ಏಪ್ರಿಲ್ ತಿಂಗಳ ೧ನೇ ತಾರೀಖನ್ನು ಏಪ್ರಿಲ್ ಫೂಲ್ಸ್ ಡೇ, ಅರ್ಥಾತ್ ಮೂರ್ಖರ ದಿನಾಚರಣೆ ಎಂದು ಕರೆಯಲಾಗುತ್ತದೆ. ವಿಶ್ವದ ಬಹುತೇಕ ಭಾಗಗಳಲ್ಲಿ ಒಬ್ಬರನ್ನೊಬ್ಬರು ಗೇಲಿ, ಕುಚೋದ್ಯಗಳ ಮೂಲಕ ತಮಾಷೆ ಮಾಡಿ ಮೂರ್ಖರನ್ನಾಗಿ ಮಾಡುವುದು, ನಗುವುದು-ನಗಿಸುವುದು ಪೂರ್ವದಿಂದಲೂ ನಡೆದುಬಂದಿದೆ.
ಏಪ್ರಿಲ್ ೧ರಂದು ಮೂರ್ಖರನ್ನಾಗಿಸುವ ರೂಢಿಗೆ ಹಲವಾರು ಕಥೆಗಳಿವೆ. ಒಂದು ಕಥೆಯ ಪ್ರಕಾರ, ಏಪ್ರಿಲ್ ೧ರಂದು ಮೂರ್ಖರನ್ನಾಗಿಸುವ ಈ ಪದ್ಧತಿ ರೋಮನ್ನರಿಂದ ಆರಂಭವಾಗಿದೆ. ಬಹಳ ವರ್ಷಗಳ ಹಿಂದೆ ರೋಮನ್ನರ ಹೊಸ ವರ್ಷ ಆರಂಭವಾಗುತ್ತಿದ್ದುದು ಮಾರ್ಚ್ 1 ರಿಂದ. ನಂತರ ಬಂದ ರೋಮನ್ ಚಕ್ರವರ್ತಿಯೊಬ್ಬರು ಆವರೆಗಿನ ರೂಢಿಯನ್ನು ಬದಲಿಸಿ, ಏಪ್ರಿಲ್ ತಿಂಗಳ ಮೊದಲ ದಿನವನ್ನು ವರ್ಷದ ಮೊದಲ ದಿನವೆಂದು ಪರಿಗಣಿಸಿ ಆಚರಿಸುವಂತೆ ಆಜ್ಞೆ ನೀಡಿದರು. ಪ್ರಜೆಗಳಿಗೆ ಇದು ಸರಿ ಕಾಣಲಿಲ್ಲ. ಪರಿಣಾಮ, ಅವರು ಚಕ್ರವರ್ತಿಯನ್ನು ಮೂರ್ಖನೆಂದು ಪರಿಗಣಿಸಿದರು. ಆ ಕಾರಣದಿಂದ ರೋಮನ್ನರಲ್ಲಿ ಏಪ್ರಿಲ್ ತಿಂಗಳ ಮೊದಲ ದಿನವು ಮೂರ್ಖರ ದಿನವೆಂದು ಪರಿಗಣಿಸಲ್ಪಟ್ಟು ಆಚರಣೆಗೆ ಮೊದಲಾಯಿತು. ರೋಮನ್ನರು ಅದನ್ನು ಮೊದಲಿಗೆ ಒಂದು ಹಬ್ಬದ ರೂಪದಲ್ಲಿ ಆಚರಿಸುತ್ತಿದ್ದರು. ಆಗ ಅದು ಆ ದೇಶಕ್ಕೆ ಮಾತ್ರ ಸೀಮಿತವಾಗಿತ್ತು. ನಂತರ ಅದು ಇತರ ದೇಶಗಳಿಗೂ ಹಬ್ಬಿತು.
