ರಾಮನಾಥಪುರ, ಏ.2: ನಮ್ಮ ಬದುಕಿನ ಮಹೋನ್ನತ ಸಾಧನೆಗೆ ಹಾಡುಗಾರಿಕೆ, ಸಂಗೀತ ಹಾಗೂ ಭಕ್ತಿಯೋಗವೇ ನಿಜವಾದ ಮಾರ್ಗವಾಗಿದ್ದು, ಸಮಾಜದ ಪರಿವರ್ತನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಸಂಗೀತ ವಿದ್ವಾಂಸರು ಹಾಕಿಕೊಟ್ಟ ಸಂಗೀತ ಪರಂಪರೆಯನ್ನು ಪ್ರಾಮಾಣಿಕವಾಗಿ ಮುಂದುವರಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ವೇ. ತಿರುಮಲಚಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ 7ನೇ ದಿವಸದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಸಂಗೀತ ಮತ್ತು ಸಾಹಿತ್ಯ ಒಂದೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಕಲಾವಿದ ವಿ. ವಿವೇಕ್ ಮೋಜೀಕುಳಂ ಅವರು ಸಂಗೀತ ಕಚೇರಿ ನಡೆಸಿ, ರಾಗಸುಧೆ ಹರಿಸುವ ಮೂಲಕ ಸಭಿಕರನ್ನು ರಂಜಿಸಿದರು. ಅವರ ಗಾಯನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಇಂದಿನ ಸೇವಾಕರ್ತರಾಗಿ ದಿ. ಶ್ರೀ ಸಿ.ಕೆ. ಜನಾರ್ಧನ ಅಯ್ಯಂಗಾರ್ ಅವರ ಮಕ್ಕಳು, ಶ್ರೀ ಸಿ.ಜೆ.ವಿ. ಕೃಷ್ಣ ಮತ್ತು ಸಹೋದರರು, ಪುತ್ತೂರು ಶ್ರೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ, ಹಾಗೂ ಸಾಗರದ ಶ್ರೀ ನಾರಾಯಣ ಅಯ್ಯಂಗಾರ್, ಮೈಸೂರು ಇವರು ಕಾರ್ಯಕ್ರಮದ ಎಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸಿದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
