ಬೆಂಗಳೂರು: ಪಿಎಸ್ಐ (PSI) ಸಮವಸ್ತ್ರ ಧರಿಸಿ ಮನೆಗೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿದ್ದ ನಾಲ್ವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನಾಗೇಂದ್ರ, ಬೆಟ್ಟೇಗೌಡ, ಬಚ್ಚನ್ ಸೇರಿದಂತೆ ನಾಲ್ವರು ಎಂದು ಗುರುತಿಸಲಾಗಿದೆ. ಇವರಿಂದ 10 ಲಕ್ಷ ರೂ. ನಗದು ಮತ್ತು 429 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಒಟ್ಟು 20 ಲಕ್ಷ ರೂ. ನಗದು ಹಾಗೂ 677 ಗ್ರಾಂ ಚಿನ್ನವನ್ನು ದೋಚಿದ್ದರು ಎಂದು ತಿಳಿದುಬಂದಿದೆ.
ಸಿನಿಮೀಯ ರೀತಿಯಲ್ಲಿ ದರೋಡೆ:
ಈ ದರೋಡೆಯ ಸಂಚು ರೂಪಿಸಿದ್ದವರು ಸಂತ್ರಸ್ತ ಹೊಂಬಾಳೆಗೌಡರ ಸ್ನೇಹಿತ ಬೆಟ್ಟೇಗೌಡ ಎನ್ನಲಾಗಿದೆ. ಹೊಂಬಾಳೆಗೌಡರು ಇತ್ತೀಚೆಗೆ ಸೈಟ್ ಮಾರಾಟ ಮಾಡಿ ಮನೆಯಲ್ಲಿ ಹೆಚ್ಚಿನ ಹಣ ಇಟ್ಟಿರುವ ವಿಷಯ ಬೆಟ್ಟೇಗೌಡನಿಗೆ ತಿಳಿದಿತ್ತು. ಇದೇ ಮಾಹಿತಿಯನ್ನು ಆಧಾರವಾಗಿ ಮಾಡಿಕೊಂಡು ದರೋಡೆಗೆ ಸಂಚು ರೂಪಿಸಲಾಗಿತ್ತು.
ದರೋಡೆ ನಡೆಸಲು ಪೆರೋಲ್ ಮೇಲೆ ಹೊರಬಂದಿದ್ದ ನಾಗೇಂದ್ರನನ್ನು ಬಳಸಿಕೊಂಡಿದ್ದರು. ನಾಗೇಂದ್ರ ಪಿಎಸ್ಐ ಸಮವಸ್ತ್ರ ಧರಿಸಿ ಹೊಂಬಾಳೆಗೌಡರ ಮನೆಗೆ ನುಗ್ಗಿದ್ದನು. ಬಳಿಕ ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿ ಗ್ಯಾಂಗ್ ದರೋಡೆ ನಡೆಸಿತ್ತು.
ಪೊಲೀಸರ ಕಾರ್ಯಾಚರಣೆ:
ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
