ನವದೆಹಲಿ: ಭಾರತದಲ್ಲಿ ಆನ್ಲೈನ್ ಗೇಮಿಂಗ್ ಕ್ಷೇತ್ರವನ್ನು ನಿಯಂತ್ರಿಸಲು ಹಾಗೂ ಬಳಕೆದಾರರ ಸುರಕ್ಷತೆ ಹೆಚ್ಚಿಸಲು ಕೇಂದ್ರ ಸರ್ಕಾರ ಮೇ 1, 2026ರಿಂದ ಹೊಸ ನಿಯಮಾವಳಿಗಳನ್ನು ಜಾರಿಗೆ ತರುತ್ತಿದೆ. 2025ರ “ಪ್ರಮೋಶನ್ ಅಂಡ್ ರೆಗ್ಯುಲೇಶನ್ ಆಫ್ ಆನ್ಲೈನ್ ಗೇಮಿಂಗ್ ಕಾಯ್ದೆ” ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ನಿಯಮಗಳಡಿ ದೆಹಲಿಯಲ್ಲಿ “ಆನ್ಲೈನ್ ಗೇಮಿಂಗ್ ಅಥಾರಿಟಿ ಆಫ್ ಇಂಡಿಯಾ” ಎಂಬ ಕೇಂದ್ರ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಗೇಮ್ಸ್ ವರ್ಗೀಕರಣ, ದೂರು ಪರಿಹಾರ ಹಾಗೂ ಹಣಕಾಸು ವ್ಯವಹಾರಗಳ ಮೇಲ್ವಿಚಾರಣೆ ನಡೆಸಲಿದೆ.
ಹೊಸ ನಿಯಮಾವಳಿಗಳ ಪ್ರಕಾರ, ಗೇಮ್ಸ್ ಅನ್ನು ಆನ್ಲೈನ್ ಮನಿ ಗೇಮ್ಸ್, ಸಾಮಾಜಿಕ ಗೇಮ್ಸ್ ಹಾಗೂ ಇ-ಸ್ಪೋರ್ಟ್ಸ್ ಎಂದು ಮೂರು ವಿಭಾಗಗಳಾಗಿ ವರ್ಗೀಕರಿಸಲಾಗುತ್ತದೆ. ಗೇಮ್ನಲ್ಲಿ ಹಣದ ವ್ಯವಹಾರ, ಬಹುಮಾನ ವ್ಯವಸ್ಥೆ ಮುಂತಾದ ಅಂಶಗಳ ಆಧಾರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ನೋಟಿಫೈಡ್ ಗೇಮ್ಸ್ ಮತ್ತು ಇ-ಸ್ಪೋರ್ಟ್ಸ್ ವೇದಿಕೆಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, 10 ವರ್ಷಗಳವರೆಗೆ ಮಾನ್ಯವಾಗುವ ಡಿಜಿಟಲ್ ಪ್ರಮಾಣಪತ್ರ ನೀಡಲಾಗುತ್ತದೆ. ಜೊತೆಗೆ ವಯಸ್ಸು ಪರಿಶೀಲನೆ, ಪೋಷಕರ ನಿಯಂತ್ರಣ, ಸಮಯ ಮಿತಿ ಹಾಗೂ ದೂರು ಸಲ್ಲಿಕೆ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.
ದೂರು ಪರಿಹಾರಕ್ಕೆ ಎರಡು ಹಂತದ ವ್ಯವಸ್ಥೆ ಜಾರಿಯಲ್ಲಿದ್ದು, ಮೊದಲಿಗೆ ಗೇಮಿಂಗ್ ವೇದಿಕೆಗೆ ದೂರು ನೀಡಬೇಕು. ತೃಪ್ತಿ ಸಿಗದಿದ್ದರೆ ಗೇಮಿಂಗ್ ಅಥಾರಿಟಿ ಹಾಗೂ ನಂತರ MeitY ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು.
ಈ ಕ್ರಮದ ಮೂಲಕ ಹಾನಿಕಾರಕ ಹಣ ಆಧಾರಿತ ಗೇಮಿಂಗ್ ನಿಯಂತ್ರಿಸಿ, ಸುರಕ್ಷಿತ ಡಿಜಿಟಲ್ ಮನರಂಜನೆ ಹಾಗೂ ಇ-ಸ್ಪೋರ್ಟ್ಸ್ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶ ಸರ್ಕಾರದಾಗಿದೆ.
