ಬೆಂಗಳೂರು: ಲಿವ್-ಇನ್ ಸಂಬಂಧದಲ್ಲಿ ಜನಿಸಿದ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರನ್ನು ಅಳಿಸಿದರೂ ಮಗುವಿನ ಕಾನೂನುಬದ್ಧ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಜನನ ಪ್ರಮಾಣಪತ್ರದಲ್ಲಿ ಉಪನಾಮ ಬದಲಾವಣೆ ಮಾಡಲು ಸಲ್ಲಿಸಿದ್ದ ಮನವಿಯನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಿದ ಜನನ ಮತ್ತು ಮರಣ ನೋಂದಣಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಮಗುವಿನ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ವೇಳೆ ನ್ಯಾಯಪೀಠ ಈ ತೀರ್ಪು ನೀಡಿದೆ.
ಮಗುವಿಗೆ ತಂದೆಯ ಉಪನಾಮ ಕಡ್ಡಾಯವಲ್ಲ ಎಂದು ಹೇಳಿರುವ ನ್ಯಾಯಪೀಠ, ತಾಯಿ ಏಕೈಕ ಆರೈಕೆದಾರರು ಹಾಗೂ ನೈಸರ್ಗಿಕ ಪೋಷಕರಾಗಿದ್ದರೆ ತಾಯಿಯ ವಂಶಾವಳಿಯನ್ನು ಮಗುವಿನ ಉಪನಾಮದ ಗುರುತಾಗಿ ಬಳಸುವುದರಲ್ಲಿ ಯಾವುದೇ ಸಂವಿಧಾನಿಕ ಅಡಚಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಜನನ ಪ್ರಮಾಣಪತ್ರದಲ್ಲಿನ ಹೆಸರಿನಲ್ಲಿ ಉಪನಾಮ ಬದಲಾವಣೆ ಮಾಡಲು ಅಧಿಕಾರವಿಲ್ಲ ಎಂಬ ಉಪನೋಂದಣಾಧಿಕಾರಿಯ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ. 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಪ್ರಕಾರ ಹೆಸರಿನಲ್ಲಿ ಉಂಟಾಗಿರುವ ಗೊಂದಲಗಳನ್ನು ಸರಿಪಡಿಸಲು ಇಲಾಖೆಯ ರಿಜಿಸ್ಟ್ರಾರ್ಗೆ ಅಧಿಕಾರವಿದೆ. ಅದರಂತೆ ಹೆಸರಿನ ದೋಷಗಳಷ್ಟೇ ಅಲ್ಲದೆ ವಿಷಯವಸ್ತುವನ್ನೂ ತಿದ್ದುಪಡಿ ಮಾಡಬಹುದಾಗಿದೆ ಎಂದು ಪೀಠ ಹೇಳಿದೆ.
ಇದಲ್ಲದೆ, ಅರ್ಜಿದಾರರು ಜನನ ಪ್ರಮಾಣಪತ್ರದಿಂದ ತಂದೆಯ ಹೆಸರನ್ನು ಸಂಪೂರ್ಣವಾಗಿ ಅಳಿಸಬೇಕು ಎಂದು ಮನವಿ ಮಾಡಿಲ್ಲ. ತಂದೆಗೆ ಸಂಬಂಧಿಸಿದ ನಮೂನೆಯಲ್ಲಿ ಜೈವಿಕ ತಂದೆಯ ಹೆಸರಿನ ಜೊತೆಗೆ ತಾಯಿಯ ಕುಟುಂಬದ ಹೆಸರನ್ನೂ ಸೇರಿಸಿ ಮಗುವಿನ ಉಪನಾಮಕ್ಕೆ ಮಾತ್ರ ಬದಲಾವಣೆ ಕೋರಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.
ಮಗುವಿನ ಉಪನಾಮ ಬದಲಾಯಿಸುವುದರಿಂದ ಅನುವಂಶಿಕತೆ, ಉತ್ತರಾಧಿಕಾರ ಹಾಗೂ ನಿರ್ವಹಣೆಯ ಹಕ್ಕುಗಳು ಸೇರಿದಂತೆ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಮಗುವಿಗೆ ಜೈವಿಕ ತಂದೆಯಿಂದ ಇರಬಹುದಾದ ಹಕ್ಕುಗಳನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಅರ್ಜಿದಾರ ಮಹಿಳೆ ನೇಪಾಳ ಮೂಲದ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದು, 2017ರಲ್ಲಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಬಳಿಕ ತಂದೆ ಮಹಿಳೆ ಮತ್ತು ಮಗುವಿನಿಂದ ದೂರವಾಗಿದ್ದು, ಮಗುವಿನ ಪಾಲನೆಗೆ ಯಾವುದೇ ಸಹಾಯ ನೀಡಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಮಗುವಿನ ಜನನ ಪ್ರಮಾಣಪತ್ರದಲ್ಲಿನ ಉಪನಾಮವನ್ನು ತಂದೆಯ ಬದಲಿಗೆ ತಾಯಿಯ ಹೆಸರಿನಿಂದ ಬದಲಾಯಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನನ–ಮರಣ ನೋಂದಣಿ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಆ ಮನವಿಯನ್ನು ರಿಜಿಸ್ಟ್ರಾರ್ ತಿರಸ್ಕರಿಸಿದ್ದರಿಂದ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.