ಫ್ರಾನ್ಸ್ ದೇಶದಲ್ಲಿ ನೂತನ ವರ್ಷವು ಏಪ್ರಿಲ್ ೧ರಂದು ಆರಂಭವಾಗುತ್ತಿತ್ತು. ಕ್ರಿ.ಶ. ೧೫೬೪ರಲ್ಲಿ ಫ್ರಾನ್ಸ್ ದೇಶದಲ್ಲಿ ಜಗತ್ತಿನ ಮೊಟ್ಟಮೊದಲ ಕ್ಯಾಲೆಂಡರ್ ಅಸ್ತಿತ್ವಕ್ಕೆ ಬಂತು. ಆ ಕ್ಯಾಲೆಂಡರಿನಲ್ಲಿ ಏಪ್ರಿಲ್ ೧ರ ಬದಲಾಗಿ ಜನವರಿ ೧ನ್ನು ಹೊಸ ವರ್ಷದ ಪ್ರಾರಂಭ ದಿನವನ್ನಾಗಿ ಮಾಡಲಾಯಿತು. ಇದನ್ನು ಫ್ರಾನ್ಸಿನ ಕೆಲವು ರೂಢಿವಾದಿಗಳು ವಿರೋಧಿಸಿದರು. ಇವರನ್ನು ಸುಧಾರಣಾವಾದಿಗಳು ಮೂರ್ಖರೆಂದು ಜರಿದು, ಏಪ್ರಿಲ್ ೧ರಂದು ಮೂರ್ಖರ ದಿನವನ್ನು ಆಚರಿಸತೊಡಗಿದರು.
ಕ್ರಿ.ಶ. ೧೫೫೦ರಿಂದ ೧೫೭೪ರವರೆಗೆ ಫ್ರಾನ್ಸ್ ಅನ್ನು ಆಳಿದ ಪ್ರಥಮ ಚಾರ್ಲ್ಸ್, ವರ್ಷಾರಂಭವು ಏಪ್ರಿಲ್ ೧ಕ್ಕೆ ಬದಲಾಗಿ ಜನವರಿ ೧ರಿಂದ ಆಗಬೇಕೆಂದು ಆದೇಶ ಹೊರಡಿಸಿದನು. ಏಪ್ರಿಲ್ ೧ರಂದು ನಡೆಯುತ್ತಿದ್ದ ಪರಂಪರಾಗತ ರೀತಿ-ರಿವಾಜುಗಳು ಜನವರಿ ೧ರಂದು ನಡೆಯಬೇಕೆಂದು ಆದೇಶದಲ್ಲಿ ತಿಳಿಸಲಾಯಿತು. ಏಪ್ರಿಲ್ ೧ರಂದು ಮುಗ್ಧರನ್ನು ಹುಡುಕಿ “ಏಪ್ರಿಲ್ ಮೀನು” ಎಂದು ಕರೆದು ಗೇಲಿ ಮಾಡುವ ಈ ಚಟುವಟಿಕೆಯನ್ನು ಮೀನಿನ ಬೇಟೆ ಎಂದು ಕರೆಯಲಾಯಿತು. ಫ್ರಾನ್ಸ್ ದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ಮೀನುಗಳು ಮರಿಗಳಾಗಿದ್ದು ಸುಲಭವಾಗಿ ಬಲೆಗೆ ಸಿಕ್ಕಿಬೀಳುತ್ತವೆಯಂತೆ. ಹೀಗೆಯೇ ಮುಗ್ಧರು ಸಲೀಸಾಗಿ ಕುಚೋದ್ಯಗಾರರ ಜಾಲಕ್ಕೆ ಸಿಕ್ಕಿಬೀಳುವುದರಿಂದ ಅವರನ್ನು ಹೀಗೆ “ಏಪ್ರಿಲ್ ಮೀನು” ಎಂದು ಕರೆದು ಗೇಲಿ ಮಾಡುತ್ತಿದ್ದರಂತೆ.
ಈ ಏಪ್ರಿಲ್ ಫೂಲ್ಗಳನ್ನು ಸ್ಕಾಟ್ಲೆಂಡ್ನಲ್ಲಿ ಏಪ್ರಿಲ್ ಗೋಕ್, ಫ್ರಾನ್ಸ್ನಲ್ಲಿ ಪೋಯ್ಸನ್ ದ್’ಅವ್ರಿಲ್ (Poisson d’Avril), ಜರ್ಮನಿಯಲ್ಲಿ ನಾರ್ ಎಂದು ಕರೆಯಲಾಗಿದೆ. ಸ್ಕಾಟ್ಲೆಂಡ್ನಲ್ಲಿ ಕೋಗಿಲೆಗಳನ್ನು ದಡ್ಡ ಪಕ್ಷಿ ಎಂದು ತಿಳಿಯಲಾಗುತ್ತಿದ್ದು, ಏಪ್ರಿಲ್ ೧ರಂದು ಹುಂಬರನ್ನು ತಮಾಷೆ ಮಾಡಲು “ಎಲೈ ಕೋಗಿಲೆ”, “ಕೋಳಿಯ ಬಾಯಲ್ಲಿ ಹಲ್ಲು ತೋರಿಸು”, “ಚೌಕಾಕಾರದ ವೃತ್ತ ರಚಿಸು” ಎಂದು ಚುಡಾಯಿಸುತ್ತಿದ್ದರಂತೆ.
