ರಾಮನಾಥಪುರ: ಮಹಿಳೆಯರು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಾಗಿರದೇ, ಇಂದು ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರವೇಶ ಮಾಡಿ ಸಾಧನೆಯ ಉತ್ತುಂಗದಲ್ಲಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಶಾಸಕ A. Manju ಹೇಳಿದರು.
ಪಟ್ಟಣದ ಶ್ರೀ ಕಾವ್ಯಾಜಂಲಿ ಕಾರ್ಯಕ್ರಮ ಭವನದಲ್ಲಿ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್), ಅರಕಲಗೂಡು ವತಿಯಿಂದ ಆಯೋಜಿಸಲಾದ ಐಸಿಡಿಎಸ್ ಸುವರ್ಣ ಸಂಭ್ರಮ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ತ್ರೀಯರಲ್ಲಿ ನಿರ್ವಹಣಾ ಮನೋಸಾಮರ್ಥ್ಯ ಅಪಾರವಾಗಿದ್ದು, ಕುಟುಂಬದಲ್ಲಿ ಎದುರಾಗುವ ಸಂಕಷ್ಟ, ಸುಧಾರಣೆ, ಪ್ರಗತಿ ಮತ್ತು ಸಂಸ್ಕೃತಿಯನ್ನು ಸಮರ್ಥವಾಗಿ ನಿರ್ವಹಿಸುವ ಶಕ್ತಿ ಮಹಿಳೆಯರಲ್ಲಿ ಇದೆ ಎಂದು ಹೇಳಿದರು. ಕುಟುಂಬದಲ್ಲಿ ಸ್ತ್ರೀಯರ ಪಾತ್ರ ಬಹುಮುಖವಾಗಿದೆ.

ನಮ್ಮನ್ನು ಸಾಕುವವಳು, ಸಲಹೆ ನೀಡುವವಳು, ಜೀವನಕ್ಕೆ ಮಾರ್ಗದರ್ಶನ ಮಾಡುವವಳು ಹೆಣ್ಣು. ಇಂತಹ ಶಕ್ತಿ ಹೊಂದಿರುವ ಮಹಿಳೆಯರು ಸಾಹಿತ್ಯದಿಂದ ಹಿಡಿದು ಆಡಳಿತದವರೆಗೂ ತಮ್ಮದೇ ಆದ ಗುರುತು ಮೂಡಿಸಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಅರಕಲಗೂಡು ಸಿಡಿಪಿಓ, ಎಂ.ಪಿ. ವೆಂಕಟೇಶ್, ಮಲ್ಲಿಪಟ್ಟಣ ಕಾಲೇಜು ಪ್ರಾಂಶುಪಾಲೆ ಚಂದ್ರಕಲಾ, ಸಮಾಜ ಸೇವಕರಾದ ಸುಂದರೇಶ್ ಉಡವಾರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
