಗಿಸಲಾಗಿದೆ.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳ ಇತರೆ ನಿರ್ವಹಣಾ ವೆಚ್ಚದ ದರಗಳನ್ನು ಪರಿಷ್ಕರಿಸಲು 56 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು.
ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳಾದ ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್, ಸೋಲಾರ್ ವಾಟರ್ ಹೀಟರ್ ಮತ್ತು ಡೈನಿಂಗ್ ಟೇಬಲ್ಗಳನ್ನು ಒದಗಿಸಲು ₹25 ಕೋಟಿ ಮೀಸಲಿರಿಸಿದೆ.
ಶೈಕ್ಷಣಿಕವಾಗಿ ಪ್ರಮುಖ ನಗರಗಳಲ್ಲಿ ವಿದ್ಯಾರ್ಥಿನಿಲಯಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರತಿ ಜಿಲ್ಲೆಗೆ 150 ಸಂಖ್ಯಾಬಲದ ಒಂದು ಬಾಲಕಿಯರ ಮತ್ತು ಒಂದು ಬಾಲಕರ ಒಟ್ಟು 62 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಲಾಗುವುದು.
Right To Education Act ರಡಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಪ್ರವೇಶ ಪಡೆದ ಶಾಲೆಗಳಲ್ಲಿಯೇ 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮುಂದುವರೆಸಲು ಅವಕಾಶ ಕಲ್ಪಿಸಲು ₹19 ಕೋಟಿ ಒದಗಿಸಲಾಗುವುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣಕ್ಕೆ ಅನುವು ಮಾಡಿಕೊಡಲು ಒಟ್ಟು 31 ವಸತಿ ಶಾಲೆಗಳನ್ನು ಉನ್ನತೀಕರಿಸಲಾಗುವುದು.
ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು 40 ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
ಕ್ರೈಸ್ ವಸತಿ ಶಾಲೆಗಳಿಗೆ ಅಗತ್ಯವಿರುವ ಡೆಸ್ಕ್, ಬೆಂಚ್, ಪೀಠೋಪಕರಣಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಮತ್ತು ವಿಜ್ಞಾನ ಪ್ರಯೋಗಾಲಯ, ಹಾಸಿಗೆ-ಹೊದಿಕೆ, ಟೂ ಟಯರ್ ಕಾಟ್, ಸೋಲಾರ್ ವಾಟರ್ ಹೀಟರ್, ಡೈನಿಂಗ್ ಟೇಬಲ್, ಸಿಸಿಟಿವಿ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ನೀಡಲು ₹50 ಕೋಟಿ ಗಳನ್ನು ಒದಗಿಸಲಾಗುವುದು.
ಪರಿಶಿಷ್ಟ ಜಾತಿಯ 20, ಪರಿಶಿಷ್ಟ ಪಂಗಡದ 5 ಮತ್ತು ಹಿಂದುಳಿದ ವರ್ಗಗಳ 5 ವಸತಿ ಶಾಲೆಗಳು ಸೇರಿದಂತೆ ನಿವೇಶನ ಲಭ್ಯವಿರುವ ಒಟ್ಟು 30 ಕ್ರೈಸ್ ವಸತಿ ಶಾಲೆಗಳಿಗೆ ₹22 ಕೋಟಿ ಘಟಕ ವೆಚ್ಚದಲ್ಲಿ ಒಟ್ಟಾರೆ ₹660 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಎರಡು, ಪರಿಶಿಷ್ಟ ಪಂಗಡದ ಒಂದು ಮತ್ತು ಹಿಂದುಳಿದ ವರ್ಗಗಳ ಒಂದು ಸೇರಿದಂತೆ ಒಟ್ಟು ನಾಲ್ಕು ಕೈಸ್ ವಸತಿ ಶಾಲೆಗಳನ್ನು
K-CET/JEE/NEET ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲು Centre of Excellenceಗಳನ್ನಾಗಿ ಉನ್ನತೀಕರಿಸಲಾಗುವುದು. ಈ ಶಾಲೆಗಳಿಗೆ ಪ್ರತ್ಯೇಕವಾದ ಪ್ರವೇಶ ಪರೀಕ್ಷೆಯ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇದಕ್ಕಾಗಿ ₹5 ಕೋಟಿಗಳನ್ನು ಒದಗಿಸಲಾಗುವುದು.
