ತುಮಕೂರು : ಬಸವಣ್ಣ ಎಂದರೆ ವ್ಯಕ್ತಿಯಲ್ಲ, ಅದೊಂದು ಶಕ್ತಿ, ಅದೊಂದು ತತ್ವ. ಬಸವ ತತ್ವದಲ್ಲಿ ಸಮಾಜದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಇಂದು ಮಧ್ಯಪ್ರಾಚ್ಯದೇಶಗಳಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ನಾವು ಇಂತಹ ಆಚರಣೆಗಳನ್ನು ಮಾಡಿಕೊಂಡು ನೆಮ್ಮದಿಯಾಗಿದ್ದೇವೆಂದರೆ ಅದಕ್ಕೆ ಅನೇಕ ಮಹನೀಯರು ಕೊಟ್ಟ ಚಿಂತನೆಗಳೇ ಕಾರಣ ಎಂದು ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ಅಂಗಸಂಸ್ಥೆಗಳು ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಬಸವೇಶ್ವರರು, ಹಾಗೂ ಕಾಯಕಯೋಗಿ ಸಿದ್ಧರಾಮೇಶ್ವರರ ಜಯಂತೋತ್ಸವದ ಅಂಗವಾಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಧರ್ಮ ಸಮ್ಮೇಳನದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ಬಸವಣ್ಣನವರ ತತ್ವಗಳು ಸಾರ್ವಕಾಲಿಕವಾಗಿವೆ. ನಮ್ಮಲ್ಲಿ ಬಸವಪ್ರಜ್ಞೆ ಮೂಡದಿದ್ದರೆ ಅವರ ಜಯಂತಿಗಳು ಕೇವಲ ಸಮಾರಂಭವಾಗುತ್ತವೆ ಅಷ್ಟೇ ಎಂದರು.
ಅಂದಿನ ಕಾಲದಲ್ಲಿ ಇದ್ದ ಸಾಮಾಜಿಕ ಅಸಮಾನತೆ, ಹೆಣ್ಣು-ಗಂಡಿನ ನಡುವಿನ ತಾರತಮ್ಯ, ಮೇಲು-ಕೀಳು, ಜಾತಿ ವೈಷಮ್ಯ, ಮೂಢ ನಂಬಿಕೆ ಇವುಗಳ ಬಗ್ಗೆ ಆಲೋಚನೆ ಮಾಡಿದ ಬಸವಣ್ಣ ಇವುಗಳು ಮಾನವನ ಉನ್ನತಿಗೆ ತೊಡಕಾಗಿವೆ ಎಂದು ತೊಡೆದುಹಾಕುವ ಪ್ರಯತ್ನ ಮಾಡಿದರು. ಸರ್ವಸಮಾನತೆಯ ಸಂದೇಶ ಸಾರಿದರು. ಬಸವಣ್ಣನವರು ಸರ್ವ ಸಮಾಜಗಳ ಕ್ರಾಂತಿಕಾರರಾದರು ಎಂದು ಸ್ವಾಮೀಜಿ ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಮ್ಮ ಸಮಾಜದ ಪರಂಪರೆಯನ್ನು ಮುಂದುವರೆಸಲು ಯುವಪೀಳಿಗೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಸಮಾಜದ ಅಸ್ತಿತ್ವ ಉಳಿಸಲು ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗಬೇಕು. ಇಂದು ವೀರಶೈವ ಸಮಾಜ ವಿಶ್ವದಾದ್ಯಂತ ಇದೆ. ಹೊರದೇಶಗಳಲ್ಲೂ ಬಸವ ಜಯಂತಿ ಕಾರ್ಯಕ್ರಮ ನಡೆಯುತ್ತಿವೆ ಎಂದರು.
ವೀರಶೈವ ಸಮಾಜವು ವಿಶ್ವಮಟ್ಟದಲ್ಲಿ ಪ್ರಚಾರ ಪಡೆದಿದೆಯೆಂದರೆ ಅದಕ್ಕೆ ನಮ್ಮ ಮಠಮಾನ್ಯಗಳ ಮಠಾಧೀಶರುಗಳೇ ಪ್ರಮುಖ ಕಾರಣ. ಸಮಾಜ ಬಂಧುಗಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡು ಯಶಸ್ವಿಯಾಗಬೇಕು. ಹಾಗೇ ನಮ್ಮ ಸಮಾಜದ ಅಸ್ತಿತ್ವದ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ಹೇಳಿದರು.
ಸಪ್ತಗಿರಿ ಕಾಲೇಜಿನ ಶಿಕ್ಷಣಾಧಿಕಾರಿ ಚನ್ನಪ್ಪ ಬಾರಿಗಿಡದ ವಿಶೇಷ ಉಪನ್ಯಾಸ ನೀಡಿದರು.
ಟಿ.ಕೆ. ನಂಜುಂಡಪ್ಪ, ಸಿದ್ಧಗಂಗಮ್ಮ ಸಿದ್ಧರಾಮಣ್ಣ, ಕೋರಿ ಮಂಜುನಾಥ್, ಟಿ.ಬಿ. ಹರೀಶ್, ಡಿ.ಜೆ. ಶಶಿಧರನ್, ಟಿ.ಜೆ. ಸಿದ್ಧಲಿಂಗಸ್ವಾಮಿ, ಜಿ.ಕೆ.ಸ್ವಾಮಿ, ಕೆ.ಎಸ್. ಸಿದ್ಧಲಿಂಗಪ್ಪ, ಡಾ.ಎಸ್.ಪರಮೇಶ್, ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಬಿ.ಎಸ್. ಮಂಜುನಾಥ್, ಟಿ.ಸಿ.ಓಹಿಲೇಶ್ವರ್, ಕೆ. ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
