ಸಕಲೇಶಪುರ, ಮಾ.29: ಕೆಲ ದಿನಗಳ ಹಿಂದೆ ಬೆಟ್ಟದ ಭೈರವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ, ದೇವಾಲಯದ ಅರ್ಚಕರು ತಮ್ಮ ಪ್ರತಿಕ್ರಿಯೆ ನೀಡಿದ್ದು, ದೇವಾಲಯಕ್ಕೆ ಬರುವ ಪ್ರವಾಸಿಗರು ಹಾಗೂ ಫೋಟೋಗ್ರಾಫರ್ಗಳು ಸ್ಥಳದ ಪಾವಿತ್ರ್ಯ ಮತ್ತು ನಿಯಮಗಳನ್ನು ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅರ್ಚಕರು, ದೇವಾಲಯ ಆವರಣಕ್ಕೆ ಆಗಮಿಸುವ ಕೆಲ ಪ್ರವಾಸಿಗರು ಮತ್ತು ಫೋಟೋಗ್ರಾಫರ್ಗಳು ಸ್ಥಳದ ಶಿಸ್ತು ಹಾಗೂ ಧಾರ್ಮಿಕ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸುವ ಸಂದರ್ಭಗಳು ಕಂಡುಬರುತ್ತವೆ ಎಂದು ತಿಳಿಸಿದ್ದಾರೆ.
ಮೊನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ, ಅಲ್ಲಿಗೆ ಬಂದಿದ್ದ ಫೋಟೋಗ್ರಾಫರ್ಗಳಿಗೆ ಮುಂಚಿತವಾಗಿಯೇ ಸೂಚನೆ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಕೆಲವು ಚಟುವಟಿಕೆಗಳನ್ನು ನಿಲ್ಲಿಸುವಂತೆ ತಿಳಿಸಿದರೂ, ಅವರು ಮತ್ತೆ ಅದೇ ಕಾರ್ಯವನ್ನು ಮುಂದುವರಿಸಿದರು ಎಂದು ಆರೋಪಿಸಿದ್ದಾರೆ.
ಈ ವಿಚಾರವನ್ನು ಪ್ರಶ್ನಿಸಿದ ವೇಳೆ ಮಾತಿನ ಚಕಮಕಿ ಉಂಟಾಗಿ, ನಂತರ ಅದು ಗಲಾಟೆಗೆ ತಿರುಗಿತು ಎಂದು ಅರ್ಚಕರು ವಿವರಿಸಿದ್ದಾರೆ.
ದೇವಾಲಯದ ಪವಿತ್ರತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಪ್ರವಾಸಿಗರು, ಭಕ್ತರು ಹಾಗೂ ಫೋಟೋಗ್ರಾಫರ್ಗಳು ಸ್ಥಳದ ನಿಯಮಗಳನ್ನು ಪಾಲಿಸಿ ನಡೆದುಕೊಳ್ಳಬೇಕು ಎಂದು ಅರ್ಚಕರು ಮನವಿ ಮಾಡಿದ್ದಾರೆ.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