ನಮ್ಮ ಸರ್ಕಾರವು ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರ ಪೂರೈಸಲು ಪ್ರಾಯೋಗಿಕವಾಗಿ 50 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ, ಅಲ್ಲಿನ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಮೆಸ್ ಸಮಿತಿಯೊಂದನ್ನು ರಚಿಸಿ ಕಾಲಕಾಲಕ್ಕೆ ಅಗತ್ಯ ಅನುದಾನವನ್ನು ಮುಂಗಡವಾಗಿ ನೀಡಿ, ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಮುಂದುವರೆದು, ಈ ಪ್ರಯೋಗದ ಕಲಿಕೆಗಳನ್ನು ಅಳವಡಿಸಿಕೊಂಡು ಹಂತ ಹಂತವಾಗಿ ವಿಸ್ತರಿಸಲಾಗುವುದು.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳಿಂದ 6,562 ವಸತಿ ನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ಪ್ರಸ್ತುತ 8.50 ಲಕ್ಷ ನಿಲಯಾರ್ಥಿಗಳಿದ್ದು, ಇವುಗಳ ನಿರ್ವಹಣೆಯಲ್ಲಿ ಸುಧಾರಣೆ ತರಲು ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಸ್ಥ ಮಹಿಳೆಯರಿಗೆ ತಲಾ 50 ಸಂಖ್ಯಾಬಲದ 10 ವಸತಿ ನಿಲಯಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಪ್ರಾರಂಭಿಸಲಾಗುವುದು.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳಡಿ ಬರುವ ನಿಗಮಗಳಲ್ಲಿ ಮೈಕ್ರೊ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆದ ಮಹಿಳಾ ಸ್ವ-ಸಹಾಯ ಸಂಘಗಳು ಸಾಲವನ್ನು ಸಕಾಲದಲ್ಲಿ ಪೂರ್ಣವಾಗಿ ಮರುಪಾವತಿಸಿದ ಸಂಘಗಳಿಗೆ ಎರಡನೇ ಬಾರಿಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡಲಾಗುವುದು.
ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತಿ ಕಂದಾಯ ವಿಭಾಗಕ್ಕೆ ಒಂದರಂತೆ ನಾಲ್ಕು ವಿಶೇಷ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿಗಳನ್ನು ಒದಗಿಸಲಾಗುವುದು.
ಡಾ|| ಬಿ.ಆರ್. ಅಂಬೇಡ್ಕರ್ ರವರು ಭೇಟಿ ನೀಡಿದ ಸ್ಥಳಗಳಾದ ಕಲಬುರಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅವರ ಹೆಸರಿನಲ್ಲಿ CBSE ಪಠ್ಯಕ್ರಮದ ನಾಲ್ಕು ಕ್ರೈಸ್ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು.
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆಗಳ ಅಡಿಯಲ್ಲಿ ಬರುವ ನಿಗಮಗಳು ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಕೊಳವೆ ಬಾವಿಗಳ ವಿದ್ಯುದೀಕರಣಕ್ಕಾಗಿ ಪಾವತಿಸುವ ಮೊತ್ತವನ್ನು ₹75,000 ಗಳಿಂದ ₹1,50,000 ಗಳಿಗೆ ಹೆಚ್ಚಿಸಲಾಗುವುದು.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ 2026-27ನೇ ಸಾಲಿನಲ್ಲಿ ₹1,500 ಕೋಟಿಗಳನ್ನು ಒದಗಿಸಲಾಗುವುದು.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.
ಪರಿಶಿಷ್ಟ ವರ್ಗಗಳ ಕಲ್ಯಾಣ
ಪರಿಶಿಷ್ಟ ಪಂಗಡಗಳ ಇಲಾಖೆ ಮತ್ತು ನಿರ್ದೇಶನಾಲಯದಡಿ ಬರುವ ನಿಗಮ ಮತ್ತು ಇತರೆ ಕಛೇರಿಗಳಿಗಾಗಿ ಬೆಂಗಳೂರಿನ ಸುಮನಹಳ್ಳಿಯಲ್ಲಿ ‘ಶ್ರೀ ಮಹರ್ಷಿ ವಾಲ್ಮೀಕಿ ಆಡಳಿತ ಸೌಧ’ ಸಂಕೀರ್ಣವನ್ನು ₹50 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.
2026-27ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು.
ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕ/ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್ ಟ್ರೈಲರ್/ ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್ (Kiosk) ಸೌಲಭ್ಯಗಳನ್ನು ನಿಗಮಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ ನಾಲ್ಕು ಲಕ್ಷ ರೂ.ಗಳ ಸಹಾಯಧನ ನೀಡಲಾಗುವುದು.
ಪರಿಶಿಷ್ಟ ಪಂಗಡದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಆರೈಕೆಗಾಗಿ 119 ಮಹಿಳಾ ಕೇರ್ಟೇಕರ್ ಹುದ್ದೆಗಳನ್ನು ಮಂಜೂರು ಮಾಡಲಾಗುವುದು. ಇದಕ್ಕಾಗಿ ₹3 ಕೋಟಿ ಒದಗಿಸಲಾಗುವುದು.
ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ, ಸಿದ್ದಿ ಮತ್ತು ಇತರೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರಿಶಿಷ್ಟ ಪಂಗಡದ PVTG ಗಳಿಗೆ ʻಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮʼವನ್ನು ಸ್ಥಾಪಿಸಲಾಗುವುದು.
ಪರಿಶಿಷ್ಟ ಪಂಗಡದ ಸಮುದಾಯದವರ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅವರ ದೂರು ಮತ್ತು ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕವಾಗಿ ಪರಿಶಿಷ್ಟ ಪಂಗಡಗಳ ಆಯೋಗವನ್ನು ಸ್ಥಾಪಿಸಲಾಗುವುದು.
