ಹಾಸನ, ಏಪ್ರಿಲ್ 20: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಎನ್.ಹೊಸಳ್ಳಿ ಗ್ರಾಮದಲ್ಲಿ ಕೆರೆಯಲ್ಲಿ ಮುಳುಗಿ ಮಾವ ಹಾಗೂ ಅಳಿಯ ಸಾವನ್ನಪ್ಪಿರುವ ದುರ್ಘಟನೆ ನಿನ್ನೆ ಸಂಭವಿಸಿದೆ.
ಮೃತರನ್ನು ಪ್ರಭಾಕರ್ (45) ಮತ್ತು ಪ್ರತೀಕ್ (12) ಎಂದು ಗುರುತಿಸಲಾಗಿದೆ. ಪ್ರತೀಕ್ ಮೂಲತಃ ದುದ್ದ ಹೋಬಳಿ ಸೋಮನಹಳ್ಳಿ ಗ್ರಾಮದವನಾಗಿದ್ದು, ಬೇಸಿಗೆ ರಜೆ ಹಿನ್ನೆಲೆ ಮಾವನ ಮನೆಗೆ ಬಂದಿದ್ದನು.

ನಿನ್ನೆ ಇಬ್ಬರೂ ಕೆರೆಯ ಏರಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪ್ರತೀಕ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ತಕ್ಷಣ ಅವನನ್ನು ರಕ್ಷಿಸಲು ಪ್ರಭಾಕರ್ ಕೆರೆಗೆ ಇಳಿದರೂ, ಈಜು ಬಾರದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಈ ದುರ್ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