ಕ್ರಿ.ಶ. ೧೭೮೧ರ ಮುಂಚಿನ ಕ್ಯಾಲೆಂಡರ್ ಪ್ರಕಾರ ಯುರೋಪಿನಲ್ಲಿ ಏಪ್ರಿಲ್ ೧ ಸಂವತ್ಸರದ ಆರಂಭ ದಿನವಾಗಿ ಬಳಕೆಯಾಗುತ್ತಿತ್ತು. ನಂತರ ೧೮ನೇ ಶತಮಾನದಲ್ಲಿ ಹೊಸ ಕ್ಯಾಲೆಂಡರ್ ರೂಪುಗೊಂಡು, ಏಪ್ರಿಲ್ 1 ರ ಬದಲು ಜನವರಿ 1 ಸಂವತ್ಸರದ ಆರಂಭದ ದಿನವಾಯಿತು. ಈ ಬದಲಾವಣೆಯನ್ನು ಒಪ್ಪದ ಕೆಲವು ಸನಾತನೀಯರು, ಸಂಪ್ರದಾಯಸ್ಥರನ್ನು ಮೂಢರು, ವಿವೇಕಶೂನ್ಯರೆಂದು ಜರಿದು, ಅವರನ್ನು “ಫೂಲ್ಸ್” ಎಂದು ಕರೆದು ಗೇಲಿ ಮಾಡುತ್ತಾ ಏಪ್ರಿಲ್ ಫೂಲಿಂಗ್ ಪ್ರಾರಂಭಿಸಿದರು. ಅದೇ ಏಪ್ರಿಲ್ ಫೂಲ್ ಹುಟ್ಟಿಗೆ ನಾಂದಿಯಾಯಿತು ಎಂದು ಒಂದು ಕಥೆ ಹೇಳುತ್ತದೆ.
ಕ್ರೈಸ್ತಮತದ ಕಥೆಯ ಪ್ರಕಾರ, ನೋವಾರನ್ನು ಆರ್ಕ್ನಿಂದ ಬಿಡುಗಡೆ ಮಾಡಿರುವುದು ಹೀಬ್ರೂ ಕ್ಯಾಲೆಂಡರ್ ಪ್ರಕಾರ ಏಪ್ರಿಲ್ 01 ನೇ ತಾರೀಖಿನಂದೇ. ಈ ಸಂದರ್ಭದಲ್ಲಿ ಎಲ್ಲರೂ ಜೋಕ್ಸ್ ಮಾಡುತ್ತಾ, ಪರಿಹಾಸ್ಯದಿಂದ ಒಬ್ಬರಿಗೊಬ್ಬರು ಮೂರ್ಖರನ್ನಾಗಿ ಮಾಡಿಕೊಂಡು ಕಾಲ ಕಳೆದಂತೆ, ಅದೇ ಏಪ್ರಿಲ್ ಫೂಲ್ಸ್ ಎಂದು ಮುಂದುವರಿದಿದೆ ಎನ್ನಲಾಗುತ್ತದೆ.
ಪ್ರಪಂಚದ ಹಲವೆಡೆ ಮಾರ್ಚ್ 21 , 22 ರಂದು ಹಗಲು-ರಾತ್ರಿಗಳ ಪ್ರಮಾಣ ಸಮನಾಗಿದ್ದು, ಆ ಸಂದರ್ಭದಿಂದ ಏಪ್ರಿಲ್ 01 ರಂದು ಮೋಜು-ಮಜಾದ ಉತ್ಸವವೊಂದನ್ನು ಆಚರಿಸಲಾಗುತ್ತಿತ್ತು. ಈ ಉತ್ಸವದಲ್ಲಿ ನಗುವ-ನಗಿಸುವ ಕ್ರಿಯೆಗೆ ಪ್ರಧಾನ್ಯವಿತ್ತು. ಈ ಉತ್ಸವವೂ ಏಪ್ರಿಲ್ ಫೂಲ್ಗೆ ಪ್ರೇರಕವೆನ್ನಲಾಗಿದೆ.
