ಹಾಸನ, ಏ.20 : ಜಿಲ್ಲಾಧಿಕಾರಿ K. S. Latha Kumari ಅವರು ಇಂದು ನಗರದ ಲಕ್ಷ್ಮೀಪುರ ಬಡಾವಣೆ, ಎಸ್.ವಿ.ಎಂ. ಸ್ಕೂಲ್ ಹಿಂಭಾಗ ಹಾಗೂ ಪೆನ್ಷನ್ ಮೊಹಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಜನಗಣತಿ ಕಾರ್ಯವನ್ನು ಪರಿಶೀಲಿಸಿದರು.
ಈ ವೇಳೆ ಗಣತಿದಾರರೊಂದಿಗೆ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಣೆಯ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಮಾತನಾಡಿದ ಅವರು, ದೇಶದಾದ್ಯಂತ ನಡೆಯುತ್ತಿರುವ ಜನಗಣತಿ 2027 ಕಾರ್ಯ ಹಾಸನ ಜಿಲ್ಲೆಯಲ್ಲಿಯೂ ಸಕ್ರೀಯವಾಗಿ ನಡೆಯುತ್ತಿದೆ ಎಂದರು. ಗಣತಿದಾರರು ಮನೆಗೆ ಭೇಟಿ ನೀಡಿದಾಗ ಕೇಳುವ 34 ಸರಳ ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ಕೇವಲ 5 ನಿಮಿಷಗಳಲ್ಲಿ ಗಣತಿ ಪೂರ್ಣಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.
ಪ್ರಸ್ತುತ ಬಿಸಿಲು ಹೆಚ್ಚಿರುವುದರಿಂದ ಗಣತಿದಾರರು ಬೆಳಗ್ಗೆ 6 ಗಂಟೆಯಿಂದಲೇ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲವೆಡೆ ಮಾಹಿತಿ ನೀಡಲು ನಾಗರಿಕರು ಹಿಂಜರಿಯುತ್ತಿರುವುದು ಗಮನಕ್ಕೆ ಬಂದಿದೆ ಎಂದ ಅವರು, ಗಣತಿದಾರರಿಗೆ ನೀಡಿರುವ ಗುರುತಿನ ಚೀಟಿಯಲ್ಲಿ ಇರುವ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅವರ ವಿವರಗಳನ್ನು ಪರಿಶೀಲಿಸಬಹುದಾಗಿದೆ ಎಂದು ತಿಳಿಸಿದರು.
ಜನಗಣತಿ ದೇಶದ ಶಾಸನಬದ್ಧ ಕರ್ತವ್ಯವಾಗಿದ್ದು, ಪ್ರತಿಯೊಬ್ಬ ನಾಗರಿಕರು ಗೌರವಯುತವಾಗಿ ಮಾಹಿತಿ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ತಹಸೀಲ್ದಾರ್ ಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
