ಕೆ.ಆರ್.ಪೇಟೆ,ಏ.10: ತಾಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ದೇವರ ಉತ್ಸವ ತೆರಳುವ ಬೀದಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಅವರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು ಬಲ್ಲೇನಹಳ್ಳಿ ಗ್ರಾಮವು ನಮ್ಮ ತಾಲ್ಲೂಕಿನಲ್ಲಿಯೇ ಸೇವಂತಿಗೆ ಹೂವಿನ ಮಾರುಕಟ್ಟೆಗೆ ಹೆಸರುವಾಸಿಯಾದ ಊರಾಗಿದೆ. ಕೆ.ಆರ್.ಎಸ್. ನಿರ್ಮಾಣವಾದ ಸಂದರ್ಭದಲ್ಲಿ ಇಡೀ ಗ್ರಾಮ ಮುಳುಗಡೆಯಾದ ಕಾರಣ ಅಲ್ಲಿನ ಎಲ್ಲಾ ಕುಟುಂಬಗಳು ಇಲ್ಲಿ ಬಂದು ನೆಲೆಸಿದವು. ಇಲ್ಲಿನ ಜನರು ಸೇವಂತಿಗೆ ಹೂವಿನ ಬೇಸಾಯದಲ್ಲಿ ಬದುಕು ಕಟ್ಟಿಕೊಂಡ ಜನರಾಗಿದ್ದಾರೆ.
ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಸೇವಂತಿಗೆ ಹೂವ ಬೆಳೆಯುವ ಗ್ರಾಮವಾಗಿರುವ ಕಾರಣ ಇಲ್ಲಿ ಸುಸಜ್ಜಿತ ಸೇವಣಂತಿಗೆ ಹೂವಿನ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಈ ಮಾರುಕಟ್ಟೆಯ ಅಭಿವೃದ್ಧಿಗೆ ಹಾಗೂ ಬಲ್ಲೇನಹಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ಈಗಾಗಲೇ ಹಲವು ಅಬಿವೃದ್ಧಿ ಕಾಮಗಾರಿಗಳನ್ನು ಮಂಜೂರು ಮಾಡಿಕೊಟ್ಟಿದ್ದೇನೆ.
ಗ್ರಾಮದೊಳಗಿನ ರಸ್ತೆಗಳ ಅಭಿವೃದ್ಧಿಗೆ ನನ್ನ ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಲ್ಲಿ ಈಗ 20 ಲಕ್ಷಗಳನ್ನ ಮಂಜೂರು ಮಾಡಿದ್ದೇನೆ. ಇದು ಗ್ರಾಮದೇವತೆ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ದೇವರ ಉತ್ಸವವು ತೆರಳುವ ಮಾರ್ಗದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದೇನೆ. ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ಈ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಮೂಲಕ 12ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವತೆಯ ಹಬ್ಬದ ಆಚರಣೆಗೆ ಸಹಕಾರ ಕೊಡಬೇಕೆಂದು ಶಾಸಕರು ಸೂಚನೆ ನೀಡಿದರು.
ಈ ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಮ್.ರಾಮಚಂದ್ರನ್, ಗ್ರಾಮದ ಹಿರಿಯ ಮುಖಂಡರಾದ ದೊಡ್ಡಪಾಪೇಗೌಡ, ಪಟೇಲ್ ಸ್ವಾಮಿಗೌಡ ಬಿ.ಟಿ.ಪ್ರಕಾಶ್, ಪಿಡಿಓ ರಚನಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