ಮೂರ್ಖರ ದಿನಾಚರಣೆ ಬ್ರಿಟಿಷರೊಂದಿಗೆ ಭಾರತಕ್ಕೂ ಪಾದಾರ್ಪಣೆ ಮಾಡಿತು. ಭಾರತದಲ್ಲಿ ಹೋಳಿ ಹಬ್ಬಕ್ಕೆ ಆಚರಿಸುವ ಕೆಲವು ರೀತಿ-ರಿವಾಜುಗಳನ್ನೇ ಏಪ್ರಿಲ್ ಫೂಲ್ಗೆ ಹೋಲಿಸಿ ಹೇಳುವುದುಂಟು. ಭಾರತದಲ್ಲಿ ಹಾಸ್ಯ ಸಂಘಗಳು ಏಪ್ರಿಲ್ ಫೂಲ್ ಡೇ ಆಚರಿಸುತ್ತಿದ್ದವು. ಈ ದಿನ ಹಾಸ್ಯ ಚಟಾಕಿ ಹಾರಿಸುವುದು, ಹಾಸ್ಯ ಕವಿಗೋಷ್ಠಿ ಏರ್ಪಡಿಸುವುದು, ಹಾಸ್ಯ ಪ್ರಹಸನ ಪ್ರದರ್ಶಿಸುವುದು ನಡೆದುಬರುತ್ತಿತ್ತು.
ತುಮಕೂರಿನ ದಿವಂಗತ ಗೌಡನಕಟ್ಟೆ ತಿಮ್ಮಯ್ಯನವರು, ತಮ್ಮ ನಗೆಮಲ್ಲಿಗೆ ಸಂಸ್ಥೆಯಿಂದ ತುಮಕೂರು ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಹಾಸ್ಯಸಂಜೆ ಏರ್ಪಡಿಸುತ್ತಿದ್ದರು. ಬೆಳಿಗ್ಗೆ ನಗರದಲ್ಲಿ ಕತ್ತೆ ಮೆರವಣಿಗೆ ಮಾಡುತ್ತಿದ್ದರು. ನಾವು—ನಾನು ಗೊರೂರು ಅನಂತರಾಜು ಮತ್ತು ಕೋ.ಲ. ರಂಗನಾಥರಾವ್—ಒಂದು ವರ್ಷ ತುಮಕೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನು ನಗಿಸಿದ್ದೆವು.
ಇದೇ ಖುಷಿಯಲ್ಲಿ, ಒಂದು ವರ್ಷ ಏಪ್ರಿಲ್ ೧ರಂದು ಹಾಸನದಲ್ಲಿ ಅಂದಿನ ಕಸಾಪ ಅಧ್ಯಕ್ಷರ ಸಹಕಾರ ಪಡೆದು ಹಾಸ್ಯಸಂಜೆ ಏರ್ಪಡಿಸಿದ್ದೆವು. ಅಲ್ಲಿ ಮ್ಯಾಜಿಕ್ ಶೋ ಮಾಡಿದ ಮಹಾಶಯರು ಟೊಪ್ಪಿಗೆ ಕರ್ಚೀಫ್ ಹಾಕಿ ಮತ್ತೇನೋ ತೆಗೆಯಲು ಹೋಗಿ, ನಗೆ ಹೋಗಿ ಹೊಗೆ ಆಯಿತು!
ನಾನು ಹೈಸ್ಕೂಲ್ ಓದುವಾಗ, ನಮ್ಮ ಮನೆಯ ರಸ್ತೆಯಲ್ಲಿ ಹೋಗುವವರನ್ನು ಫೂಲ್ ಮಾಡಲೆಂದು ಒಂದು ಪೆನ್ನಿಗೆ ದಾರ ಕಟ್ಟಿ, ರಸ್ತೆ ಮಧ್ಯೆ ಎಸೆದು, ನಾನು ಮನೆಯ ಜಗಲಿಯ ಗೋಡೆ ಮರೆಯಲ್ಲಿ ಅವಿತು ಕುಳಿತುಕೊಳ್ಳುತ್ತಿದ್ದೆ. ದಾರಿಹೋಕರು “ಎಲ್ಲೋ ಪೆನ್ನು ಬಿದ್ದಿದೆ” ಎಂದು ಎತ್ತಿಕೊಳ್ಳಲು ಹೋದಾಗ ದಾರ ಎಳೆದು, “ಏಪ್ರಿಲ್ ಫೂಲ್..!” ಎಂದು ಜೋರಾಗಿ ಕೂಗಿ ನಗುತ್ತಿದ್ದೆ. ಅವರು ಪೇಚುಪೆಚ್ಚಾಗಿ ಪೆನ್ನು ಅಲ್ಲೇ ಬಿಟ್ಟು ಮುಂದೆ ಹೋಗುತ್ತಿದ್ದರು.
