ತುಮಕೂರು : ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಂಡನೆಯಾಗಿದ್ದ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡನೆ (ಡಿಲಿಮಿಟೆಷನ್) ಬಿಲ್ ಲೋಕಸಭೆಯ ಅನುಮೋಧನೆ ಪಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದವತಿಯಿಂದ ನಗರದ ಟೌನ್ಹಾಲ್ ವೃತ್ತದಲ್ಲಿ ಇಂದು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಇಕ್ಬಾಲ್ಅಹಮದ್ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸುವ ಮೂಲಕ ಮಹಿಳಾ ಮೀಸಲಾತಿ ಮಸೂದೆಯ ಹೆಸರಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಕಂಟಕ ಪ್ರಾಯವಾದ ಡಿಲಿಮಿಟೇಷನ್ ಬಿಲ್ ಮಂಡನೆ ಮಾಡಿ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಬಿಜೆಪಿಯ ಹುನ್ನಾರವನ್ನು ಸಂಸದರು ತಡೆದಿದ್ದಾರೆ. ಇದೊಂದು ಐತಿಹಾಸಿಕ ಜಯ ಎಂದು ಬಣ್ಣಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರೂ ಮತ್ತು ಹಿರಿಯ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಇಕ್ಬಾಲ್ಅಹಮದ್ ಮಾತನಾಡಿ,ಮಹಿಳಾ ಮೀಸಲಾತಿ ಹೆಸರಿನಲ್ಲಿ ಅವೈಜ್ಞಾನಿಕ ಡಿಲಿಮಿಟೆಷನ್ ಬಿಲ್ ತರಲು ಹೊರಟಿದ್ದ ಬಿಜೆಪಿಗೆ ಸೋಲಾಗಿರುವುದು ನನ್ನಂತಹ ಕೋಟ್ಯಾಂತರ ಜನರಿಗೆ ಸಂತೋಷದ ವಿಚಾರವಾಗಿದೆ.ನಾರಿ ಶಕ್ತಿ ಹೆಸರಿನಲ್ಲಿ ದೇಶದ ಜಿಡಿಪಿಗೆ ಸಾಕಷ್ಟು ಕೊಡುಗೆ ನೀಡುತ್ತಿರುವ ದಕ್ಷಿಣ ರಾಜ್ಯಗಳನ್ನು ಮೂಲೆ ಗುಂಪು ಮಾಡುವ ಬಿಜೆಪಿಯ ಪ್ರಯತ್ನಕ್ಕೆ ಹಿನ್ನೆಡೆಯಾಗಿದೆ.ಇದೊಂದು ಐತಿಹಾಸಿಕ ಜಯ.ಮತದಾನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸಂಸದರನ್ನು ಅಭಿನಂದಿಸುತ್ತೇನೆ.ಜನಸಂಖ್ಯೆ ಆಧಾರದಲ್ಲಿ ಎಂ.ಪಿ.ಕ್ಷೇತ್ರಗಳ ಪುನರ್ ವಿಂಗಡನೆಯಿಂದ ಸರಕಾರದ ನಿಯಮಗಳನ್ನು ಪಾಲಿಸಿ, ಜನಸಂಖ್ಯಾ ನಿಯಂತ್ರಣ ಅಳವಡಿಸಿಕೊಂಡು, ಅಭಿವೃದ್ದಿಗೆ ಹೆಚ್ಚಿನ ತೆರಿಗೆ ನೀಡುತ್ತಿರುವ ದಕ್ಷಿಣ ರಾಜ್ಯಗಳಿಗೆ ಬಹಳ ದೊಡ್ಡ ನಷ್ಟವಾಗಲಿದೆ.ದಕ್ಷಿಣ ರಾಜ್ಯಗಳ ದ್ವನಿ ಅಡಗಿಸುವ ಬಿಜೆಪಿ ಹುನ್ನಾರಕ್ಕೆ ಎಂದಿಗೂ ಜನ ಬೆಲೆ ನೀಡುವುದಿಲ್ಲ ಎಂಬುದಕ್ಕೆ ನಿನ್ನೆಯ ಲೋಕಸಭಾಅಧಿವೇಶನ ಸಾಕ್ಷಿಯಾಗಿದೆ.ಡಿಲಿಮಿಟೇಷನ್ ಬಿಟ್ಟು, ಇರುವ 543 ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಬಿಲ್ ಮಂಡಿಸಿದರೆ ಕಾಂಗ್ರೆಸ್ ಬೆಂಬಲ ನೀಡಲು ಸಿದ್ದವಿದೆ.ಬಿಜೆಪಿಯ ಕುತಂತ್ರಕ್ಕೆ ದಕ್ಷಿಣ ಭಾರತದ ಜನರು ಬಲಿಯಾಗುವುದು ತಪ್ಪಿದಂತಾಗಿದೆ.ಇದಕ್ಕಾಗಿ ಕಾಂಗ್ರೆಸ್ ಸಂಭ್ರಮಾಚರಣೆ ನಡೆಸುತ್ತಿದೆ ಎಂದರು.
ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಮಹಿಳಾ ಮೀಸಲಾತಿಯನ್ನು ತರಲು ಮುಂದಾಗಿದ್ದಾಗ, ಬಿಜೆಪಿ ಅಧಿವೇಶನ ಬಹಿಷ್ಕರಿಸಿ ಹೊರ ನಡೆದಿತ್ತು.2029ರ ಚುನಾವಣೆಗೆ 2011ರ ಜನಗಣತಿ ಆಧಾರದಲ್ಲಿ ಮಹಿಳಾ ಮೀಸಲಾತಿ ಕಲ್ಪಿಸಲು ಹೊರಟಿರುವುದು ಅತ್ಯಂತ ಖಂಡನೀಯ. ಕೇಂದ್ರ ಸರಕಾರಕ್ಕೆ ಮಹಿಳೆಯರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ 2026 ಜನಗಣತಿ ನಂತರ ಡಿಲಿಮಿಟೆಷನ್ ನಡೆಸಿ, ಮಹಿಳಾ ಮೀಸಲಾತಿ ಜಾರಿಗೊಳಿಸಲಿ ಎಂದು ಸವಾಲು ಹಾಕಿದರು.
ಜಿಲ್ಲಾಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತ ಮಾತನಾಡಿ,ಕಾಂಗ್ರೆಸ್ ಎಂದಿಗೂ ಮಹಿಳಾ ಮೀಸಲಾತಿಗೆ ವಿರೋಧವಿಲ್ಲ. ಕಾಂಗ್ರೆಸ್ ಪಕ್ಷದೇಶದ ಪ್ರಧಾನಿಯಾಗಿ, ಲೋಕಸಭೆಯ ಸ್ಪೀಕರ್ ಆಗಿ, ದೇಶದ ಪ್ರಥಮ ಪ್ರಜೆ ರಾಷ್ಟçಪತಿಗಳಾಗಿ ಮಹಿಳೆಯರನ್ನು ನೇಮಕ ಮಾಡಿದೆ.ಬಿಜೆಪಿಯಂತೆ ಮಹಿಳೆಯರ ಹೆಸರಿನಲ್ಲಿ ತಮ್ಮ ಬೆಳೆ ಬೆಯಿಸಿಕೊಳ್ಳಲು ಹೋಗಿಲ್ಲ. ಕಾಂಗ್ರೆಸ್ನ ವಿರೋಧವಿರುವುದು ಡಿಲಿಮಿಟೆಷನ್ಗೆ ಹೊರತು, ಮಹಿಳಾ ಮೀಸಲಾತಿಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಷಫಿಅಹಮದ್,ನರಸೀಯಪ್ಪ, ಗುರುಪ್ರಸಾದ್, ಆಟೋರಾಜು, ಸೌಭಾಗ್ಯ, ನಾಗಮಣಿ, ಕವಿತಾ, ನಟರಾಜಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫಯಾಜ್, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