ಆದರೆ ನಮ್ಮ ಹಾಲು ಮಾರುವ ಹೋರಿಗೌಡರು ಸಿಟ್ಟುಗೊಂಡು, “ಮಿಸ್ಟರ್ ಬರಕ್ಲೆ!” ಎಂದು ನನಗೆ ಅಡ್ಡಹೆಸರು ಇಟ್ಟಿದ್ದರು. (ನಾನು ತುಂಬಾ ಚಿಕ್ಕವನಿದ್ದಾಗ ಚಿಕ್ಕಜ್ಜ ಶಂಕರಮೇಷ್ಟ್ರು ಅಂಗಡಿ ಮುಂದೆ ಬಿದ್ದಿದ್ದ ಬರಕ್ಲೆ ಸಿಗರೇಟ್ ತುಂಡನ್ನು ತೆಗೆದು ಸೇದಿದ್ದನೆಂದು ಅವರ ದೂರು. ಆದರೆ ನಿಜಕ್ಕೂ ನಾನು ಎಂದೂ ಸಿಗರೇಟ್ ಸೇದಿದವನಲ್ಲ. ನಾಟಕದಲ್ಲಿ ಮಾತ್ರ ಬೀಡಿ ಸೇದುವ ನರಸಿಂಹರಾಜು ಸ್ಟೈಲ್ ಅನುಕರಿಸುತ್ತಿದ್ದೆ. ಅವರ ಬೆಟ್ಟದ ಹುಲಿ ಚಿತ್ರದ ನಟನೆ ನನಗೆ ಪ್ರೇರಣೆ.)
ನಾನು ಮತ್ತು ಹಾಸ್ಯ ಸಾಹಿತಿ ಕೋ.ಲ. ರಂಗನಾಥರಾವ್, ಶಾಲೆ-ಕಾಲೇಜು, ರೋಟರಿ, ಲಯನ್ಸ್ ಹಾಗೂ ಹಾಸ್ಯ ಸಂಘಗಳಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೆವು. ಒಂದು ದಿನ ಬೆಂಗಳೂರಿನ ಹಾಸ್ಯ ಸಂಘದ ಮಹನೀಯರು ಗೊರೂರಿಗೆ ಬಂದು, ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ಹಾಸ್ಯಸಂಜೆ ಏರ್ಪಡಿಸುತ್ತಿರುವುದಾಗಿ ಹೇಳಿ ನಮ್ಮನ್ನು ಆಹ್ವಾನಿಸಿ ಹೋದರು. ಆಹ್ವಾನ ಪತ್ರವೂ ಕಳಿಸಿದ್ದರು. ಇಪ್ಪತ್ತು ಹಾಸ್ಯ ಸಾಹಿತಿಗಳ ಪಟ್ಟಿಯಲ್ಲಿ ನಮ್ಮ ಹೆಸರು ಇತ್ತು.
ಕಾರ್ಯಕ್ರಮದ ದಿನ ನಾವು ತಡವಾಗಿ ಹೋದೆವು. ಸಂಘಟಕರನ್ನು ಪರಿಚಯಿಸಿಕೊಳ್ಳಲಿಲ್ಲ. ಆಗಲೇ ಕಾರ್ಯಕ್ರಮ ನಡೆಯುತ್ತಿತ್ತು. ಪ್ರೇಕ್ಷಕರ ಸಾಲಿನಲ್ಲಿ ಹೋಗಿ ಕುಳಿತೆವು. ಹಾಸ್ಯ ಸಾಹಿತಿಗಳು ಏನೇನೋ ಜೋಕ್ಸ್ ಹೇಳಿ, ವಕ್ರವಕ್ರವಾಗಿ ನಟಿಸಿ ನಗಿಸಲು ಸರ್ಕಸ್ ಮಾಡುತ್ತಿದ್ದರು. ಆದರೆ ನಮಗೆ ನಗು ಬರುತ್ತಿರಲಿಲ್ಲ. ಏಕೆಂದರೆ ಅವರು ನಮ್ಮನ್ನು ವೇದಿಕೆಗೆ ಕರೆಯುತ್ತಿರಲಿಲ್ಲ!
ಕಾರ್ಯಕ್ರಮ ಮುಗಿಯುತ್ತಾ ಬಂತು. “ನಾವು ಮಂಕುದಿಣ್ಣೆಗಳು… ಛೇ, ಎಡವಟ್ಟು ಆಯ್ತಲ್ಲಾ!” ಎಂದುಕೊಂಡು ತೆರೆ ಹಿಂದೆ ಹೋಗಿ ನಾವು ಬಂದಿರುವ ಸಂಗತಿ ತಿಳಿಸಿದೆವು. “ಸಾರಿ” ಎಂದ ನಿರೂಪಕರು ನಮ್ಮ ಹೆಸರು ಕರೆದರು. ನಾವು ವೇದಿಕೆಗೆ ಹೋದರೆ, ಪ್ರೇಕ್ಷಕರು ಮನೆಗೆ ಹೊರಟು ಹೋಗುತ್ತಿದ್ದರು. ಇಂತಹ ಕಾಲಕ್ಕೆ ನಮ್ಮ ಜೋಕ್ಸ್ ಎಂತಪ್ಪ ರುಚಿಸುತ್ತದೆ? ಮೂರ್ಖರಾದೆವು… ನಾವು ಶತಮೂರ್ಖರಾದೆವು!
ಏನೇ ಆಗಲಿ, ನಾವಿಬ್ಬರೂ ಜೊತೆಯಾಗಿ ಮೂರು ವರ್ಷಗಳಲ್ಲಿ ನೂರು ಹಾಸ್ಯ ಕಾರ್ಯಕ್ರಮ ನೀಡಿ ಶತಕ ಹೊಡೆದವು. ನಾನು ಹಾಸ್ಯ ಕಾರ್ಯಕ್ರಮದಲ್ಲಿ ಅಭಿನಯಿಸಿದ ಕಿರು ಜೋಕ್ಸ್ಗಳನ್ನೇ ಹಾಸ್ಯ ಲೇಖನಗಳಾಗಿ ವಿಸ್ತರಿಸಿ ‘ಸನ್ಮಾನ, ಪ್ರಶಸ್ತಿ ಪರಂತು’ ಎಂಬ ಪುಸ್ತಕವನ್ನು 2017ರಲ್ಲಿ ಪ್ರಕಟಿಸಿದೆ. ಇಂದು ಕೋ.ಲ.ರಂ. ನಮ್ಮೊಂದಿಗೆ ಇಲ್ಲ. ಆದರೆ ಆ ದಿನಗಳನ್ನು ಮರೆಯುವಂತಿಲ್ಲ.
ಏಪ್ರಿಲ್ ಫೂಲ್ಸ್ಗೆ ಸಂಬಂಧಿಸಿದಂತೆ ಒಂದು ಜೋಕ್ ಹೀಗಿದೆ:
ಒಂದು ಸಲ ಫ್ರೆಂಚ್ ವನಿತೆ ಏಪ್ರಿಲ್ ೧ರಂದು ಮನೆಯೊಂದರಲ್ಲಿ ಒಡವೆಗಳನ್ನು ಕಳ್ಳತನ ಮಾಡಿದಳು. ಆಕೆಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ಆಕೆ “ಏಪ್ರಿಲ್ ೧ಕ್ಕೆ ಮನೆಯವರನ್ನು ಫೂಲ್ ಮಾಡಲು, ಕೇವಲ ತಮಾಷೆಗೋಸ್ಕರ ಈ ಕಳ್ಳತನ ಮಾಡಿದೆ ಅಷ್ಟೇ” ಎಂದು ನಗುನಗುತ್ತಾ ಹೇಳಿಕೆ ನೀಡಿದಳು. ಆಗ ಹಾಸ್ಯಪ್ರಿಯರಾದ ನ್ಯಾಯಾಧೀಶರು ಕೂಡ ನಗುತ್ತಾ, “ತಮಾಷೆಗೋಸ್ಕರ ಮಾಡಿದ ಈ ಕಳ್ಳತನದ ಶಿಕ್ಷೆ ಏನೆಂದರೆ, ಬರುವ ವರ್ಷ ಏಪ್ರಿಲ್ 1 ರವರೆಗೆ ಜೈಲಿನಲ್ಲಿ ಇದ್ದು ತಮಾಷೆಯಾಗಿಯೇ ನಗುನಗುತ್ತಾ ಕಾಲ ಕಳಿ!” ಎಂದು ತೀರ್ಪು ನೀಡಿದರಂತೆ!
– ಗೊರೂರು ಅನಂತರಾಜು, ಹಾಸನ
